ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ವೇಳೆ ಹಾಕಿದ ಡಾಂಬರ್‌ ತೆರವು– ರಸ್ತೆಗೆ ಮರು ಡಾಂಬರೀಕರಣ

Last Updated 13 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕದ ಉಪನಗರದ ಸೋಮೇಶ್ವರನಗರದ 3 ಎ ಮುಖ್ಯರಸ್ತೆಯ 2ಎ ಅಡ್ಡ ರಸ್ತೆಯಲ್ಲಿ ಸುರಿವ ಮಳೆಯ ನಡುವೆಯೇ ಇತ್ತೀಚೆಗೆ ಹಾಕಿದ್ದ ಡಾಂಬರನ್ನು ಕಿತ್ತು ಈ ರಸ್ತೆಗಳಿಗೆ ಬಿಬಿಎಂಪಿ ಮರು ಡಾಂಬರೀಕರಣ ಮಾಡಿದೆ.

ಸುರಿವ ಮಳೆಯಲ್ಲೇ ಡಾಂಬರೀಕರಣ ಕಾಮಗಾರಿ ನಡೆಸಿದ ಬಗ್ಗೆ ‘ಪ್ರಜಾವಾಣಿ’ ಜೂನ್‌ 4ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿತ್ತು. ಮಳೆ ಬರುವ ಸಂದರ್ಭದಲ್ಲಿ ಡಾಂಬರೀಕರಣ ನಡೆಸಿದರೆ ಕಾಮಗಾರಿಯ ಗುಣಮಟ್ಟ ಹೇಗೆ ಕಳಪೆ ಆಗಲಿದೆ, ಅದರಿಂದ ರಸ್ತೆಯ ಬಾಳಿಕೆ ಮೇಲೆ ಏನೆಲ್ಲ ದುಷ್ಪರಿಣಾಮ ಉಂಟಾಗಲಿದೆ ಎಂಬ ಬಗ್ಗೆ ತಜ್ಞರ ಅಭಿಪ್ರಾಯ ಸಮೇತ ವಿವರಿಸಿತ್ತು.

‘ಪ್ರಜಾವಾಣಿಯಲ್ಲಿ ವರದಿ ಪ್ರಕಟವಾದ ಬಳಿಕ ಬಿಬಿಎಂಪಿ ಅಧಿಕಾರಿಗಳು ಡಾಂಬರನ್ನು ತೆಗೆಯಿಸಿದ್ದರು. ಭಾನುವಾರ ಹೊಸತಾಗಿ ಡಾಂಬರೀಕರಣ ನಡೆಸಲಾಗಿದೆ. ಈ ಸಲದ ಕಾಮಗಾರಿಯ ಗುಣಮಟ್ಟವೂ ಚೆನ್ನಾಗಿದೆ’ ಎಂದು ಸ್ಥಳೀಯ ನಿವಾಸಿ ಡಾ.ಆನಂದ ಕುಮಾರ್‌ ತಿಳಿಸಿದರು.

‘ಮಳೆ ಸುರಿವ ಸಂದರ್ಭದಲ್ಲಿ ಡಾಂಬರೀಕರಣ ಕಾಮಗಾರಿ ನಡೆಸದಂತೆ ಕೇಳಿಕೊಂಡರೂ ಗುತ್ತಿಗೆದಾರರು ನಮ್ಮ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹಾಕಿದ ಡಾಂಬರನ್ನು ತೆಗೆಯಿಸುವ ಮೂಲಕ ಬಿಬಿಎಂಪಿ ಉತ್ತಮ ಕೆಲಸ ಮಾಡಿದೆ. ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಡೆಸಿದರೂ ಕೇಳುವವರಿಲ್ಲ ಎಂದು ಭಾವಿಸುವ ಗುತ್ತಿಗೆದಾರರಿಗೆ ಇದೊಂದು ಪಾಠವಾಗಬೇಕು. ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡರೆ ತಮಗೆ ನಷ್ಟ ಉಂಟಾಗಲಿದೆ ಎಂಬುದು ಪ್ರತಿಯೊಬ್ಬ ಗುತ್ತಿಗೆದಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.

‘ಬಿಸಿ ಡಾಂಬರು– ಜಲ್ಲಿ ಮಿಶ್ರಣವು ಕನಿಷ್ಠ ಪಕ್ಷ 160 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶವನ್ನು ಹೊಂದಿರಬೇಕು. ಜಲ್ಲಿ–ಡಾಂಬರು ಮಿಶ್ರಣವನ್ನು ರಸ್ತೆಗೆ ಹಾಕುವಾಗ ಅದರ ಉಷ್ಣಾಂಶ ಕಡಿಮೆ ಎಂದರೂ 120 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಇರಬೇಕು. ಅದಕ್ಕಿಂತ ಕಡಿಮೆ ಆದರೆ ರಸ್ತೆಯ ಮೇಲ್ಮೈಗೆ ಮಿಶ್ರಣವು ಸರಿಯಾಗಿ ಅಂಟಿಕೊಳ್ಳುವುದಿಲ್ಲ. ರಸ್ತೆ ಮೇಲ್ಮೈಗೆ ಅಂಟು ಪದರದ ರೂಪದಲ್ಲಿ ಹಾಕುವ ದ್ರವ ಡಾಂಬರು ಕೂಡಾಮಳೆ ಬರುವಾಗ ತಣ್ಣಗಾಗುತ್ತದೆ. ಆಗ ರಸ್ತೆಯ ಮೇಲ್ಮೈ ಡಾಂಬರು ಮಿಶ್ರಣವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಜಲ್ಲಿ– ಡಾಂಬರು ಮಿಶ್ರಣ ತಣ್ಣಗಾದ ಬಳಿಕ ಬಳಸಿದರೆ ಅದು ದೋಸೆಯಂತೆ ಕಿತ್ತುಬರುತ್ತದೆ’ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT