ಶುಕ್ರವಾರ, ಜೂನ್ 5, 2020
27 °C
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ: ಮೂರು ಸಾವಿರಕ್ಕೆ ಏರಿಕೆ

ಕೋವಿಡ್‌ ಪರೀಕ್ಷಾ ಸಾಮರ್ಥ್ಯ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಕೋವಿಡ್‌ ಪರೀಕ್ಷೆಗೆ ಜರ್ಮನಿಯಿಂದ ಯಂತ್ರವನ್ನು ಆಮದು ಮಾಡಿಕೊಂಡಿದೆ. ಇದರಿಂದ ಸಂಸ್ಥೆಯ ಪ್ರಯೋಗಾಲಯದ ಪರೀಕ್ಷಾ ಸಾಮರ್ಥ್ಯ ಮೂರು ಸಾವಿರಕ್ಕೆ ಏರಿಕೆಯಾಗಲಿದೆ. 

ಕೆಲ ದಿನಗಳ ಹಿಂದಷ್ಟೇ ಸಂಸ್ಥೆಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನಿಂದ (ಐಸಿಎಂಆರ್) ಕೋವಿಡ್‌ ಪರೀಕ್ಷೆಗೆ ಅನುಮೋದನೆ ಪಡೆದುಕೊಂಡಿತ್ತು. ಗಂಟಲ ದ್ರವದ ಮಾದರಿಗಳ ಪರೀಕ್ಷೆಗೆ ಅತ್ಯಾಧುನಿಕ ಮಾಲಿಕ್ಯುಲರ್ ಪ್ರಯೋಗಾಲಯವನ್ನು ಬಳಸಿಕೊಳ್ಳಲಾಗುತ್ತಿದೆ. ಸಂಸ್ಥೆಗೆ ಬರುವ ಕ್ಯಾನ್ಸರ್ ರೋಗಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಿ, ಸೋಂಕು ಪತ್ತೆಯಾಗದಿ
ದ್ದಲ್ಲಿ ರೇಡಿಯೋಥೆರಪಿ, ಕಿಮೋಥೆರಪಿ ಸೇರಿದಂತೆ ಅಗತ್ಯ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ವಿವಿಧ ಆಸ್ಪತ್ರೆಗಳಿಂದಲೂ ಪರೀಕ್ಷೆಗೆ ನಿತ್ಯ 700ಕ್ಕೂ ಅಧಿಕ ಮಂದಿಯ ಗಂಟಲ ದ್ರವದ ಮಾದರಿಗಳು ಬರುತ್ತಿವೆ. ಸದ್ಯ ಸಂಸ್ಥೆಯ ಪ್ರಯೋಗಾಲಯದಲ್ಲಿ ನಿತ್ಯ ಗರಿಷ್ಠ ಒಂದು ಸಾವಿರ ಮಂದಿಯ ಗಂಟಲ ದ್ರವದ ಪರೀಕ್ಷೆ ನಡೆಸಲಾಗುತ್ತಿದೆ.

ಸರ್ಕಾರವು ಪರೀಕ್ಷಾ ಸಾಮರ್ಥ್ಯ ಹೆಚ್ಚಳ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಂಸ್ಥೆ ಹೊಸದಾಗಿ ಇನ್ನೊಂದು ಯಂತ್ರವನ್ನು ಅಳವಡಿಕೆ ಮಾಡಿಕೊಳ್ಳುತ್ತಿದೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಪರೀಕ್ಷಾ ಸಾಮರ್ಥ್ಯದ ಪ್ರಯೋಗಾಲಯವನ್ನು ಹೊಂದಿದ ಗೌರವಕ್ಕೆ ಸಂಸ್ಥೆ ಭಾಜನವಾಗಲಿದೆ. 

‘ಜರ್ಮನಿಯಿಂದ ₹ 70 ಲಕ್ಷ ಮೌಲ್ಯದ ಬೆಕ್‌ಮನ್‌ ಹೈಫೈವ್ ಹೆಸರಿನ ಯಂತ್ರವನ್ನು ಆಮದು ಮಾಡಿಕೊಳ್ಳ
ಲಾಗಿದೆ. ಸದ್ಯ ಪ್ರಯೋಗಾಲಯದಲ್ಲಿ
ಯಂತ್ರ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರದಿಂದ ಇನ್ನೊಂದು ಯಂತ್ರವೂ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ನೂತನ ಯಂತ್ರ ಎರಡು ಸಾವಿರ ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಪ್ರಯೋಗಾಲಯದಲ್ಲಿ ಒಂದು ದಿನದಲ್ಲಿ ಮೂರು ಸಾವಿರ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಬಹುದು’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು. 

ಸದ್ಯ ರಾಜ್ಯದಲ್ಲಿ 29 ಸರ್ಕಾರಿ ಪ್ರಯೋಗಾಲಯಗಳು ಹಾಗೂ 21 ಖಾಸಗಿ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಈ ಪ್ರಯೋಗಾಲಯಗಳು 8ಸಾವಿರ ಮಂದಿಯ ಗಂಟಲ ದ್ರವವನ್ನು ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿವೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು