ಉಪಮೇಯರ್ ರಮೀಳಾ ನಿಧನ; ಮೌನದ ಮನೆಯಾದ ಸ್ಫೂರ್ತಿ ಸಮನ್ವಿತಾ...

7

ಉಪಮೇಯರ್ ರಮೀಳಾ ನಿಧನ; ಮೌನದ ಮನೆಯಾದ ಸ್ಫೂರ್ತಿ ಸಮನ್ವಿತಾ...

Published:
Updated:

ಬೆಂಗಳೂರು: ಗೋವಿಂದರಾಜನಗರದ ‘ಸ್ಫೂರ್ತಿ ಸಮನ್ವಿತಾ’ ಮನೆಯಲ್ಲಿ ಶುಕ್ರವಾರ ದುಃಖ ಮಡುಗಟ್ಟಿತ್ತು. ಸದಾ ತಮ್ಮ ಕಷ್ಟ ಆಲಿಸುತ್ತಿದ್ದ ಆ ಮನೆಯ ಒಡತಿ ರಮೀಳಾ ಉಮಾಶಂಕರ್ ಹಠಾತ್‌ ನಿರ್ಗಮನ ಕಾವೇರಿಪುರ ವಾರ್ಡ್‌ ಜನರನ್ನು ನೋವಿನ ಕಡಲಲ್ಲಿ ಮುಳುಗಿಸಿತ್ತು.

ರಮೀಳಾ ಅವರ ಪತಿ ಉಮಾಶಂಕರ್, ಹಾಗೂ ಅವರ ಪುತ್ರ–ಪುತ್ರಿ ಆಘಾತಕ್ಕೆ ಒಳಗಾಗಿದ್ದರು. 

ಸೆ. 28ರಂದು ರಮೀಳಾ ಉಪಮೇಯರ್‌ ಆಗಿ ಆಯ್ಕೆಯಾಗಿದ್ದರು. ಅ. 3ರಂದು ತಮ್ಮ ಕಚೇರಿಯಲ್ಲಿ ಪೂಜೆ ನೆರವೇರಿಸಿದ್ದರು. ವಾರದೊಳಗೆ ಅವರು ಅಗಲಿರುವುದನ್ನು ಅಲ್ಲಿದ್ದವರಿಗೆ ಊಹಿಸಲೂ ಅಸಾಧ್ಯವಾಗಿತ್ತು. 

‘ರಮೀಳಾ ಅವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಉಪಮೇಯರ್‌ ಆದಾಗಿನಿಂದ ಅವಿರತವಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಸಹಜವಾಗಿ ಬಳಲಿದ್ದರು’ ಎಂದು ಕುಟುಂಬದ ಸದಸ್ಯರು ಹೇಳಿದರು.   

ದಿನವಿಡೀ ದಣಿದಿದ್ದ ಬಿಬಿಎಂಪಿ ಉಪಮೇಯರ್‌ ರಮೀಳಾ
ಗುರುವಾರ ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಟಿದ್ದ ಉಪಮೇಯರ್‌ ರಮೀಳಾ ಉಮಾಶಂಕರ್‌ ಸಂಜೆವರೆಗೂ ಒಂದಿಲ್ಲೊಂದು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ದಿನವಿಡೀ ಬಿಡುವಿಲ್ಲದಿದ್ದುದರಿಂದ ಆಯಾಸಗೊಂಡಿದ್ದರು.

ಮುಂಜಾನೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು ಕೆ.ಆರ್‌.ಮಾರುಕಟ್ಟೆಗೆ ಭೇಟಿ ನೀಡಿದ್ದರು. ಸುಮಾರು ಮೂರು ಗಂಟೆ ರಮೀಳಾ ಅವರೂ ಸಚಿವರ ಜೊತೆ ಮಾರುಕಟ್ಟೆ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದರು.

ಆ ಬಳಿಕ ‘ನಮ್ಮ ಮೆಟ್ರೊ’ ಆರು ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೊತೆ ಭಾಗವಹಿಸಿದ್ದರು. ಮುಖ್ಯಮಂತ್ರಿ ಜೊತೆ ನಾಗಸಂದ್ರದವರೆಗೂ ಮೆಟ್ರೊದಲ್ಲಿ ಪ್ರಯಾಣಿಸಿದ್ದರು.

ಮಳೆಯಿಂದಾಗಿ ಮರ ಬಿದ್ದು ತಲೆಗೆ ಏಟಾಗಿದ್ದ ಮಹಿಳೆಯೊಬ್ಬರಿಗೆ ₹ 2 ಲಕ್ಷ ಪರಿಹಾರದ ಚೆಕ್‌ ವಿತರಿಸುವ ಸಲುವಾಗಿ ಶಾಸಕ ದಿನೇಶ್‌ ಗುಂಡೂರಾವ್‌ ಅವರ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

ಬಳಿಕ ಮೇಯರ್‌ ಗಂಗಾಂಬಿಕೆ ಅವರ ಜೊತೆ ಪಾಲಿಕೆಯ ನಿಯಂತ್ರಣಾ ಕೊಠಡಿಯಲ್ಲಿ ಕುಳಿತು ಮಳೆ ಹಾನಿ ಬಗ್ಗೆ ವಿವರ ಪಡೆದಿದ್ದರು.

‘ರಮೀಳಾ ಅವರು ಪ್ರತಿನಿಧಿಸುವ ಕಾವೇರಿಪುರ ವಾರ್ಡ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಎರಡು ಮೂರು ದೂರುಗಳಿದ್ದವು. ಅವುಗಳನ್ನು ಪರಿಹರಿಸುವುದಕ್ಕೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಗಂಗಾಂಬಿಕೆ.

’ಅವರು ನನಗೆ ಎಲ್ಲರೀತಿಯಲ್ಲೂ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದರು. ನಾನು ಮಂಗಳವಾರ ರಾತ್ರಿ ಕಾಮಗಾರಿ ಪರಿಶೀಲನೆ ಸಲುವಾಗಿ ನಗರದ ವಿವಿಧ ಪರಿಶೀಲನೆಗೆ ಭೇಟಿ ಕೊಟ್ಟಾಗ ರಾತ್ರಿ 1 ಗಂಟೆವರೆಗೂ ಅವರು ನನ್ನ ಜೊತೆಯಲ್ಲಿದ್ದರು’ ಎಂದು ಮೇಯರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪಮೇಯರ್‌ ಆದ ಬಳಿಕ ನಿತ್ಯವೂ ಬೆಳಿಗ್ಗೆ 7 ಗಂಟೆ ಒಳಗೆ ಮನೆಯಿಂದ ಹೊರಡುತ್ತಿದ್ದರು. ಮನೆ ಸೇರುವಾಗ ರಾತ್ರಿ ಆಗುತ್ತಿತ್ತು. ಗುರುವಾರವೂ ನಾವು ಮನೆ ತಲುಪುವಾಗ ರಾತ್ರಿ 7.30 ದಾಟಿತ್ತು’ ಎಂದು ರಮೀಳಾ ಅವರ ಆಪ್ತ ಸಹಾಯಕ ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೋರಾಟದಿಂದ ಒಲಿದ ಪಟ್ಟ
ಉಪಮೇಯರ್‌ ಪಟ್ಟವೂ ರಮೀಳಾ ಅವರಿಗೆ ಅನಾಯಾಸವಾಗಿ ಒಲಿದಿರಲಿಲ್ಲ. ಈ ಬಾರಿ ಈ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಭದ್ರೇಗೌಡ ಅವರೂ ಈ ಹುದ್ದೆಯ ಆಕಾಂಕ್ಷಿಯಾಗಿದ್ದರು. ಜೊತೆಗೆ ಲಗ್ಗೆರೆ ಕಾರ್ಪೊರೇಟರ್‌ ಮಂಜುಳಾ ನಾರಾಯಣಸ್ವಾಮಿ ಅವರೂ ಪೈಪೋಟಿ ಒಡ್ಡಿದ್ದರು. ಈ ಮೂವರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. ಕೊನೆಗೆ ಪಕ್ಷದ ವರಿಷ್ಠರು ರಮೀಳಾ ಅವರನ್ನೇ ಆಯ್ಕೆ ಮಾಡಿದ್ದರು.

ತಮ್ಮನ್ನು ಅಭ್ಯರ್ಥಿಯನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಮಂಜುಳಾ ನಾರಾಯಣಸ್ವಾಮಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಉಪಮೇಯರ್‌ ಆಯ್ಕೆಗೆ ಮತದಾನ ನಡೆದಾಗ ಮಂಜುಳಾ ಮತ ಚಲಾಯಿಸದೆಯೇ ಪಾಲಿಕೆ ಸಭೆಯಿಂದ ಹೊರನಡೆದಿದ್ದರು.

ರಮೀಳಾ ಅವರು 2017ರಲ್ಲೂ ಉಪಮೇಯರ್‌ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ವರಿಷ್ಠರು ಪದ್ಮಾವತಿ ನರಸಿಂಹ ಮೂರ್ತಿ ಅವರನ್ನು ಆಯ್ಕೆ ಮಾಡಿದ್ದರು.

ಪ್ರಸ್ತುತ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾವೇರಿಪುರ ವಾರ್ಡ್‌ನ ಕಾರ್ಪೊರೇಟರ್‌ ಆಗಿದ್ದ ರಮೀಳಾ ಡಿಪ್ಲೊಮಾ ಪದವೀಧರೆ. ದಾಬಸ್‌ಪೇಟೆಯ ವಿದ್ಯಾಸ್ಪೂರ್ತಿ ಇಂಟರ್‌ನ್ಯಾಷನಲ್‌ ಅಕಾಡೆಮಿಯ ನಿರ್ದೇಶಕರಾಗಿದ್ದರು.

ಅವರಿಗೆ ಪತಿ ಉಮಾಶಂಕರ್‌ (ಕೊಟ್ಟಿಗೆಪಾಳ್ಯ ವಾರ್ಡ್‌ನ ಮಾಜಿ ಕಾರ್ಪೊರೇಟರ್‌), ಮಗ ಯು.ವರುಣ್‌ ಕುಮಾರ್‌ ಹಾಗೂ ಮಗಳೂ ಭೂಮಿಕಾರಾಣಿ (ಪಿಯುಸಿ ವಿದ್ಯಾರ್ಥಿನಿ) ಇದ್ದಾರೆ.

ಅಧಿಕಾರದಲ್ಲಿದ್ದಾಗ ಮೃತಪಟ್ಟ 2ನೇಯವರು

ಬೆಂಗಳೂರು ಮಹಾನಗರ ಪಾಲಿಕೆ ಇದ್ದಾಗ 1965ರಲ್ಲಿ ವಿ.ತಮ್ಮಯ್ಯ ಎಂಬುವವರು 17ನೇ ಉಪಮೇಯರ್‌ ಆಗಿ ಅಧಿಕಾರದಲ್ಲಿದ್ದಾಗಲೇ ನಿಧನರಾಗಿದ್ದರು. ನಂತರ ನಡೆದ ಚುನಾವಣೆಯಲ್ಲಿ ಆ ಸ್ಥಾನಕ್ಕೆ ಡಿ.ಭಾಸ್ಕರನ್‌ ಅವರು ಆಯ್ಕೆಯಾಗಿದ್ದರು.  

*
ರಜೆ ಘೋಷಣೆ: ಉಪಮೇಯರ್‌ ರಮೀಳಾ ಉಮಾಶಂಕರ್‌ (44) ಅವರ ಅಕಾಲಿಕ ನಿಧನದ ಕಾರಣ ಪಾಲಿಕೆ ಕಚೇರಿಗಳಿಗೆ ರಜೆ ನೀಡಲಾಗಿದೆ. ಮ್ಯೂಸಿಯಂ ರಸ್ತೆಯ ಗುಡ್‌ಶೆಫರ್ಡ್‌ ಕಾನ್ವೆಂಟ್‌ ಸಭಾಂಗಣದಲ್ಲಿ ಪಾಲಿಕೆ ವತಿಯಿಂದ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ಅಂತ್ಯಕ್ರಿಯೆ: ರಮೀಳಾ ಅವರ ಅಂತ್ಯಕ್ರಿಯೆ ಮಾಗಡಿ ಮುಖ್ಯರಸ್ತೆಯ ಕಡಬಗೆರೆ ಕ್ರಾಸ್‌ ಬಳಿಯ ಕಿತ್ತನಹಳ್ಳಿಯಲ್ಲಿ ಮಧ್ಯಾಹ್ನ 2.30ಕ್ಕೆ ನಡೆಯಲಿದೆ ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದರು.

ರಮೀಳಾ ಅಕಾಲಿಕ ನಿಧನದ ಹಿನ್ನಲೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ,  ಮಾಜಿ ಮೇಯರ್ ಸಂಪತ್ ರಾಜ್‌, ಕಾಂಗ್ರೆಸ್‌ ಮುಖಂಡ ರಾಮಲಿಂಗಾ ರೆಡ್ಡಿ, ಬಿಬಿಎಂ ಆಯುಕ್ತ ಮಂಜುನಾಥ್ ಪ್ರಸಾದ್, ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್, ಡಿಸಿಪಿ ರವಿ ಡಿ. ಚೆನ್ನಣ್ಣನವರ್, ದಿವಂಗತ ಡಿ.ಕೆ ರವಿ ಪತ್ನಿ ಕುಸುಮಾ, ಬಿಜೆಪಿ ಶಾಸಕ ಆರ್‌. ಅಶೋಕ್, ಶಾಸಕ ಸೊಮಣ್ಣ  ಅಂತಿಮ‌ ದರ್ಶನ ಪಡೆದರು.


ರಮೀಳಾ ಅವರ ಪತಿ ಉಮಾಶಂಕರ್, ಮಗ ವರುಣ್ ಉಮಾಶಂಕರ್ ಮತ್ತು ಮಗಳು ಭೂಮಿಕಾ ರಾಣಿ

ಯಾರು ಹೊಸ ಉಪಮೇಯರ್‌?
ರಮೀಳಾ ಉಮಾಶಂಕರ್‌ ನಿಧನದಿಂದ ತೆರವಾದ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. 

ನ. 12ರಂದು ಬಿಬಿಎಂಪಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಅಂದೇ ಉಪಮೇಯರ್‌ ಆಯ್ಕೆಯೂ ನಡೆಯಬೇಕು ಎಂಬುದಾಗಿ ಪ್ರಾದೇಶಿಕ ಆಯುಕ್ತರು ಸೂಚಿಸಿದ್ದಾರೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.

‘ಉಪಮೇಯರ್‌ ಹುದ್ದೆ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದೆ. ಹೀಗಾಗಿ ಆಕಾಂಕ್ಷಿಗಳೂ ಸಾಕಷ್ಟು ಇದ್ದಾರೆ. ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಪಕ್ಷದ ವರಿಷ್ಠರು ಒಂದೆರಡು ದಿನಗಳಲ್ಲಿ ನಿರ್ಧರಿಸಲಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಹೇಳಿದರು. 

ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸುವ ಇರಾದೆಯಲ್ಲಿಲ್ಲ. ಈಗ ಜೆಡಿಎಸ್‌ ಒಳಗೆ ಆಯ್ಕೆ ಅಂತಿಮವಾಗಬೇಕಿದೆ. ಈ ಪೈಕಿ ನೇತ್ರಾ ನಾರಾಯಣ್‌, ಭದ್ರೇಗೌಡ ಮತ್ತು ರಾಜಶೇಖರ್‌ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿದೆ.  ‘ಹಲವರು ಆಕಾಂಕ್ಷಿಗಳೇನೋ ಹೌದು. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಕೆಲವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಲು ನಿರ್ಧರಿಸಿದ್ದೇವೆ’ ಎಂದು ಶರವಣ ಹೇಳಿದರು.

ರಮೀಳಾ ಅವರ ಕ್ಷೇತ್ರವಾದ ಕಾವೇರಿಪುರ ವಾರ್ಡ್‌ ಸದಸ್ಯ ಸ್ಥಾನಕ್ಕೆ ಇನ್ನು 6 ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ. ಸ್ಪರ್ಧೆ ಒಡ್ಡಲು ಬಿಜೆಪಿಯೂ ಸಿದ್ಧಗೊಳ್ಳುತ್ತಿದೆ ಎಂದು ಪಾಲಿಕೆಯ ಬಿಜೆಪಿ ಸದಸ್ಯರೊಬ್ಬರು ಹೇಳಿದರು. 

ಪ್ರಕ್ರಿಯೆ ಹೀಗಿದೆ: ರಮೀಳಾ ಅವರ ನಿಧನದಿಂದ ಸ್ಥಾನ ತೆರವಾಗಿರುವ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ಪಾಲಿಕೆಯಿಂದ ವರದಿ ಕಳುಹಿಸಬೇಕು. ಆ ವರದಿ ಪರಿಶೀಲಿಸಿ ಚುನಾವಣಾ ದಿನಾಂಕವನ್ನು ಅವರು ನಿರ್ಧರಿಸುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಇನ್ನಷ್ಟೇ ನಡೆಯಬೇಕಿವೆ ಎಂದು ಪಾಲಿಕೆ ಕೌನ್ಸಿಲ್‌ ಕಾರ್ಯದರ್ಶಿ ಪಲ್ಲವಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 12

  Happy
 • 3

  Amused
 • 13

  Sad
 • 0

  Frustrated
 • 0

  Angry

Comments:

0 comments

Write the first review for this !