ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಂಡಮ್ ಪರೀಕ್ಷೆ: ಮೂವರಲ್ಲಿ ಸೋಂಕು

ಪಾದರಾಯನಪುರ ಹಾಗೂ ಹೊಂಗಸಂದ್ರದಲ್ಲಿ ಸೋಂಕು ತಪಾಸಣೆ
Last Updated 1 ಮೇ 2020, 22:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹಾಟ್‌ಸ್ಪಾಟ್‌ಗಳಾದ ಪಾದರಾಯನಪುರ ಹಾಗೂ ಹೊಂಗಸಂದ್ರದಲ್ಲಿ ರ್‍ಯಾಂಡಮ್ ಕೋವಿಡ್‌ ಪರೀಕ್ಷೆ (ಯಾದೃಚ್ಛಿಕ ಪರೀಕ್ಷೆ) ಮಾಡಲಾಗುತ್ತಿದ್ದು, ಈ ಪರೀಕ್ಷೆಯಿಂದ ಮೂವರಲ್ಲಿ ಸೋಂಕು ಪತ್ತೆಯಾಗಿದೆ.

ಈವರೆಗೆ ಪಾದರಾಯನಪುರದಲ್ಲಿ 31 ಹಾಗೂ ಹೊಂಗಸಂದ್ರದಲ್ಲಿ 30 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಹಾಗಾಗಿ ಅಲ್ಲಿ ನೇರ ಹಾಗೂ ಪರೋಕ್ಷ ಸಂಪರ್ಕಿತರಲ್ಲದವರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಏ.22ರಂದು ಪಾದರಾಯನಪುರದಲ್ಲಿ ಪರೀಕ್ಷೆ
ಮಾಡಲಾದ 22 ಮಂದಿಯಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಬಳಿಕ 48 ಮಂದಿಯ ಪರೀಕ್ಷೆ ನಡೆಸಿದ್ದು, ಇಬ್ಬರಲ್ಲಿ
ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಸೋಂಕು ಸಮುದಾಯಕ್ಕೆ ಹರಡಿತೇ ಎಂಬ ಆತಂಕ ಉಂಟಾಗಿದೆ.

‘ಎರಡರಿಂದ ಮೂರು ದಿನ ರ್‍ಯಾಂಡಮ್‍ಪರೀಕ್ಷೆ ನಡೆಸಲಾಗುತ್ತದೆ.ಪಾದರಾಯನಪುರದಲ್ಲಿ ಪರೀಕ್ಷೆ ಮಾಡಲಾದ 96 ಮಂದಿಯಲ್ಲಿ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊಂಗಸಂದ್ರದಲ್ಲಿ 112 ಮಂದಿಯನ್ನು ಪರೀಕ್ಷೆಮಾಡಿದ್ದು, ಯಾರಿಗೂ ಸೋಂಕು ತಗುಲಿಲ್ಲ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ಕೆ. ವಿಜಯೇಂದ್ರ ತಿಳಿಸಿದರು.

ಮೂರು ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌
ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗೆ (ಐಎಲ್‌ಐ) ಚಿಕಿತ್ಸೆ ಸಂಬಂಧ ಭೇಟಿ ನೀಡಿದ್ದ ವ್ಯಕ್ತಿಯ ಮಾಹಿತಿ ನೀಡದ ಹಿನ್ನೆಲೆಯಲ್ಲಿ ನಗರದ ಮೂರು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತ ಶುಕ್ರವಾರ ನೋಟಿಸ್ ನೀಡಿದೆ.

ಬಿಳೇಕಹಳ್ಳಿ ವಾರ್ಡಿನ ಕೋಡಿಚಿಕ್ಕನಹಳ್ಳಿಯ 64 ವರ್ಷದ ವೃದ್ಧೆಗೆ (ರೋಗಿ 565) ಗುರುವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಐಎಲ್‌ಐ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಈ ಮೊದಲು ಮೈಕೊ ಬಡಾವಣೆಯ ಮಾರಿಗೋಲ್ಡ್‌, ಬನ್ನೇರುಘಟ್ಟದ ಅಪೋಲೊ ಹಾಗೂ ಜಯನಗರದ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದರು. ಆದರೆ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಅಗತ್ಯ ಮಾಹಿತಿಗಳನ್ನು ನೀಡದ ಸಂಬಂಧ ಉತ್ತರ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ.

‘ಐಎಲ್‌ಐ ಪ್ರಕರಣಗಳ ಮಾಹಿತಿಯನ್ನು ಆಸ್ಪತ್ರೆಗಳು ಕಡ್ಡಾಯವಾಗಿ ನೀಡಬೇಕು. ಏ.28ರಂದು ರೋಗಿ ಮೂರು ಆಸ್ಪತ್ರೆಗಳಿಗೆ ಹೋಗಿದ್ದರು. ಎಲ್ಲಿಯೂ ಅವರನ್ನು ದಾಖಲಿಸಿಕೊಂಡಿರಲಿಲ್ಲ. ಮಣಿಪಾಲ್‌ ಅಸ್ಪತ್ರೆಯಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ, ರಾಷ್ಟ್ರೀಯ ವೈರಾಣು ಸಂಸ್ಥೆಯ ಬೆಂಗಳೂರು ವಿಭಾಗದ ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದ್ದರು. ಕೂಡಲೇ ನಮಗೆ ಮಾಹಿತಿ ನೀಡಿದಲ್ಲಿ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುತ್ತಿದ್ದೆವು. ಸೋಂಕು ದೃಢಪಟ್ಟ ಬಳಿಕ ನಾವು ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕಾಯಿತು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT