ಭಾನುವಾರ, ಆಗಸ್ಟ್ 25, 2019
20 °C

ವೈದ್ಯಕೀಯ ಕಾಲೇಜುಗಳ ಅಕ್ರಮ: ‘ಹೆಚ್ಚುವರಿ ಶುಲ್ಕ ವಾಪಸ್ ಪಡೆಯಿರಿ’

Published:
Updated:

ಬೆಂಗಳೂರು: ವೈದ್ಯಕೀಯ ಕಾಲೇಜುಗಳು ವಿದ್ಯಾರ್ಥಿಗಳಿಂದ ಪಡೆದ ಹೆಚ್ಚುವರಿ ಶುಲ್ಕವನ್ನು ಶೇ 6ರ ಬಡ್ಡಿದರದಲ್ಲಿ ಮರುಪಾವತಿ ನೀಡಲು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಮೂಲಕ ಸೂಚಿಸಬೇಕು ಎಂದು ನ್ಯಾಯಮೂರ್ತಿ ಬಿ.ಮನೋಹರ್‌ ನೇತೃತ್ವದ ಪ್ರವೇಶಾತಿ ಮೇಲ್ವಿಚಾರಣಾ ಸಮಿತಿ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

2017–18ನೇ ಸಾಲಿನಲ್ಲಿ ಬೆಂಗಳೂರು ಮತ್ತು ಮಂಗಳೂರಿನ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳು ಪಡೆದ ಹೆಚ್ಚುವರಿ ಶುಲ್ಕದ ಕುರಿತಂತೆ ಪೋಷಕರು ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶ ಹೊರಬಿದ್ದಿದೆ. ಈ ಕಾಲೇಜುಗಳು ಸರ್ಕಾರಿ ಕೋಟಾದ ವಿದ್ಯಾರ್ಥಿಗಳಿಂದ ₹ 77.500 ಶುಲ್ಕ ಪಡೆಯಬೇಕಿತ್ತು. ಆದರೆ ₹ 3 ಲಕ್ಷದವರೆಗೆ ಶುಲ್ಕ ಪಡೆದಿದ್ದವು.  

‘ಕಾಲೇಜುಗಳು ಶೇ 6ರ ಬಡ್ಡಿದರದಲ್ಲಿ ಶುಲ್ಕ ವಾಪಸ್‌ ನೀಡದಿದ್ದರೆ, ಸಂಗ್ರಹಿಸಿದ ಹೆಚ್ಚುವರಿ ಶುಲ್ಕದ ದುಪ್ಪಟ್ಟು ಮೊತ್ತವನ್ನು ದಂಡ ರೂಪದಲ್ಲಿ ವಿಧಿಸಬೇಕು, ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಶಿಫಾರಸು ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2018–19ನೇ ಸಾಲಿನಲ್ಲಿ ಶುಲ್ಕ ನಿಯಂತ್ರಣ ಸಮಿತಿ ಜಾರಿಯಲ್ಲಿದ್ದರಿಂದ ಹೆಚ್ಚುವರಿ ಶುಲ್ಕ ಸಂಗ್ರಹಿಸಿದ ದೂರು ಬಂದಿಲ್ಲ ಎಂದು ಸಮಿತಿಯ ಸದಸ್ಯರು ಹೇಳಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ವಿದ್ಯಾರ್ಥಿಯೊಬ್ಬರಿಗೆ ನೀಡಲಾದ ₹ 3 ಲಕ್ಷದ ಸಾಲವನ್ನೂ ಖಾಸಗಿ ವೈದ್ಯಕೀಯ ಕಾಲೇಜೊಂದು 2ನೇ ವರ್ಷದ ಶುಲ್ಕದ ಸಲುವಾಗಿ ತಡೆಹಿಡಿದಿತ್ತು. ಆ ಹಣವನ್ನು 30 ದಿನದೊಳಗೆ ವಿದ್ಯಾರ್ಥಿಗೆ ನೀಡಬೇಕು ಎಂದು ಸಮಿತಿ ಸೂಚಿಸಿದೆ.

Post Comments (+)