ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರ ಸಂಭ್ರಮದ ರಂಜಾನ್ ಮಾಸಾಚರಣೆ

Last Updated 15 ಜೂನ್ 2018, 13:34 IST
ಅಕ್ಷರ ಗಾತ್ರ

ಮಾನ್ವಿ: ಪಟ್ಟಣದಲ್ಲಿ ಮುಸ್ಲಿಮರು ಪ್ರತಿ ವರ್ಷದಂತೆ ರಂಜಾನ್‌ ಹಬ್ಬವನ್ನು ಸಡಗರ, ಸಂಭ್ರಮಗಳಿಂದ ಆಚರಿಸುತ್ತಿದ್ದಾರೆ.

ಹಿರಿಯರು, ಮಕ್ಕಳೆಲ್ಲರೂ ಪವಿತ್ರವಾದ ಈ ತಿಂಗಳಲ್ಲಿ ಪ್ರತಿ ದಿನ ಉಪವಾಸ ವ್ರತ ಕೈಗೊಳ್ಳುವ ಮೂಲಕ ಭಕ್ತಿ ಭಾವ ಸಮರ್ಪಿಸುವರು. ಪಟ್ಟಣದ ಪುರಾತನ, ಜಾಮಿಯಾ ಮಸೀದಿ, ಮಸ್ಜೀದ್‌–ಎ–ಹಸನಯೀನ್‌, ಖುಬಾ ಮಸ್ಜೀದ್‌ ಸೇರಿದಂತೆ ಎಲ್ಲಾ ಮಸೀದಿಗಳು 1 ತಿಂಗಳಿನಿಂದ ವರ್ಣಮಯ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

ಪ್ರತಿ ದಿನ ಸಂಜೆ ಸಾಮೂಹಿಕ ಪ್ರಾರ್ಥನೆ ಸೇರಿದಂತೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪವಿತ್ರ ರಂಜಾನ್‌ ಹಬ್ಬದ ನಿಮಿತ್ತ ವಿಶೇಷ ಉಪನ್ಯಾಸ ಜರುಗುತ್ತವೆ. ಹಬ್ಬದ ಪ್ರಯುಕ್ತ ಬಡವರಿಗೆ ದವಸ ಧಾನ್ಯ, ಬಟ್ಟೆಗಳನ್ನು ದಾನ ಮಾಡಲು ಪೂರ್ವ ತಯಾರಿ ಮಾಡಿರುತ್ತಾರೆ.

ಉಪವಾಸ ವ್ರತ ಬಿಡುವ ವೇಳೆ ಬಂಧುಗಳು ಮತ್ತು ಸ್ನೇಹಿತರನ್ನು ತಮ್ಮ ಮನೆಗೆ ಆಹ್ವಾನಿಸುವ ಇಫ್ತಾರ್‌ ಕೂಟಗಳು ಇಲ್ಲಿ ನಡೆಯುತ್ತವೆ. ವಿವಿಧ ಧರ್ಮಕ್ಕೆ ಸೇರಿದ ರಾಜಕೀಯ ಪಕ್ಷಗಳ ಗಣ್ಯರು, ಸಂಘ ಸಂಸ್ಥೆಗಳ ಮುಖಂಡರು ಆಯೋಜಿಸುವ ಇಫ್ತಾರ್‌ ಕೂಟಗಳು ಸೌಹಾರ್ದ ಹಾಗೂ ಪರಸ್ಪರ ಬಾಂಧವ್ಯದ ಪ್ರತೀಕವಾಗಿವೆ.

ರಂಜಾನ್‌ ಮಾಸದಲ್ಲಿ ಬಟ್ಟೆ ಅಂಗಡಿಗಳು, ಬಗೆ ಬಗೆಯ ಖಾದ್ಯ ತಯಾರಿಸುವ ಹೋಟೆಲ್‌ಗಳು, ಹಣ್ಣಿನ ಅಂಗಡಿಗಳಲ್ಲಿ ಮಾರಾಟದ ಭರಾಟೆ ಜೋರಾಗಿದೆ. ಕೆಲವು ಹೋಟೆಲ್‌ ಮತ್ತು ಅಂಗಡಿಗಳು ವಿದ್ಯುತ್‌ ದೀಪಾಲಂಕಾರದಿಂದ ಜನರ ಗಮನ ಸೆಳೆಯುತ್ತಿವೆ.

ರಂಜಾನ್‌ ಮಾಸವು ಅಂತ್ಯವಾಗುವ ಹಬ್ಬದ ಕೊನೆಯ ದಿನದಂದು ಎಲ್ಲಾ ಮುಸ್ಲಿಮರು ಪಟ್ಟಣದ ಕರಡಿಗುಡ್ಡ ರಸ್ತೆ ಸಮೀಪ ಇರುವ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಾರೆ.

ಹಲೀಮಾ ಪ್ರಿಯರ ಹೋಟೆಲ್‌

ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದ ಹತ್ತಿರ ಚಾವೂಷ್‌ ಹೋಟೆಲ್‌, ರಂಜಾನ್‌ ಮಾಸದಲ್ಲಿ ಮುಸ್ಲಿಮರನ್ನು ಕೈ ಬೀಸಿ ಕರೆಯುತ್ತದೆ. ಬಹುತೇಕರು ಇಷ್ಟಪಡುವ ಖಾದ್ಯ ಹಲೀಮಾ ಮಾರಾಟಕ್ಕೆ ಅದು ಖ್ಯಾತಿ ಪಡೆದಿದೆ.

ಪಟ್ಟಣದಲ್ಲಿ ಹಲೀಮಾ ದೊರೆಯುವ ಏಕೈಕ ಸ್ಥಳ ಚಾವೂಷ್‌ ಹೋಟೆಲ್‌. ರಂಜಾನ್ ತಿಂಗಳಲ್ಲಿ ಮಾತ್ರ ಈ ಹೋಟೆಲ್‌ನಲ್ಲಿ ಹಲೀಮಾ ದೊರೆಯುತ್ತದೆ. ರುಚಿಕರವಾದ ಮತ್ತು ಪೌಷ್ಟಿಕಾಂಶಗಳನ್ನು ಹೊಂದಿರುವ ಹಲೀಮಾ ಎಲ್ಲರಿಗೂ ಪ್ರಿಯವಾಗಿಬಿಟ್ಟಿದೆ.

‘ಪ್ರತಿ ದಿನ ಹಲೀಮಾ ತಯಾರಿಕೆಗೆ ಏಳು ಗಂಟೆಗಳ ಸಿದ್ಧತೆ ಬೇಕು. ಸಂಜೆ ವೇಳೆಗೆ ಸಿದ್ಧಪಡಿಸಿ ಗ್ರಾಹಕರಿಗೆ ಒದಗಿಸುತ್ತೇವೆ’ ಎಂದು ಚಾವೂಷ್‌ ಹೋಟೆಲ್‌ ಮಾಲೀಕ ರಿಯಾಜ್‌ ಹುಸೇನ್‌ ಹೇಳುತ್ತಾರೆ.

20 ವರ್ಷಗಳಿಂದ ರಂಜಾನ್‌ ತಿಂಗಳಲ್ಲಿ ನಮ್ಮ ಹೋಟೆಲ್‌ನಲ್ಲಿ ಹಲೀಮಾ ತಯಾರಿಸಿ ಮಾರಾಟ ಮಾಡುತ್ತಿದ್ದೇವೆ.  ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ರಿಯಾಜ್‌ ಹುಸೇನ್‌, ಚಾವೂಷ್‌ ಹೋಟೆಲ್‌ ಮಾಲೀಕ

–ಬಸವರಾಜ ಭೋಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT