ಮಂಗಳವಾರ, ಮೇ 24, 2022
24 °C
ಎನ್‌ಜಿಒಗಳಿಗೆ ವಿದೇಶಿ ಶಕ್ತಿಗಳ ಬೆಂಬಲವಿದೆ ಎಂಬ ಹೇಳಿಕೆ ಸಲ್ಲಿಸಿದ್ದ ಪ್ರಾಧಿಕಾರ

ಪರಿಸರ ಸಂಸ್ಥೆಗಳಿಗೆ ದೇಣಿಗೆ ನೀಡಲು ಸಿದ್ಧ: ಹೈಕೋರ್ಟ್‌ಗೆ ಎನ್‌ಎಚ್‌ಎಐ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುವ ಎರಡು ಸಂಸ್ಥೆಗಳಿಗೆ ತಲಾ ₹2.50 ಲಕ್ಷ ದೇಣಿಗೆ ನೀಡಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು (ಎನ್‌ಎಚ್‌ಎಐ) ಹೈಕೋರ್ಟ್‌ಗೆ ತಿಳಿಸಿದೆ.

ಪರಿಸರ ಪರಿಣಾಮ ಮೌಲ್ಯಮಾಪನ(ಇಐಎ) ಪರಿಗಣಿಸದೆ ರಾಷ್ಟ್ರೀಯ ಹೆದ್ದಾರಿ 4 ವಿಸ್ತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಹೈಕೋರ್ಟ್‌ನಲ್ಲಿ ಯುನೈಟೆಡ್ ಕನ್ಸರ್ವೇಷನ್ ಮೂವ್‌ಮೆಂಟ್ ಚಾರಿಟಬಲ್ ಮತ್ತು ವೆಲ್ಫೇರ್ ಟ್ರಸ್ಟ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದ್ದ ಎನ್‌ಎಚ್‌ಎಐ ಅಧಿಕಾರಿಗಳು, ‘ಅರ್ಜಿ ಸಲ್ಲಿಸುವ ಬಹುತೇಕ ಸಂಘಟನೆಗಳು ಗೋಪ್ಯ ಉದ್ದೇಶಗಳನ್ನು ಒಳಗೊಂಡಿವೆ. ವಿದೇಶಿ ಶಕ್ತಿಗಳ ಬೆಂಬಲ ಪಡೆದಿರುತ್ತವೆ’ ಎಂದು ತಿಳಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಆಘಾತ ವ್ಯಕ್ತಪಡಿಸಿ, ‘ಈ ರೀತಿಯ ಬೀಸು ಹೇಳಿಕೆ ನೀಡಬಾರದು‘ ಎಂದು ಎಚ್ಚರಿಕೆ ನೀಡಿತ್ತು. ಅಲ್ಲದೇ ಆಕ್ಷೇಪಣೆ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ವಿಚಾರಣೆ ನಡೆಸುವಂತೆ ಎನ್‌ಎಚ್‌ಎಐ ಅಧ್ಯಕ್ಷರಿಗೆ ನಿರ್ದೇಶನ ನೀಡಿತ್ತು. ಈ ಹೇಳಿಕೆ ಸಲ್ಲಿಸಲು ಕಾರಣವಾದ ಅಧಿಕಾರಿಗಳ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು’ ಎಂದು ತಿಳಿಸಿತ್ತು.

ಆಕ್ಷೇಪಣೆಯ ಹೇಳಿಕೆ ಹಿಂಪಡೆಯಲು ಕೋರಿ ಎನ್‌ಎಚ್‌ಎಐ ಮತ್ತೆ ಮಧ್ಯಂತರ ಅರ್ಜಿ ಸಲ್ಲಿಸಿತು. ಬೀಸು ಹೇಳಿಕೆ ಸಲ್ಲಿಸಿದ ಕಾರಣಕ್ಕೆ ಸೂಕ್ತ ದಂಡ ಪಾವತಿಸಲೇಬೇಕು ಎಂದು ಪೀಠ ಈ ಹಿಂದಿನ ವಿಚಾರಣೆ ವೇಳೆ ನಿರ್ದೇಶನ ನೀಡಿತ್ತು. ‘ನ್ಯಾಯಾಲಯ ಆದೇಶ ಹೊರಡಿಸುವ ಮೊದಲು ಯಾವ ಪರಿಸರ ಸಂಸ್ಥೆಗೆ ದೇಣಿಗೆ ಪಾವತಿಸಲು ಬಯಸುತ್ತದೆ ಎಂಬುದನ್ನು ಪ್ರಾಧಿಕಾರವೇ ತಿಳಿಸಬೇಕು’ ಎಂದೂ ತಿಳಿಸಿತ್ತು.

‘ಡೆಹ್ರಾಡೂನ್‌ನಲ್ಲಿರುವ ಐಸಿಎಫ್‌ಆರ್‌ಇ ( ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಆ್ಯಂಡ್ ಎಜುಕೇಷನ್ ಮತ್ತು ಡಬ್ಲ್ಯೂಐಐಗೆ(ಭಾರತೀಯ ವನ್ಯಜೀವಿ ಸಂಸ್ಥೆ) ತಲಾ ₹2.5 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ಎನ್‌ಎಚ್‌ಎಐ ಮಂಗಳವಾರ ವಿವರ ಸಲ್ಲಿಸಿತು. ವಿಚಾರಣೆಯನ್ನು ಪೀಠ ಫೆ.16ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು