ಶನಿವಾರ, ಜುಲೈ 2, 2022
25 °C

ಬಾಡಿಗೆ ಮನೆಯಲ್ಲಿದ್ದ ಯುವತಿ ಮೇಲೆ ಅತ್ಯಾಚಾರ: ಮನೆ ಮಾಲೀಕ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಡಿಗೆ ಮನೆಯಲ್ಲಿದ್ದ ಯುವತಿಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದ ಆರೋಪದಡಿ ಮನೆ ಮಾಲೀಕ ಅನಿಲ್ ರವಿಶಂಕರ್ ಪ್ರಸಾದ್ ಎಂಬುವರನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.

‘ಬಿಹಾರದ ಅನಿಲ್, ಟೈಲ್ಸ್ ವ್ಯಾಪಾರಿ. ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಸಂತ್ರಸ್ತ ಯುವತಿ ನೀಡಿದ್ದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಮೂರು ದಿನ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿಯದ್ದು ಎರಡು ಮನೆಗಳಿದ್ದು, ಒಂದರಲ್ಲಿ ಆತ ನೆಲೆಸಿದ್ದ. ಇನ್ನೊಂದು ಮನೆ ಖಾಲಿ ಇತ್ತು. ಪಶ್ವಿಮ ಬಂಗಾಳದ ಯುವತಿ, ನಗರದ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಯ ಮನೆಯಲ್ಲಿ ಬಾಡಿಗೆಗೆ ಇದ್ದರು.’

‘ಯುವತಿ ಮನೆಗೆ ಆಗಾಗ ಸ್ನೇಹಿತರು ಬಂದು ಹೋಗುತ್ತಿದ್ದರು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಆರೋಪಿ, ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದ. ಅಂದಿನಿಂದ ಸ್ನೇಹಿತರು ಬರುವುದು ಕಡಿಮೆಯಾಗಿತ್ತು. ಇದರ ನಡುವೆಯೇ ಸ್ನೇಹಿತನೊಬ್ಬ, ಯುವತಿ ಮನೆಗೆ ಬಂದಿದ್ದ. ಏಕಾಏಕಿ ಮನೆಯೊಳಗೆ ಹೋಗಿ ಸ್ನೇಹಿತನ ಜೊತೆ ಜಗಳ ಮಾಡಿದ್ದ ಆರೋಪಿ, ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿ ಕಳುಹಿಸಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಸ್ನೇಹಿತ ಬಂದು ಹೋದ ನಂತರ ಆರೋಪಿ, ನಿತ್ಯವೂ ಯುವತಿ ಮನೆಗೆ ಹೋಗಲಾರಂಭಿಸಿದ್ದ. ‘ನೀನು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಿಯಾ. ಈ ಬಗ್ಗೆ ಪೊಲೀಸರಿಗೆ ಹೇಳಿ ಜೈಲಿಗೆ ಕಳುಹಿಸುತ್ತೇನೆ’ ಎಂಬುದಾಗಿ ಬೆದರಿಸುತ್ತಿದ್ದ. ಆ ರೀತಿ ಮಾಡಬಾರದೆಂದರೆ ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸುತ್ತಿದ್ದ. ಇದಕ್ಕೆ ಯುವತಿ ಒಪ್ಪಿರಲಿಲ್ಲ.’

‘ಏಪ್ರಿಲ್ 11ರಂದು ಪಿಸ್ತೂಲ್ ಸಮೇತ ಮನೆಗೆ ಹೋಗಿದ್ದ ಆರೋಪಿ, ಯುವತಿಗೆ ಕೊಲೆ ಬೆದರಿಕೆ ಹಾಕಿ ಅತ್ಯಾಚಾರ ಎಸಗಿದ್ದ. ಅದಾದ ನಂತರವೂ ಆರೋಪಿ ಕಿರುಕುಳ ನೀಡಲಾರಂಭಿಸಿದ್ದ. ಬೇಸತ್ತ ಯುವತಿ, ಪೋಷಕರಿಗೆ ವಿಷಯ ತಿಳಿಸಿದ್ದರು. ಅವರ ಮೂಲಕ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು