ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಗುರಿದ ಮಾವು, ಫಸಲು ಕುಸಿತ?

ಮಾವು ಬೆಳೆ ಇಳಿಕೆ: ಸಂಕಷ್ಟದಲ್ಲಿ ರೈತರು
Last Updated 13 ಮಾರ್ಚ್ 2022, 21:34 IST
ಅಕ್ಷರ ಗಾತ್ರ

ದಾಬಸ್‌‌ಪೇಟೆ: ನೆಲಮಂಗಲ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆಯಾದ ಮಾವು ಹೆಚ್ಚಿನ ಪ್ರಮಾಣದಲ್ಲಿ ಚಿಗುರಿದ್ದು, ಫಸಲು ಕಡಿಮೆಯಾಗಿ ರೈತರನ್ನು ಆತಂಕಕ್ಕೆ ತಳ್ಳಿದೆ.

‘ತಾಲ್ಲೂಕಿನಲ್ಲಿ ಸುಮಾರು 1,875 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಇದೆ. ಮುಂಗಾರಿನಲ್ಲಿ ಬಂದ ಅಧಿಕ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಗಿಡಗಳು ಚಿಗುರಿದ್ದು, ಈಗ ಹೂವು ಕಚ್ಚಲು ಸಾಧ್ಯವಾಗದೆ ಇಳುವರಿ ಕುಸಿಯಲಿದೆ’ ಎನ್ನುತ್ತಾರೆ ತೋಟಗಾರಿಕೆ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ.

ಬಾದಾಮಿ, ಮಲ್ಲಿಕಾ, ರಸಪೂರಿ, ಬೆನಿಶಾ ಇಲ್ಲಿನ ಪ್ರಮುಖ ತಳಿಗಳು. ಈ ತಳಿಯ ಗಿಡಗಳಲ್ಲಿ ‌ಹೂವು ಹೀಚಾಗಲು ಬಿಸಿಲ ಶಾಖ ಬೇಕಾಗುತ್ತದೆ. ಈ ಬಾರಿ ಮಳೆಯಿಂದ ಬಿಸಿಲು ಕಡಿಮೆಯಾಗಿ ಮರಗಳು ಚಿಗುರಿದವು.
ಒಳ ಭಾಗದಲ್ಲಿ ಇದ್ದ ಬಿಸಿಲ ಶಾಖ ತಗುಲಿದ ಹೂವುಗಳಷ್ಟೇ ಕಾಯಿ ಕಟ್ಟುತ್ತಿವೆ ಎಂದರು.

ಕಳೆದ ಬಾರಿ ಉತ್ತಮ ಫಸಲು ಇದ್ದರೂ ಕೋವಿಡ್ ಕಾರಣದಿಂದ ರೈತರು ಗಿಡದಿಂದ ಹಣ್ಣು ಕೀಳಲೇ ಇಲ್ಲ. ಇದರಿಂದ ರೈತರು ನಷ್ಟ ಅನುಭವಿಸಿದರು.ಈ ಬಾರಿ ಫಸಲು ಕಡಿಮೆ ಆಗಿದ್ದು, ರೈತರಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆ ಇದೆ. ರೈತರು ಹಾಪ್ ಕಾಮ್ಸ್ ಮಳಿಗೆಗಳು, ಮೇಳಗಳು ಹಾಗೂ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮಕ್ಕೆ ಸರಬರಾಜು ಮಾಡಿದರೆ ದಲ್ಲಾಳಿಗಳ ಕಾಟದಿಂದ ಮುಕ್ತರಾಗಬಹುದು.

ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಿಸುವುದಕ್ಕಿಂತ ನೈಸರ್ಗಿಕವಾಗಿ ಹಣ್ಣು ಮಾಡಿಸಿದರೆ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು.

ಮಾವಿನಲ್ಲಿ ಕಂಡು ಬರುವ ಜಿಗಿ ರೋಗ, ಬೂದಿ ರೋಗ ನಿಯಂತ್ರಣಕ್ಕೆ ಅವಕಾಶ ಇದೆ. ಸಾವಯವ ಔಷಧ ಸಿಂಪಡಿಸುವುದರಿಂದ ಉತ್ತಮ ಫಸಲು ಬರುತ್ತದೆ ಎಂದು ಸುಬ್ರಹ್ಮಣ್ಯ ತಿಳಿಸಿದರು.

‘ಕಳೆದ ವರ್ಷ ಬೆಲೆ ಕುಸಿತವಾದರೆ ಈ ವರ್ಷ ಫಸಲು ಕಡಿಮೆಯಾಗಿ ಮಾವು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ.ಬೇಸತ್ತಿರುವ ರೈತರು ಮಾವಿನ ಗಿಡಗಳನ್ನು ತಮ್ಮ ಜಮೀನಿನಿಂದ ತೆಗೆಸುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಮಾವು ಬೆಳೆಗಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT