ಶುಕ್ರವಾರ, ನವೆಂಬರ್ 22, 2019
19 °C
‌ಕಾರ್ಯಾಗಾರದಲ್ಲಿ ಚಿಂತಕರ ಆತಂಕ

‘ಆರ್‌ಸಿಇಪಿ: ದೊಡ್ಡ ಗಂಡಾಂತರ ಕಾದಿದೆ’

Published:
Updated:
Prajavani

ಬೆಂಗಳೂರು: ‘ಡಬ್ಲ್ಯುಟಿಒ(ವಿಶ್ವ ವ್ಯಾಪಾರ ಸಂಸ್ಥೆ) ಒಪ್ಪಂದದಿಂದ ಎದುರಾದ ತೊಂದರೆಗಳಿಂದಲೂ ಬುದ್ಧಿ ಕಲಿಯದ ಭಾರತ, ಮತ್ತೊಮ್ಮೆ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (ಆರ್‌ಸಿಇಪಿ) ಸಹಿ ಹಾಕಲು ಹೊರಟಿದೆ. ಮುಂದೆ ದೊಡ್ಡ ಗಂಡಾಂತರ ಕಾದಿದೆ’ ಎಂದು ತಮಿಳುನಾಡಿನ ರೈತ ಹೋರಾಟಗಾರ ಕನ್ನಯ್ಯನ್ ಸುಬ್ರಮಣಿಯನ್ ಆತಂಕ ವ್ಯಕ್ತಪಡಿಸಿದರು.

ಇಕ್ರಾ ಸಂಸ್ಥೆ ನಗರದಲ್ಲಿ ಗುರುವಾರ ಆಯೋಜಿಸಿದ್ದ ಆರ್‌ಸಿಇಪಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಹಿಂದೆ ಡಬ್ಲ್ಯುಟಿಒ ಒಪ್ಪಂದಕ್ಕೆ ಸಹಿ ಹಾಕಿದ ಪರಿಣಾಮವಾಗಿ ಇಂದು ಎಲ್ಲಿ ನೋಡಿದರೂ ಚೀನಾದ ವಸ್ತುಗಳು ಕೈಗೆ ಸಿಗುತ್ತಿವೆ. ವಿದೇಶಿ ಸರಕುಗಳ ಆಮದಿಗೆ ಇರುವ ಸುಂಕವನ್ನು ತೆಗೆದು ಹಾಕಿದರೆ ನಮ್ಮ ದೇಶದ ಎಲ್ಲಾ ಸಣ್ಣ ಕೈಗಾರಿಕೆಗಳು ಮುಚ್ಚುವುದರಲ್ಲಿ ಅನುಮಾನವೇ ಇಲ್ಲ’ ಎಂದರು.

‘ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಕೈಗಾರಿಕೆಗಳ ಮಾದರಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುತ್ತಿವೆ. ಆ ಎರಡು ಮುಂದುವರಿದ ರಾಷ್ಟ್ರಗಳಿಗೆ ಪೈಪೋಟಿ ನೀಡುವಷ್ಟು ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ಭಾರತದ ಹಾಲು ಒಕ್ಕೂಟಗಳು ತಯಾರಿಸಲು ಸಾಧ್ಯವೇ ಇಲ್ಲ. ನಮ್ಮ ದೇಶದ ಗ್ರಾಹಕರನ್ನು ಸೆಳೆಯಲು ವಿದೇಶಿ ಕಂಪನಿಗಳಿಗೆ ಕಷ್ಟವಾಗುವುದಿಲ್ಲ’ ಎಂದು ಅವರು ಹೇಳಿದರು.

‘ಗ್ಯಾಟ್‌ ಒಪ್ಪಂದ ಏರ್ಪಡುವ ಸಂದರ್ಭದಲ್ಲಿ ಅದರಲ್ಲಿ ಏನೇನು ಅಂಶಗಳಿವೆ ಎಂಬುದು ಸಾರ್ವಜನಿಕರಿಗೆ ಗೊತ್ತಿತ್ತು. ಅದರಲ್ಲಿರುವ ಲೋಪಗಳನ್ನು ಕಾನೂನು ತಜ್ಞರಾಗಿದ್ದ ರೈತ ಹೋರಾಟಗಾರ ಪ್ರೊ. ಎಂ. ನಂಜುಂಡಸ್ವಾಮಿ ಅವರು ಎತ್ತಿ ಹಿಡಿದು ಇಡೀ ದೇಶದಲ್ಲಿ ರೈತರನ್ನು ಜಾಗೃತಗೊಳಿಸಿದ್ದರು. ಆರ್‌ಸಿಇಪಿಯಲ್ಲಿ ಏನೆಲ್ಲಾ ಅಂಶಗಳಿವೆ ಎಂಬುದು ಯಾರಿಗೂ ಗೊತ್ತಿಲ್ಲ. ಕತ್ತಲಲ್ಲಿ ಆನೆಯನ್ನು ತಡಕಾಡಿದಂತೆ ಕಲ್ಪನೆ ಮಾಡಿಕೊಂಡೇ ವಿರೋಧ ಮಾಡುತ್ತಿದ್ದೇವೆ. ಒಪ್ಪಂದದಲ್ಲಿ ಇರುವ ಅಂಶಗಳನ್ನು ಸಾರ್ವಜನಿಕರ ಮುಂದಿಟ್ಟು, ಜನರ ಅಭಿಪ್ರಾಯಗಳನ್ನೂ ಸರ್ಕಾರಗಳು ಪರಿಗಣಿಸಬೇಕು’ ಎಂದರು.

ಚಿಂತಕ ಡಾ. ಗೋಪಾಲ ದಾಬಡೆ, ‘ಬಹುರಾಷ್ಟ್ರೀಯ ಕಂಪನಿಗಳು ಎಲ್ಲಾ ದೇಶಗಳ ಸರ್ಕಾರಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿವೆ. ಇವುಗಳ ಒತ್ತಡಕ್ಕೆ ಮಣಿದು ಸ್ಥಳೀಯ ರೈತರ ಹಿತವನ್ನು ಸರ್ಕಾರಗಳು ಬಲಿಕೊಡಲು ಹೊರಟಿವೆ’ ಎಂದರು.

‘ದೇಶೀಯ ಆವಿಷ್ಕಾರಗಳನ್ನು ಕೊಲ್ಲುವ ಪ್ರಯತ್ನ ಇದಾಗಿದೆ. ಯಾರ ಕುತ್ತಿಗೆಯನ್ನಾದರೂ ಹಿಸುಕಿ ಹಣ ಮಾಡುವ ಸ್ಪರ್ಧೆಗೆ ಬಹುರಾಷ್ಟ್ರೀಯ ಕಂಪನಿಗಳು ಬಿದ್ದಿವೆ. ಮುಂದೆ ದೊಡ್ಡ ಗಂಡಾಂತರವೇ ಕಾದಿದ್ದು, ಇದರ ವಿರುದ್ಧ ಜನಜಾಗೃತಿ, ಹೋರಾಟಗಳು ನಡೆಯಬೇಕಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)