ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನವಮಿ ಸಾಂಕೇತಿಕ ಆಚರಣೆ

Last Updated 21 ಏಪ್ರಿಲ್ 2021, 19:42 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಉಲ್ಬಣಗೊಂಡಿರುವ ಕಾರಣ ನಗರದಲ್ಲಿ ರಾಮನವಮಿಯ ಉತ್ಸಾಹ ಕಳೆಗುಂದಿತ್ತು. ರಾಮ ಭಕ್ತರು ಮನೆ ಮನೆಯಲ್ಲೇ ರಾಮನ ಜಪ ಮಾಡಿದರು. ದೇಗುಲಗಳಲ್ಲಿ ಸಾಂಕೇತಿಕ ಆಚರಣೆ ನಡೆಯಿತು.

ಮನೆಗಳ ಮುಂದೆ ರಾಮನ ಚಿತ್ರವನ್ನು ರಂಗೋಲಿ ಮೂಲಕ ಚಿತ್ರಿಸಿ ಬಣ್ಣ ಹಚ್ಚಿ, ಮನೆಯೊಳಗೆ ಪೂಜೆ ಪುನಸ್ಕಾರಗಳನ್ನು ಮಾಡಿ ರಾಮಭಕ್ತರು ಸಂಭ್ರಮಿಸಿದರು.

ಶ್ರೀರಾ­ಮನ ಮಂದಿರಗಳಲ್ಲಿ ಮಾತ್ರವ­ಲ್ಲದೇ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಸಣ್ಣದಾಗಿ ಅಭಿಷೇಕ, ಪೂಜೆ ನಡೆಸಲಾಯಿತು. ಭಕ್ತರಿಗೆ ಪ್ರವೇಶ ಇಲ್ಲದ ಕಾರಣ ಸಾಮೂಹಿಕ ಪಾನಕ, ಕೋಸಂಬರಿಗಳ ವಿತರಣೆ ಇರಲಿಲ್ಲ. ಕೆಲವು ಗಲ್ಲಿಗಳಲ್ಲಿ ಎಂದಿನಂತೆ ಯುವಕರು ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.

ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಾಲಯ, ವಿದ್ಯಾಪೀಠ ವೃತ್ತ, ಗಿರಿನಗರ, ರಾಗಿಗುಡ್ಡ ಆಂಜನೇಯ­ಸ್ವಾಮಿ ದೇವಸ್ಥಾನ, ಹನುಮಂತನ­ಗರದ ರಾಮಾಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಸಾಂಕೇತಿಕ ಪೂಜೆಗಳು ನಡೆದವು. ಭಕ್ತರಿಗೆ ಪ್ರವೇಶ ಇರಲಿಲ್ಲ. ಕೆಲ ದೇಗುಲಗಳಲ್ಲಿ ಭಕ್ತರಿಗೆ ಪ್ರವೇಶ ನೀಡದಂತೆ ಪೊಲೀಸರು ಕಾವಲಿದ್ದರು.

ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ 135ನೇ ವರ್ಷದ ಬ್ರಹ್ಮ ರಥೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು. ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷ ಅರ್ಚಕರು, ಟ್ರಸ್ಟಿಗಳು ಮಾತ್ರ ಧಾರ್ಮಿಕ ಆಚರಣೆಗಳನ್ನು ಕೈಗೊಂಡಿದ್ದರು. ಗುರುವಾರ ಗಾಳಿ ಆಂಜನೇಯ ಸ್ವಾಮಿಯ ತೇರು ಎಳೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಅರ್ಚಕರು ತಿಳಿಸಿದ್ದಾರೆ.

ಇಸ್ಕಾನ್ ದೇವಸ್ಥಾನದಲ್ಲಿ ಕೃಷ್ಣ, ಬಲರಾಮರ ಮೂಲ ವಿಗ್ರಹಗಳಿಗೆ ರಾಮ, ಲಕ್ಷ್ಮಣ ಅಲಂಕಾರ ಮತ್ತು ಶ್ರೀರಾಧಾ ಕೃಷ್ಣಚಂದ್ರ ವಿಗ್ರಹಗಳಿಗೆ ಸೀತಾರಾಮ ಅಲಂಕಾರ ಮಾಡಲಾಗಿತ್ತು. ಸಂಜೆ ರಾಮ ತಾರಕ ಹೋಮ ನೆರವೇರಿಸಲಾಯಿತು. ಶಯನ ಆರತಿ ಮತ್ತು ಶಯನ ಪಲ್ಲಕ್ಕಿಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಉತ್ಸವವನ್ನು ಭಕ್ತರು ಆನ್ಲೈನ್ ಮೂಲಕ ವೀಕ್ಷಿಸಿದರು.

ಸನಾತನ ಸಂಸ್ಥೆಯಿಂದ ಶ್ರೀರಾಮ ನಾಮಜಪವನ್ನು ಆನ್‌ಲೈನ್‌ನಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಚಂದ್ರಮೋಗೇರ್ ಮಾತನಾಡಿ, ‘ಸದ್ಯದ ಸಂಕಟದ ಕಾಲವನ್ನು ಎದುರಿಸಲು ಮತ್ತು ಆಧ್ಯಾತ್ಮಿಕ ಪ್ರಗತಿಗಾಗಿ ಶೀಘ್ರವೇ ರಾಮರಾಜ್ಯದ ನಿರ್ಮಾಣವಾಗಲಿ ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಈ ಜಪಯಜ್ಞ ಆಯೋಜನೆ ಮಾಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT