ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪಿಗೆ ಜಾಮೀನು ಮಂಜೂರು

ದೂರು ನೀಡಲು ವಿಳಂಬವಾಗಿದೆ ಎಂದ ಹೈಕೋರ್ಟ್‌
Last Updated 25 ಜೂನ್ 2020, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರಕ್ಕೆ ಈಡಾಗಿ ಬಸವಳಿದಿದ್ದರಿಂದಾಗಿ ಪೊಲೀಸರಿಗೆ ದೂರು ನೀಡುವಲ್ಲಿ ವಿಳಂಬವಾಗಿದೆ’ ಎಂಬ ಸಂತ್ರಸ್ತೆಯ ಹೇಳಿಕೆಯನ್ನು ಹೈಕೋರ್ಟ್ ಸಾರಾಸಗಟಾಗಿ ತಳ್ಳಿ ಹಾಕಿದೆ.

‘ಅತ್ಯಾಚಾರಕ್ಕೆ ಒಳಗಾದಾಗ ಭಾರತೀಯ ಮಹಿಳೆಯರು ವರ್ತಿಸುವ ರೀತಿ ಇದಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಪ್ರಕರಣದ ಆರೋಪಿಗೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಜಾಮೀನು ಕೋರಿ 27 ವರ್ಷದ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ಮಹಿಳೆಯ (42) ಆರೋಪ ಮೇಲ್ನೋಟಕ್ಕೆ ನಂಬಲರ್ಹವಾಗಿಲ್ಲ. ಅತ್ಯಾಚಾರದಂತಹ ಗಂಭೀರ ಆರೋಪವಿದೆ ಎಂಬ ಏಕೈಕ ಕಾರಣಕ್ಕೆ ಆರೋಪಿಯ ಸ್ವಾತಂತ್ರ್ಯವನ್ನು ನಿರ್ಬಂಧಿಸಲಾಗದು. ಕೋವಿಡ್ ಅವಧಿಯಲ್ಲಿ ಜೈಲಿಗೆ ದೂಡುವುದು ಸಮರ್ಥನೀಯ ಎನಿಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಇದು ಲಕ್ಷಣವಲ್ಲ: ‘ಆರೋಪಿಯು ಎರಡು ವರ್ಷಗಳಿಂದ ನನ್ನ ಮಾಲೀಕತ್ವದ ಸಂಸ್ಥೆಯಲ್ಲೇ ಕೆಲಸ ಮಾಡುತ್ತಿದ್ದು, ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದಾರೆ’ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.

‘ಹಾಗಾದರೆ ಎರಡು ವರ್ಷಗಳಿಂದ ಆಕೆ ಮೌನವಾಗಿದ್ದುದು ಏಕೆ' ಎಂದು ನ್ಯಾಯಪೀಠ ಪ್ರಾಸಿಕ್ಯೂಷನ್ ಅನ್ನು ಪ್ರಶ್ನಿಸಿದೆ. ‘ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆಂಬ ಮಹಿಳೆಯ ಆರೋಪಗಳನ್ನು ಈ ಹಂತದಲ್ಲಿ ನಂಬಲು ಸಾಧ್ಯವಿಲ್ಲ’ ಎಂದೂ ನ್ಯಾಯಪೀಠ ಹೇಳಿದೆ.

ಆರೋಪಿ ಪರ ವಕೀಲ ಸಿ.ಎಚ್‌.ಹನುಮಂತರಾಯ ಅವರು ವಾದ ಮಂಡಿಸಿದರು.

ಹಿನ್ನೆಲೆ:ಮೇ 2ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ತೆರಳಿದ್ದ ಸಂತ್ರಸ್ತೆ, ‘ಏಪ್ರಿಲ್ 22ರಂದು ಆರೋಪಿ ನನ್ನ ಕಚೇರಿಗೆ ಬಂದು ಅತ್ಯಾಚಾರ ಎಸಗಿದ. 23ರಂದು ನನ್ನ ನಗ್ನ ಚಿತ್ರಗಳನ್ನು ನನಗೆ ಮೊಬೈಲ್ ಮೂಲಕ ಕಳುಹಿಸಿದ. ಇದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ’ ಎಂದು ದೂರು ದಾಖಲಿಸಿದ್ದಾರೆ.

ಪೊಲೀಸರು ಯುವಕನ ವಿರುದ್ಧ ಐಪಿಸಿ-1860ರ ಕಲಂ 376, 420, 506 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಕಲಂ 66(ಬಿ) ಅಡಿ ದೂರು ದಾಖಲಿಸಿದ್ದಾರೆ. ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT