ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನೆಗುದಿಗೆ ಬಿದ್ದ ‘ರಂಗಮಂದಿರ ಪ್ರಾಧಿಕಾರ’

ಮೂರು ವಾರ್ಷಿಕ ಕಂತುಗಳಲ್ಲಿ ₹ 300 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದ ನಾಟಕ ಅಕಾಡೆಮಿ
Last Updated 13 ಮಾರ್ಚ್ 2021, 22:13 IST
ಅಕ್ಷರ ಗಾತ್ರ

ಬೆಂಗಳೂರು: ರಂಗಮಂದಿರಗಳ ಕೊರತೆ ಹಾಗೂ ರಂಗಭೂಮಿಯ ಸಮಸ್ಯೆಗಳನ್ನು ನೀಗಿಸಲು ಕರ್ನಾಟಕ ನಾಟಕ ಅಕಾಡೆಮಿ ‘ರಂಗ ಮಂದಿರ ಪ್ರಾಧಿಕಾರ’ ರಚಿಸುವ ಪ್ರಸ್ತಾವನೆ ಸಿದ್ಧಪಡಿಸಿತ್ತು. ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.

ನಾಡಿನ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ವಲಯದ ತಜ್ಞರ ಸಲಹೆಗಳನ್ನು ಪಡೆದಿದ್ದ ಅಕಾಡೆಮಿ, ಪ್ರಾಧಿಕಾರ ರಚನೆಗೆ ಸಂಬಂಧಿಸಿದ ರೂಪುರೇಷೆಗಳನ್ನೂ ಈ ಹಿಂದೆ ಸಿದ್ಧಪಡಿಸಿತ್ತು. ಪ್ರತಿ ತಾಲ್ಲೂಕಿನಲ್ಲಿ 300 ಆಸನಗಳ ವ್ಯವಸ್ಥೆಯ ಸುಸಜ್ಜಿತ ರಂಗಮಂದಿರ ನಿರ್ಮಾಣ ಮಾಡಬೇಕು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ರಂಗ ಮಂದಿರದ ನೀಲ ನಕ್ಷೆಯನ್ನೂ ರಚಿಸಿ, ಪ್ರತಿ ರಂಗಮಂದಿರಕ್ಕೆ
₹ 1.6 ಕೋಟಿ ವೆಚ್ಚವಾಗಲಿದೆ ಎಂದೂ ಅಂದಾಜಿಸಲಾಗಿತ್ತು.

ಒಟ್ಟಾರೆ ₹ 300 ಕೋಟಿಯನ್ನು ಮೂರು ವಾರ್ಷಿಕ ಕಂತುಗಳಲ್ಲಿ ನೀಡಿದಲ್ಲಿ ಇದು ಸಾಕಾರವಾಗಲಿದೆ ಎಂದು ಅಂದಿನ ಅಕಾಡೆಮಿಯ ಅಧ್ಯಕ್ಷ ಜೆ. ಲೋಕೇಶ್ ಅವರು ಮೈತ್ರಿ ಸರ್ಕಾರ ಹಾಗೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಎರಡು ವರ್ಷಗಳು ಕಳೆದರೂ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಸ್ಪಂದನೆ ದೊರೆಯದಿರುವುದು ಸಾಂಸ್ಕೃತಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

‘ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ರಂಗಕರ್ಮಿಗಳು, ಕಲಾವಿದರಿಗೆ ತಮ್ಮ ನಾಟಕಗಳನ್ನು ಪ್ರದರ್ಶಿಸುವುದೆಲ್ಲಿ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ನಾಟಕದ ತಯಾರಿಗೆ ಬೇಕಾದ ತಾಲೀಮು ಕೊಠಡಿಗಳು ಹಾಗೂ ರಂಗ ಪ್ರದರ್ಶನಕ್ಕೆ ಅಗತ್ಯವಾದ ರಂಗಮಂದಿರಗಳ ಕೊರತೆಯಿದೆ. ತಾಲ್ಲೂಕು ಕೇಂದ್ರಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲು ಮೂಲಸೌಕರ್ಯ ಹೊಂದಿರುವ ರಂಗ ಮಂದಿರಗಳು ಕಾಣಸಿಗುವುದಿಲ್ಲ. ಇದು ರಂಗ ಚಟುವಟಿಕೆಗಳು ಕುಂಠಿತವಾಗಲು ಕಾರಣವಾಗಿದೆ. ಯುವಕರಲ್ಲಿನ ಆಸಕ್ತಿಯನ್ನು ಇದು ಕುಂದಿಸುತ್ತಿದೆ’ ಎಂದು ರಂಗಕರ್ಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

200 ರಂಗ ಮಂದಿರ ಪ್ರಸ್ತಾವನೆ: ‘5 ವರ್ಷಗಳ ಅವಧಿಯಲ್ಲಿ 200 ರಂಗ ಮಂದಿರಗಳನ್ನು ನಿರ್ಮಿಸಬೇಕೆಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿತ್ತು. ಬೆಂಗಳೂರಿನಲ್ಲಿಯೇ ರವೀಂದ್ರ ಕಲಾಕ್ಷೇತ್ರ ಹೊರತುಪಡಿಸಿದರೆ ಸರ್ಕಾರ ನಿರ್ವಹಿಸುವ ಬೇರೆ ಸುಸಜ್ಜಿತ ರಂಗ ಮಂದಿರಗಳಿಲ್ಲ. ಇರುವ ರಂಗ ಮಂದಿರಗಳಿಗೆ ಕೂಡ ಅಗತ್ಯ ಪರಿಕರಗಳನ್ನು ಅಳವಡಿಸಲು ಲೋಕೋಪಯೋಗಿ ಇಲಾಖೆ ಬೇಕಾಬಿಟ್ಟಿ ಟೆಂಡರ್ ಕರೆದು, ಕಳಪೆ ಗುಣಮಟ್ಟದ ಸಾಧನಗಳನ್ನು ಅಳವಡಿಸುವ ಸಾಧ್ಯತೆ ಇರುತ್ತದೆ. ಪ್ರಾಧಿಕಾರ ರಚನೆಯಾದಲ್ಲಿ ಈ ಸಮಸ್ಯೆ ಇರುವುದಿಲ್ಲ. ಆದ್ದರಿಂದಲೇ ಈ ಸಂಬಂಧ ರೂಪುರೇಷೆಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಅದನ್ನು ಕಾರ್ಯಗತಗೊಳಿಸಲು ಸರ್ಕಾರವು ಆಸಕ್ತಿ ತೋರಿಲ್ಲ’ ಎಂದು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಜೆ. ಲೋಕೇಶ್ ತಿಳಿಸಿದರು.

‘ರಂಗ ಮಂದಿರದ ಕೊರತೆಯಿಂದಾಗಿ ರಂಗಭೂಮಿಯ ಬೆಳವಣಿಗೆಗೆ ತೊಡಕಾಗಿದೆ. ಪ್ರಾಧಿಕಾರ ರಚನೆ ತುರ್ತಾಗಿ ಆಗಬೇಕಾದ ಕೆಲಸ. ರಾಜ್ಯದ ಕೆಲವು ಭಾಗಗಳಲ್ಲಿ ಮಾತ್ರ ರಂಗ ಮಂದಿರಗಳು ಕಾಣಸಿಗುತ್ತವೆ. ಅವುಗಳ ನಿರ್ವಹಣೆ ಕೂಡ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ.
ಹಾಗಾಗಿ, ಸರ್ಕಾರವು ಪ್ರಾಧಿಕಾರ ನಿರ್ಮಾಣ ಮಾಡಲು ಮನಸ್ಸು ಮಾಡಬೇಕು’ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್. ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT