ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಾಯಿ ದಂಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಲ್ಲ: ಕೂಡಲಸಂಗಮ ಶ್ರೀ

1857ಕ್ಕೂ ಮೊದಲೇ ನಡೆದಿತ್ತು ಕಿತ್ತೂರು ಸಂಗ್ರಾಮ: ಜಯಬಸವ ಮೃತ್ಯುಂಜಯ ಸ್ವಾಮೀಜಿ
Last Updated 23 ಅಕ್ಟೋಬರ್ 2021, 16:27 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿಸಿಪಾಯಿ ದಂಗೆಗಿಂತ 32 ವರ್ಷಗಳು ಮೊದಲೇ ಕಿತ್ತೂರು ಸಂಗ್ರಾಮ ನಡೆದಿದೆ. ಹಾಗಾಗಿ, 1857ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವಲ್ಲ’ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬ್ರಿಟಿಷರ ವಿರುದ್ಧ ನಡೆದ 1857ರ ದಂಗೆಯನ್ನು ಪ್ರಥಮ ಸ್ವಾತಂತ್ರ್ಯ ಹೋರಾಟ ಎಂದು ಸಂಸತ್ತಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. 1824ರಲ್ಲಿಯೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದರು. ಹಾಗಾಗಿ,ಕಿತ್ತೂರು ಸಂಗ್ರಾಮವನ್ನು ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಮಾರ್ಪಾಡು ಮಾಡಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರವೂ ಧ್ವನಿಯೆತ್ತಬೇಕು’ ಎಂದು ಆಗ್ರಹಿಸಿದರು.

‘ಸಂಸತ್ತಿನ ಮುಂಭಾಗ ವಿಶ್ವಗುರು ಬಸವಣ್ಣನ ಪ್ರತಿಮೆ ಹಾಗೂ ಸ್ವಾಭಿಮಾನದ ಪ್ರತಿಕವಾದ ಚೆನ್ನಮ್ಮನ ಪ್ರತಿಮೆಯಿದೆ. ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆಗೂ ಮಾಲಾರ್ಪಣೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಬೇಕು.ಆಗ ಇವರ ಬಗ್ಗೆಹಿಂದಿ ಭಾಷೆ ಬಳಸುವ ಜನರಿಗೂ ತಿಳಿಯಲಿದೆ’ ಎಂದರು.

ವಿಚಾರಧಾರೆ ಅಳವಡಿಸಿಕೊಳ್ಳಿ:ಕೊಪ್ಪಳದ ಕನ್ನಡ ಉಪನ್ಯಾಸಕ ಶಿವಾನಂದ ಮೇಟಿ, ‘ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧ ಮೊಟ್ಟ ಮೊದಲು ಹೋರಾಡಿದ ಮಹಿಳೆ ಚೆನ್ನಮ್ಮ. ಧೀರ ಮಾತೆಯ ವಿಚಾರಗಳನ್ನು ಅಳವಡಿಸಿಕೊಂಡು ಸಾಗಿದರೆ ದೇಶ ಇನ್ನಷ್ಟು ಬಲಿಷ್ಠವಾಗಲಿದೆ.ಒಬ್ಬ ಮಹಿಳೆಯಲ್ಲಿ ಎಷ್ಟು ಗಟ್ಟಿತನ ಇರುತ್ತದೆಯೋ, ಅಷ್ಟೇ ಹೃದಯವಂತಿಕೆಯೂ ಇರುತ್ತದೆ ಎನ್ನುವುದಕ್ಕೆಚೆನ್ನಮ್ಮ ಉತ್ತಮ ಉದಾಹರಣೆ.ಅವರ ಜಯಂತಿಯನ್ನು ಒಂದು ದಿನ ಆಚರಿಸಿ, ಮರೆಯಬಾರದು’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್. ರಂಗಪ್ಪ, ‘ಚೆನ್ನಮ್ಮ ಸ್ವಾಭಿಮಾನದ ಸಂಕೇತ. ದತ್ತು ಮಕ್ಕಳಿಗೆ ಉತ್ತರಾಧಿಕಾರದ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ, ಬ್ರಿಟಿಷರ ವಿರುದ್ಧ ಸಮರ ಸಾರಿದರು. ಅವರುನಾಡಿನ ಸಮಸ್ತ ಸ್ವಾತಂತ್ರ್ಯ ಹೋರಾಟಗಾರರ ಕಣ್ಮಣಿಯಾಗಿ ನಿಲ್ಲುತ್ತಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT