ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೇಶ್ವರ ಭಾರತಿ ಚಾತುರ್ಮಾಸ್ಯ ಆರಂಭ

Last Updated 16 ಜುಲೈ 2019, 19:13 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತತ್ವವನ್ನು ಉಳಿಸಲು ಆಚಾರ್ಯ ವಿಷ್ಣುಗುಪ್ತ ಚಾಣಕ್ಯನ ಹೆಸರಿನಲ್ಲಿ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.

ರಾಮಾಯಣ ಚಾತುರ್ಮಾಸ್ಯ ವ್ರತದ ಪ್ರಥಮ ದಿನವಾದ ಗುರುಪೂರ್ಣಿಮೆಯಂದು ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

‘ಪರಮಶ್ರೇಷ್ಠ ಗುರು ಹಾಗೂ ಸ್ವಾರ್ಥರಹಿತ ಜೀವನಕ್ಕೆ ಚಾಣಕ್ಯ ಉದಾಹರಣೆ. ಹಾಗಾಗಿ ಚಾಣಕ್ಯನ ಹೆಸರಿನಲ್ಲಿ ಪ್ರಥಮ ವಿಶ್ವವಿದ್ಯಾಪೀಠ ಆರಂಭಿಸಲಾಗುತ್ತಿದೆ.ಭಾರತದ ಗತವೈಭವ ಮರುಕಳಿಸುವಂತೆ ಮಾಡುವುದು ವಿಶ್ವವಿದ್ಯಾಪೀಠದ ಹಿಂದಿನ ಉದ್ದೇಶವಾಗಿದ್ದು,ಚಂದ್ರಗುಪ್ತನಂಥ ಧರ್ಮ ಹಾಗೂ ಸಂಸ್ಕೃತಿ ನಿಷ್ಠ ಧರ್ಮಯೋಧರನ್ನು ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

‘ನೂತನ ವಿಶ್ವವಿದ್ಯಾಪೀಠವನ್ನು ಶಂಕರಾಚಾರ್ಯರಿಗೆ ಸಮರ್ಪಣೆ ಮಾಡಲಾಗುತ್ತದೆ. ಈ ವಿಶಿಷ್ಟ ಪರಿಕಲ್ಪನೆ ಸಾಕಾರಗೊಳ್ಳಲು ಸಮಾಜದ ಕೊಡುಗೆ ಅಗತ್ಯ’ ಎಂದರು.

‘ಧರ್ಮ, ದೇಶ ಹಾಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿ, ಪ್ರಸಾರ ಮಾಡಬೇಕು.ಗುರುವಿನ ಸಂಪರ್ಕಕ್ಕೆ ಸ್ಮರಣೆಯೇ ಮಾರ್ಗವಾಗಿದೆ. ಗುರುಪೂರ್ಣಿಮೆಯು ಸ್ಮರಣೆಗೆ ಮಹಾಪರ್ವ ದಿನವಾಗಿದ್ದು, ಗುರುವಿಲ್ಲದ ಬದುಕು ನಿರರ್ಥಕವಾಗುತ್ತದೆ. ಆದ್ದರಿಂದ ಸಕಾಲದಲ್ಲಿ ಸರಿ ನಿರ್ಣಯ ಕೈಗೊಳ್ಳಲು ಗುರುಕೃಪೆ ಅಗತ್ಯ. ಶಿಷ್ಯ ಕೋಟಿಗೆ ಮಾರ್ಗದರ್ಶನ ನೀಡುವುದು ಕೂಡ ಗುರು ಪರಂಪರೆ’ ಎಂದು ಬಣ್ಣಿಸಿದರು.

ತರಬೇತಿ ಕೇಂದ್ರ ಆರಂಭಿಸಿ:ನಿವೃತ್ತ ಐಎಎಸ್ ಅಧಿಕಾರಿ ವೇದಮೂರ್ತಿ ಮಾತನಾಡಿ, ‘ಧರ್ಮದ ಜತೆಗೆ ಸಮಾಜದ ಅಭಿವೃದ್ಧಿ, ಸಂಸ್ಕೃತಿ ರಕ್ಷಣೆ ಹಾಗೂ ಸಾಮಾಜಿಕ ಮೌಲ್ಯಗಳ ಉನ್ನತಿಗೆ ಮಠದ ಜತೆಗೆ ಗುರುಗಳು ಶ್ರಮಿಸುತ್ತಿದ್ದಾರೆ. ಭ್ರಷ್ಟಾಚಾರದಿಂದ ಮೇಧಾವಿಗಳು, ದುರ್ಬಲ ವರ್ಗದವರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಮಠದ ವತಿಯಿಂದ ವೈದ್ಯಕೀಯ ಹಾಗೂ ವೃತ್ತಿಪರ ಕಾಲೇಜು ಆರಂಭಿಸಿದರೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ,ನಾಗರಿಕ ಸೇವೆಗೆ ವಿಶೇಷವಾದ ತರಬೇತಿ ಕೇಂದ್ರ ಆರಂಭಿಸಬೇಕು. ನದಿ ಜೋಡಣೆ ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದರು.

ಪುನರ್ವಸು ಭವನ ಉದ್ಘಾಟನೆ: ಚಾತುರ್ಮಾಸ್ಯದ ಅಂಗವಾಗಿ ಶ್ರೀಕರಾರ್ಚಿತ ಪೂಜೆ, ಶ್ರೀವ್ಯಾಸಪೂಜೆ ನಡೆಯಿತು. ಪುನರ್ವಸು ಭವನವನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT