ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂ ಕಾರ್ಯಕ್ಷಮತೆ: ಮೊದಲ ಹಂತದ ಪರಿಶೀಲನೆ

Last Updated 5 ಮಾರ್ಚ್ 2018, 20:16 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕಾರ್ಯಕ್ಷಮತೆಯ ಪ್ರಥಮ ಹಂತದ ಪರಿಶೀಲನೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆಸಲಾಯಿತು.

ಇವಿಎಂಗಳ ದುರ್ಬಳಕೆ ಬಗ್ಗೆ ವಿರೋಧ ಪಕ್ಷಗಳು ಇನ್ನೂ ಸಂಶಯ ಹೊಂದಿರುವುದರಿಂದ ಪ್ರತಿ ಯಂತ್ರವನ್ನೂ ಕೂಲಂಕಷವಾಗಿ ಪರಿಶೀಲಿಸಬೇಕು. ಯಂತ್ರಗಳಲ್ಲಿ ಲೋಪವಿದ್ದರೆ ಪತ್ತೆ ಮಾಡಬೇಕು ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಾಗಾಗಿ, ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಯಂತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ಮತಯಂತ್ರ (ಬ್ಯಾಲೆಟ್‌), ನಿಯಂತ್ರಣ ಘಟಕ (ಕಂಟ್ರೋಲ್‌ ಯುನಿಟ್‌) ಮತ್ತು ಖಾತರಿ ಯಂತ್ರಗಳು (ವಿವಿಪಿಎಟಿ– ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್) ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಾತರಿಪಡಿಸಿಕೊಳ್ಳಲಾಯಿತು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

‘ಪೂರೈಕೆಯಾದ ಮತಯಂತ್ರಗಳಲ್ಲಿ ಶೇ 1ರಷ್ಟು ಯಂತ್ರಗಳಲ್ಲಿ 1,200 ಮತ, ಶೇ 2ರಷ್ಟು ಯಂತ್ರಗಳಲ್ಲಿ 1,000 ಮತ ಹಾಗೂ ಮತ್ತೆ ಶೇ 2ರಷ್ಟು ಯಂತ್ರಗಳಲ್ಲಿ 500 ಅಣಕು ಮತಗಳನ್ನು ನಮೂದಿಸಿ, ಅವುಗಳ ಮುದ್ರಿತ ಪ್ರತಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತೋರಿಸಲಿದ್ದೇವೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಅಣಕು ಮತದಾನಕ್ಕೆ ಯಂತ್ರಗಳನ್ನು ಆಯ್ಕೆ ಮಾಡಲಿದ್ದಾರೆ. ಸದ್ಯಕ್ಕೆ ಅವುಗಳ ಹಿಂದಿನ ದಾಖಲೆಗಳನ್ನು ಅಳಿಸುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದರು.

ಈ ಬಾರಿಯ ಚುನಾವಣೆಯಲ್ಲಿ ವಿವಿಪಿಎಟಿ ಒಳಗೊಂಡ ಇವಿಎಂ ಬಳಸಲಾಗುತ್ತಿದೆ. ಮತದಾರರು ತಾವು ಬಯಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಮತ ಚಲಾವಣೆ ಆಗಿದೆಯೇ ಎಂಬುದನ್ನು ಖಾತರಿಪ‍ಡಿಸಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ. ಮತ ಚಲಾಯಿಸಿದ ಬಳಿಕ ಅದರ ಪ್ರಿಂಟ್‌ ಔಟ್‌ ತೆಗೆದು ನೋಡಬಹುದು. ವಿಶ್ವದಲ್ಲಿ ಬೇರೆ ಎಲ್ಲೂ ಈ ವ್ಯವಸ್ಥೆ ಇಲ್ಲ. ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಈ ವ್ಯವಸ್ಥೆ ಬಳಸಲಾಗಿತ್ತು. ಹಿಮಾಚಲ ಪ್ರದೇಶ, ಗುಜರಾತ್‌ ವಿಧಾನಸಭಾ ಚುನಾವಣೆಗಳಲ್ಲೂ ಬಳಸಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT