ಗುರುವಾರ , ನವೆಂಬರ್ 21, 2019
26 °C

ರಮೇಶ್ ಕುಮಾರ್ ಸವಾಲು

Published:
Updated:

ಬೆಂಗಳೂರು: ದ್ವೇಷ ರಾಜಕಾರಣದಿಂದ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದ್ದು, ಬೇಕಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶಾಸಕ ರಮೇಶ್ ಕುಮಾರ್ ಸವಾಲು ಹಾಕಿದರು.

ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಸಭೆ ನಡೆಯಿತು. ಸಭೆಯಲ್ಲಿ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದ ಬಗ್ಗೆ ಚರ್ಚಿಸಲಾಯಿತು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದ್ವೇಷ ಸಾಧನೆ ಸರಿಯಲ್ಲ. ರಾಜಕೀಯವಾಗಿ ಎಲ್ಲವನ್ನೂ ಎದುರಿಸುತ್ತೇವೆ. ಬಂಧಿಸಿ, ದಂಡಿಸುವುದಕ್ಕೆ ತಕರಾರು ಇಲ್ಲ. ಆದರೆ ಈ ಕೆಲಸಕ್ಕೆ ಒಂದು ಸರ್ಕಾರ ಮುಂದಾಯಿತಲ್ಲ ಎಂಬುದು ಆತಂಕಕ್ಕೆ ಕಾರಣ’ ಎಂದರು.

ದೇಶದಲ್ಲಿ ಜಿಡಿಪಿ ಕುಸಿದಿದ್ದು, ಉದ್ಯೋಗ ಅವಕಾಶಗಳು ಕಡಿತಗೊಂಡಿವೆ. ಪರಿಸ್ಥಿತಿ ಶೋಚನೀಯವಾಗಿದ್ದು, ಇಂಥ ಗಂಭೀರ ವಿಚಾರ ಮರೆಮಾಚುವ ಸಲುವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದರು.

‘ಇ.ಡಿ, ಐ.ಟಿ ವಿಚಾರಣೆಗೆ ಆಕ್ಷೇಪವಿಲ್ಲ. ಸರಿಯಾದ ಉದ್ದೇಶ, ಮಾರ್ಗದಲ್ಲಿ ವಿಚಾರಣೆ ನಡೆಯುತ್ತಿಲ್ಲ. ಕಾನೂನು ಪಾಲನೆಯಾಗುತ್ತಿಲ್ಲ.
ಇದಕ್ಕೆ ದೊಡ್ಡ ಮಟ್ಟದಲ್ಲೇ ಹೋರಾಟ ಮಾಡಿ ಉತ್ತರ ಕೊಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಸಿದರು.

ಸಭೆಗೂ ಮುನ್ನ ಸದಾಶಿವನಗರದ ಶಿವಕುಮಾರ್ ಮನೆಗೆ ರಮೇಶ್ ಕುಮಾರ್ ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರತಿಕ್ರಿಯಿಸಿ (+)