ರಿಯಲ್ ಎಸ್ಟೇಟ್‌ ಉದ್ಯಮಿಗಳ ಹತ್ಯೆ

7
ಸಾಲ ವಾಪಸ್‌ ಕೇಳಿದ್ದಕ್ಕೆ ಕೃತ್ಯ: ಮೂವರ ಸೆರೆ

ರಿಯಲ್ ಎಸ್ಟೇಟ್‌ ಉದ್ಯಮಿಗಳ ಹತ್ಯೆ

Published:
Updated:

ಬೆಂಗಳೂರು: ಕೊಟ್ಟ ಸಾಲವನ್ನು ವಾಪಸ್‌ ಕೇಳಿದ್ದಕ್ಕಾಗಿ ರಿಯಲ್ ಎಸ್ಟೇಟ್‌ ಉದ್ಯಮಿಗಳಿಬ್ಬರನ್ನು ಅಪಹರಿಸಿ ಹತ್ಯೆ ಮಾಡಲಾಗಿದೆ. ಆ ಸಂಬಂಧ ರಿಯಲ್ ಎಸ್ಟೇಟ್ ಏಜೆಂಟ್ ತೇಜಸ್‌ ಹಾಗೂ ಆತನ ಇಬ್ಬರು ಸಹಚರರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ರಾಜರಾಜೇಶ್ವರಿನಗರ ಬಳಿಯ ಚನ್ನಸಂದ್ರದ ಪ್ರಸಾದ್‌ ಬಾಬು ಹಾಗೂ ಗಿರಿನಗರದ ಬಾಲಾಜಿ ಎಂಬುವರು ಜೂನ್ 27ರಂದು ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದರು. ಆ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು, ಸಾರಕ್ಕಿ ನಿವಾಸಿ ತೇಜಸ್‌ ಹಾಗೂ ಆತನ ಸಹಚರರಾದ ಮಣಿಕಂಠ್ ಮತ್ತು ಅನಿಲ್‌ನನ್ನು ವಶಕ್ಕೆ ಪಡೆದಿದ್ದರು. ಹತ್ಯೆ ಮಾಡಿರುವ ಸಂಗತಿಯನ್ನು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

‘ಹಣಕ್ಕಾಗಿ ಅಪಹರಿಸಿ ಕೊಲೆ ಮಾಡಿದ ಆರೋಪದಡಿ ಮೂವರನ್ನೂ ಬಂಧಿಸಿ 56ನೇ ಎಸಿಎಂಎಂ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ವಿಚಾರಣೆಗಾಗಿ ಮೂವರನ್ನು 7 ದಿನಗಳವರೆಗೆ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಆರೋಪಿ ತೇಜಸ್‌, ಪ್ರಸಾದ್ ಬಾಬು ಹಾಗೂ ಬಾಲಾಜಿ ಅವರಿಬ್ಬರಿಂದ ₹60 ಲಕ್ಷ ಸಾಲ ಪಡೆದಿದ್ದ. ಅದನ್ನು ಮರುಪಾವತಿಸುವಂತೆ ಉದ್ಯಮಿಗಳು ಒತ್ತಾಯಿಸುತ್ತಿದ್ದರು. ಹೀಗಾಗಿ ಅವರಿಬ್ಬರನ್ನು ಅಪಹರಿಸಿ ಹತ್ಯೆಮಾಡಲು ಸಹಚರರ ಜೊತೆ ಸೇರಿಕೊಂಡು ಆರೋಪಿ ಸಂಚು ರೂಪಿಸಿದ್ದ. ಚೆಕ್‌ ಕೊಡುವುದಾಗಿ ಹೇಳಿ ಉದ್ಯಮಿಗಳನ್ನು ಜೆ.ಪಿ.ನಗರದ ಇಂದಿರಾಗಾಂಧಿ ವೃತ್ತದಲ್ಲಿರುವ ತನ್ನಕಚೇರಿಗೆ ಜೂನ್ 27ರಂದು ಕರೆಸಿಕೊಂಡಿದ್ದ’.

‘ಕಚೇರಿಯಲ್ಲಿ ಮಾತನಾಡುತ್ತಿರುವಾಗಲೇ ಸಹಚರರನ್ನು ಕರೆಸಿಕೊಂಡಿದ್ದ ತೇಜಸ್‌, ಉದ್ಯಮಿಗಳನ್ನು ಕಾರಿನಲ್ಲಿ ಅಪಹರಿಸಿಕೊಂಡು ಅವಲಹಳ್ಳಿಯ ಗೋದಾಮಿಗೆ ಕರೆದೊಯ್ದಿದ್ದ. ಕುರ್ಚಿಗಳಿಗೆ ಅವರಿಬ್ಬರನ್ನು ಕಟ್ಟಿಹಾಕಿ ಚಿತ್ರಹಿಂಸೆ ನೀಡಿದ್ದ. ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಈ ಸಂಗತಿಯನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾನೆ’ ಎಂದು ಅಧಿಕಾರಿ ಹೇಳಿದರು.

‘ಕನಕಪುರ ರಸ್ತೆಯ ಹಾರೋಹಳ್ಳಿಯಲ್ಲಿ ತೇಜಸ್‌ ಒಡೆತನದ ಫಾರ್ಮ್‌ಹೌಸ್ ಇದೆ. ಅದರ ಸಮೀಪದಲ್ಲೇ ಇರುವ ನಿರ್ಜನ ಪ್ರದೇಶದಲ್ಲಿ ಜೆಸಿಬಿ ಯಂತ್ರದಿಂದ ಗುಂಡಿ ತೆಗೆದು ಎರಡೂ ಶವಗಳನ್ನು ಹೂತು ಹಾಕಿರುವ ಅನುಮಾನವಿದೆ. ಈ ಸಂಬಂಧ ಜೆಸಿಬಿ ಯಂತ್ರದ ಚಾಲಕ ಮಾಹಿತಿ ನೀಡಿದ್ದಾನೆ. ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಬೇಕಿದೆ’ ಎಂದು ಹೇಳಿದರು.

ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ: ‘ಉದ್ಯಮಿಗಳ ಅಪಹರಣಕ್ಕೂ ಮುನ್ನ ಆರೋಪಿಗಳು, ಅವರಿಬ್ಬರ ಮನೆ ಬಳಿಯೇ ಓಡಾಡಿದ್ದರು. ಆ ದೃಶ್ಯವು ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದು ಸಹ ಆರೋಪಿಗಳ ಪತ್ತೆಗೆ ನೆರವಾಯಿತು’ ಎಂದು ಅಧಿಕಾರಿ ಹೇಳಿದರು.

ತೇಜಸ್‌ ವಿರುದ್ಧ ದೂರು ನೀಡಿದ್ದ ಉದ್ಯಮಿಯ ಪತ್ನಿ: ‘ತೇಜಸ್‌ನನ್ನು ಭೇಟಿ ಮಾಡಿ ಬರುವುದಾಗಿ ಹೇಳಿ ಮನೆಯಿಂದ ಹೊರಬಂದಿದ್ದ ಪ್ರಸಾದ್‌, ವಾಪಸ್‌ ಹೋಗಿರಲಿಲ್ಲ. ಆತಂಕಗೊಂಡಿದ್ದ ‍ಪತ್ನಿ ಅನಿತಾ, ತೇಜಸ್‌ ಕಚೇರಿ ಬಳಿ ಹೋಗಿದ್ದರು. ಕಚೇರಿ ಎದುರು ಪ್ರಸಾದ್ ಅವರ ಸುಜಕಿ ಆಕ್ಸಿಸ್‌ ಬೈಕ್‌ ಇತ್ತು. ಆ ಬಗ್ಗೆ ವಿಚಾರಿಸಿದಾಗ ಯಾವುದೇ ಉತ್ತರ ಸಿಕ್ಕಿರಲಿಲ್ಲ. ಬಳಿಕವೇ ಅಪಹರಣ ಆರೋಪದಡಿ ತೇಜಸ್‌ ದೂರು ನೀಡಿದ್ದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು. 

‘ತೇಜಸ್‌ನನ್ನು ವಿಚಾರಣೆಗೆ ಒಳಪಡಿಸಿದಾಗ, ‘ನಾನು ಅಮಾಯಕ’ ಎಂದು ಹೇಳಿದ್ದ. ಹೀಗಾಗಿ, ಆತನನ್ನು ಬಿಟ್ಟು ಕಳುಹಿಸಲಾಗಿತ್ತು. ಇನ್ನೊಬ್ಬ ಉದ್ಯಮಿ ಬಾಲಾಜಿ ಸಹ ನಾಪತ್ತೆಯಾದ ಬಗ್ಗೆ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡೂ ಪ್ರಕರಣದಲ್ಲಿ ಸಾಮ್ಯತೆ ಇರುವುದು ಮೇಲ್ನೋಟಕ್ಕೆ ಗೊತ್ತಾಯಿತು. ಅವುಗಳ ತನಿಖೆಗೆ ನಿಯೋಜಿಸಲಾಗಿದ್ದ ವಿಶೇಷ ತಂಡ, ಪುನಃ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.


ಪ್ರಸಾದ್‌ ಬಾಬು ಬಾಲಾಜಿ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !