ಶನಿವಾರ, ಅಕ್ಟೋಬರ್ 8, 2022
21 °C
ಮಾಲೀಕರ ಮಾಹಿತಿಯನ್ನೇ ಅಳಿಸಿ ವಂಚನೆ: ಸಾರಿಗೆ ಇಲಾಖೆ ಅಧಿಕಾರಿಗಳೇ ಶಾಮೀಲು

ಆರ್‌.ಸಿ ಕಾರ್ಡ್‌ ತಿದ್ದುವ ದಂಧೆ: ಸಾರಿಗೆ ಇಲಾಖೆ ಅಧಿಕಾರಿಗಳೇ ಶಾಮೀಲು

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದುಬಾರಿ ಬೆಲೆಯ ಬಳಸಿದ ವಾಹನಗಳ ಮಾರಾಟದ ವೇಳೆ ಹಿಂದಿನ ಮಾಲೀಕರ ಮಾಹಿತಿಯನ್ನೇ ಅಳಿಸಿ ಖರೀದಿದಾರರನ್ನು ವಂಚಿಸುತ್ತಿರುವ ದಂಧೆಯಲ್ಲಿ ನಗರದ ಪ್ರಾದೇಶಿಕ ಸಾರಿಗೆ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಶಾಮೀಲಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಬಳಸಿದ ಹಳೇ ವಾಹನಗಳನ್ನು ಖರೀದಿ ಮಾಡುವವರು ಮುಖ್ಯವಾಗಿ ಗಮನಿಸುವುದು ವಾಹನದ ಮಾಲೀಕರ ಸಂಖ್ಯೆ.‌ ಈ ಸಂಖ್ಯೆಯನ್ನು ಆರ್‌.ಸಿ
(ನೋಂದಣಿ ಪ್ರಮಾಣಪತ್ರ) ಕಾರ್ಡ್‌ನಲ್ಲಿ ಕಡಿಮೆ ಮಾಡಿಕೊಡುವ ಅಕ್ರಮ ಸಾರಿಗೆ ಇಲಾಖೆಯಲ್ಲೇ ಸದ್ದಿಲ್ಲದೆ ನಡೆಯುತ್ತಿದೆ.

ಕಾರುಗಳ ಮಾಲೀಕತ್ವ ಏಳೆಂಟು ಮಂದಿಗೆ ವರ್ಗಾವಣೆಯಾಗಿದ್ದರೂ, ಆರ್.ಸಿ ಕಾರ್ಡ್‌ನಲ್ಲಿ ಒಬ್ಬರು ಅಥವಾ ಇಬ್ಬರ ಹೆಸರನ್ನಷ್ಟೇ ಉಳಿಸಿಕೊಡಲಾಗುತ್ತದೆ. ಈ ಬಗ್ಗೆ ಹರೀಶ್‌ಕುಮಾರ್ ಎಂಬುವವರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಲಾಗಿದ್ದು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ (ಕೇಂದ್ರ) ಒಂದರಲ್ಲೇ ಸುಮಾರು 50 ವಾಹನಗಳ ಆರ್‌.ಸಿ ಕಾರ್ಡ್‌ಗಳನ್ನು ‘ವಾಹನ್’ ತಂತ್ರಾಂಶದಲ್ಲಿ ತಿದ್ದಿರುವುದು ಗೊತ್ತಾಗಿದೆ.

ಈ ರೀತಿ ಮಾಲೀಕರ ಸಂಖ್ಯೆ ಕಡಿಮೆ ಮಾಡಿಸಿಕೊಂಡ ವಾಹನಗಳ ಪಟ್ಟಿಯಲ್ಲಿ ಬಹುತೇಕ ಐಷಾರಾಮಿ ಕಾರುಗಳೇ ಇವೆ. ಬೆಂಜ್, ಔಡಿ, ಫಾರ್ಚ್ಯುನರ್, ಇನೋವಾ ಕಾರುಗಳ ಆರ್‌.ಸಿ ಕಾರ್ಡ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ತಿದ್ದಲ್ಪಟ್ಟಿವೆ. ವಾಸ್ತವದಲ್ಲಿ ನಾಲ್ಕು ಮಂದಿಗೆ ವರ್ಗಾವಣೆಯಾಗಿದ್ದರೆ, ಅದನ್ನು ಒಂದು ಅಥವಾ ಎರಡು ಮಂದಿಗಷ್ಟೇ ವರ್ಗಾವಣೆಯಾಗಿದೆ ಎಂದು ತಿದ್ದಲಾಗಿದೆ. ಏಳರಿಂದ ಎಂಟು ಮಂದಿಗೆ ವರ್ಗಾವಣೆ ಆಗಿರುವ ವಾಹನವಾಗಿದ್ದರೆ ಮೂರು ಅಥವಾ ನಾಲ್ಕು ಮಂದಿಗಷ್ಟೇ ವರ್ಗಾವಣೆಯಾಗಿದೆ ಎಂದು ನಮೂದಿಸಲಾಗಿದೆ. ವಾಹನಗಳ ಮಾಲೀಕರ ಸಂಖ್ಯೆ ಎಷ್ಟು ಕಡಿಮೆಯಾಗಬೇಕು ಎಂಬುದರ ಆಧಾರದಲ್ಲಿ ಲಂಚದ ಪ್ರಮಾಣ ನಿಗದಿ ಮಾಡಿಕೊಂಡು ತಿದ್ದಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳೇ ವಿವರಿಸಿದ್ದಾರೆ.

‘ದೂರು ಆಧರಿಸಿ ತನಿಖೆ ನಡೆಸಿದಾಗ ‘ವಾಹನ್’ ತಂತ್ರಾಂಶದಲ್ಲಿನ ಮಾಹಿತಿ ತಿದ್ದುಪಡಿ ಮಾಡಿರುವುದು ಪತ್ತೆಯಾಗಿದೆ. ಹೀಗೆ ತಿದ್ದಿರುವುದು ಯಾವ ಅಧಿಕಾರಿ ಅಥವಾ ಸಿಬ್ಬಂದಿಯ ಲಾಗಿನ್‌ನಿಂದ ಆಗಿದೆ ಎಂಬುದೂ ಗೊತ್ತಾಗಿದೆ. ದೂರು ಆಧರಿಸಿ ಒಂದೇ ಸಾರಿಗೆ ಕಚೇರಿಯಲ್ಲಿ ತನಿಖೆ ನಡೆಸಲಾಗಿದ್ದು, ತನಿಖೆಯ ವರದಿ ಬರಬೇಕಿದೆ. ಹೆಚ್ಚಿನ ತನಿಖೆ ನಡೆಸಿದರೆ ಬೇರೆ ಕಚೇರಿಗಳಲ್ಲೂ ಈ ದಂಧೆ ನಡೆದಿರುವುದು ಪತ್ತೆಯಾಗಬಹುದು’ ಎಂದು ಹೆಸರು ಹೇಳಲು ಬಯಸದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು‘ಪ್ರಜಾವಾಣಿ’ಗೆ ತಿಳಿಸಿದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರಿಗೆ ಇಲಾಖೆ ಆಯುಕ್ತ ಟಿ.ಎಚ್.ಎಂ. ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಸಂಪರ್ಕಕ್ಕೆ ಬರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು