ಗುರುವಾರ , ಅಕ್ಟೋಬರ್ 1, 2020
22 °C
13 ವರ್ಷಗಳ ಬಳಿಕ ಸೆರೆಸಿಕ್ಕ ಇಕ್ಬಾಲ್

ಜೋಡಿ ಕೊಲೆ; ಪಿಸ್ತೂಲ್ ಪೂರೈಸಿದ್ದವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತಿಲಕನಗರ ಠಾಣೆ ವ್ಯಾಪ್ತಿಯ 'ಶಬನಂ ಬಿಲ್ಡರ್ಸ್' ಕಚೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣ ಸಂಬಂಧ ಇಕ್ಬಾಲ್ ಖುರೇಷಿ (45) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದ ಮುಜಾಫರ್‌ ನಗರದ ಇಕ್ಬಾಲ್ ಖುರೇಷಿ, ಅಕ್ರಮವಾಗಿ ಪಿಸ್ತೂಲ್ ಸರಬರಾಜು ಮಾಡುತ್ತಿದ್ದ. ರವಿ ಪೂಜಾರಿ ಜೊತೆ ಒಡನಾಟವಿಟ್ಟುಕೊಂಡಿದ್ದ. ಜೋಡಿ ಕೊಲೆ ಮಾಡಲು ರವಿ ಪೂಜಾರಿ ಸಹಚರರಿಗೆ ಇಕ್ಬಾಲ್‌ ಪಿಸ್ತೂಲ್‌ಗಳನ್ನು ಪೂರೈಸಿದ್ದ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘2007ರ ಫೆ. 15ರಂದು ‘ಶಬನಂ ಬಿಲ್ಡರ್ಸ್’ ಕಚೇರಿ ಮೇಲೆ ದಾಳಿ ನಡೆಸಿದ್ದ ದುಷ್ಕರ್ಮಿಗಳು, ಉದ್ಯೋಗಿ ಶೈಲಜಾ ಹಾಗೂ ಕಾರು ಚಾಲಕ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಕೊಲೆ ನಂತರ ಸ್ಥಳದಿಂದ ಪರಾರಿಯಾಗುವ ವೇಳೆಯಲ್ಲಿ ‘ರವಿ ಪೂಜಾರಿ’ ಎಂಬ ಭಿತ್ತಿಪತ್ರವನ್ನು ಕಚೇರಿ ಗಾಜಿನ ಮೇಲೆ ಅಂಟಿಸಿ ಹೋಗಿದ್ದರು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಕರಣ ಸಂಬಂಧ ಇಕ್ಬಾಲ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರಬಂದಿದ್ದ ಇಕ್ಬಾಲ್ ತಲೆಮರೆಸಿಕೊಂಡಿದ್ದ. ನ್ಯಾಯಾಲಯಕ್ಕೂ ಹಾಜರಾಗುತ್ತಿರಲಿಲ್ಲ. 13 ವರ್ಷಗಳ ನಂತರ ಆತನನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿದರು.

ಮತ್ತುಷ್ಟು ಮಂದಿ ಶಾಮೀಲು: ‘ಸೆನೆಗಲ್‌ನಲ್ಲಿ ಸಿಕ್ಕಿಬಿದ್ದಿರುವ ರವಿ ಪೂಜಾರಿಯನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಜೋಡಿ ಕೊಲೆ ಸೇರಿದಂತೆ ಹಲವು ಕೃತ್ಯಗಳ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ’ ಎಂದು ಅಧಿಕಾರಿ ವಿವರಿಸಿದರು.

‘ಪಾಲಿಕೆ ಸದಸ್ಯರಾಗಿದ್ದ ಸಮೀವುಲ್ಲಾ ಅವರು ‘ಶಬನಂ ಬಿಲ್ಡರ್ಸ್’ ನಡೆಸುತ್ತಿದ್ದರು. ಅವರಿಗೆ ವಿದೇಶದಿಂದ ಬೆದರಿಕೆ ಕರೆ ಮಾಡಿದ್ದ ಪೂಜಾರಿ, ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ನೀಡಲು ಒಪ್ಪದಿದ್ದಾಗ ಕೊಲೆ ಮಾಡುವುದಾಗಿ ಬೆದರಿಸಿದ್ದ. ಆತನ ಸಹಚರರು ಮುಸುಕುಧಾರಿಗಳಾಗಿ ಕಚೇರಿ ಮೇಲೆ ದಾಳಿ ಮಾಡಿ ಶೈಲಜಾ ಹಾಗೂ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಈ ಕೃತ್ಯದಲ್ಲಿ ಹಲವರು ಶಾಮೀಲಾಗಿದ್ದಾರೆ. ಅವರೆಲ್ಲರನ್ನೂ ಪತ್ತೆ ಮಾಡಲಾಗುತ್ತಿದೆ’ ಎಂದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.