ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಆಡಳಿತಾಧಿಕಾರಿ ಅವಧಿ ಅಂತ್ಯ: ಕ್ರಮಕೈಗೊಳ್ಳದ ಸರ್ಕಾರ

ಆಡಳಿತದಲ್ಲಿ ನಿರ್ವಾತ ಸೃಷ್ಟಿ?
Last Updated 16 ಮಾರ್ಚ್ 2021, 20:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಗೆ ಅನಿವಾರ್ಯ ಕಾರಣಗಳಿಂದ ಆಡಳಿತಾಧಿಕಾರಿಯನ್ನು ನೇಮಿಸಿದರೂ, ಸಂವಿಧಾನದ ಪ್ರಕಾರ ಅವರ ಅವಧಿ ಆರು ತಿಂಗಳು ಮೀರುವಂತಿಲ್ಲ. ಸದ್ಯಕ್ಕೆ ಇರುವ ಯಾವುದೇ ಕಾನೂನುಗಳಲ್ಲೂ ಆಡಳಿತಾಧಿಕಾರಿಯನ್ನು ಮುಂದುವರಿಸುವುದಕ್ಕೆ ಅವಕಾಶಗಳಿಲ್ಲ. ಆದರೆ, ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಸರ್ಕಾರ ಬಿಬಿಎಂಪಿಗೆ 2020ರ ಸೆ.10ರಂದು ಆಡಳಿತಾಧಿಕಾರಿಯನ್ನು ನೇಮಿಸಿ ಅಧಿಸೂಚನೆ ಹೊರಡಿಸಿತ್ತು. ಮುಂದಿನ ಆದೇಶದವರೆಗೆ ಗೌರವ್‌ ಗುಪ್ತ ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಆ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಸಂವಿಧಾನದ ಪ್ರಕಾರ ಅವರ ಆಡಳಿತಾವಧಿ 2021ರ ಮಾ.10ಕ್ಕೆ ಮುಗಿದಿದೆ.

ಈ ಹಿಂದೆ 1976ರ ಕರ್ನಾಟಕ ಪೌರಾಡಳಿತ ಕಾಯ್ದೆಯ ಸೆಕ್ಷನ್‌ 100 ಚುನಾಯಿತ ಕೌನ್ಸಿಲ್‌ನನ್ನು ವಿಸರ್ಜಿಸಿದಾಗ ಹಾಗೂ ಇತರ ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಕ ಮಾಡಲು ಅವಕಾಶ ಇತ್ತು. ಈಗ ಬಿಬಿಎಂಪಿ ಕಾಯ್ದೆ ಪ್ರಕಾರ ಪಾಲಿಕೆ ಆಡಳಿತ ನಡೆಯುತ್ತಿದೆ. ಹೊಸ ಬಿಬಿಎಂಪಿ ಕಾಯ್ದೆಯಲ್ಲಿ ಸೆಕ್ಷನ್‌ 126ರ ಪ್ರಕಾರ ಚುನಾಯಿತ ಕೌನ್ಸಿಲ್‌ ವಿಸರ್ಜಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯನ್ನು ವಿಸರ್ಜಿಸಿದರೆ ಆ ದಿನಾಂಕದಿಂದ ಆರು ತಿಂಗಳ ಒಳಗೆ ಕೌನ್ಸಿಲ್‌ ಅನ್ನು ಪುನರ್‌ ರಚಿಸಬೇಕು ಎಂದೇ ಸೆಕ್ಷನ್‌ 126 (7) ಹೇಳುತ್ತದೆ. ಪಾಲಿಕೆಯ ಚುನಾಯಿತ ಕೌನ್ಸಿಲನ್ನು ವಿಸರ್ಜಿಸಿದರೆ ಮಾತ್ರ ಅಧಿಸೂಚನೆ ಹೊರಡಿಸುವ ಮೂಲಕ ವಿಸರ್ಜನೆಯ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 127 ಅವಕಾಶ ಕಲ್ಪಿಸುತ್ತದೆ. ಅಗತ್ಯ ಬಿದ್ದರೆ ಆಡಳಿತಾಧಿಕಾರಿಯ ಅವಧಿಯನ್ನು ಮೊಟಕುಗೊಳಿಸಲು ಅಥವಾ ವಿಸ್ತರಿಸುವುದಕ್ಕೂ ಈ ಸೆಕ್ಷನ್‌ ಅವಕಾಶ ಕಲ್ಪಿಸುತ್ತದೆ.

ಕುಪ್ಪುಸ್ವಾಮಿ ಮತ್ತು ರಾಜ್ಯ ಸರ್ಕಾರದ ನಡುವಿನ ಪ್ರಕರಣದಲ್ಲಿ ಹೈಕೋರ್ಟ್‌ 1995ರ ಸೆ 12ರಂದು ನೀಡಿದ ಆದೇಶದಲ್ಲೂ ಚುನಾಯಿತ ಕೌನ್ಸಿಲ್‌ನ ಅವಧಿ ಮೀರುವ ಮುನ್ನವೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿತ್ತು. ‘ಚುನಾವಣೆ ನಡೆಯದ ಕಾರಣಕ್ಕೆ ಪಾಲಿಕೆ ಆಡಳಿತದಲ್ಲಿ ನಿರ್ವಾತ ಸೃಷ್ಟಿಯಾದರೆ ಅಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾವು ತನ್ನ ಕಾರ್ಯಾಂಗದ ಅಧಿಕಾರವನ್ನು ಬಳಸಿ ಆಡಳಿತಾಧಿಕಾರಿಯನ್ನು ನೇಮಿಸುವುದನ್ನು ಅನುಮತಿಸಲಾಗದು’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿತ್ತು.

‘ಆಡಳಿತಾಧಿಕಾರಿಯನ್ನು ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಮುಂದುವರಿಸಿದರೆ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗುತ್ತದೆ. ನ್ಯಾಯದಾನ ಪ್ರಕ್ರಿಯೆ ವಿಳಂಬ ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ಸಂಬಂಧಿಸಿದ ವ್ಯಾಜ್ಯವನ್ನು ಸುಪ್ರೀಂ ಕೋರ್ಟ್‌ ತ್ವರಿತವಾಗಿ ಇತ್ಯರ್ಥಪಡಿಸಬೇಕು. ಬಿಬಿಎಂಪಿಗೆ ಚುನಾವಣೆ ನಡೆಸುವುದಕ್ಕೆ ಅನುವು ಮಾಡಿಕೊಡಬೇಕು’ ಎನ್ನುತ್ತಾರೆ ಸುಪ್ರೀಂ ಕೋರ್ಟ್‌ ವಕೀಲ ಕೆ.ವಿ.ಧನಂಜಯ.

ಬಿಕ್ಕಟ್ಟು ನಿವಾರಣೆ – ಚುನಾವಣೆಯೊಂದೇ ದಾರಿ?

ಬಿಬಿಎಂಪಿ ಕಾಯ್ದೆಯಲ್ಲಿ ಹೇಳಲಾದ ಅಂಶಗಳ ಅನುಷ್ಠಾನಕ್ಕೆ ಬಿಕ್ಕಟ್ಟು ಎದುರಾದರೆ, ಅದನ್ನು ನಿವಾರಿಸುವುದಕ್ಕೆ ಈ ಕಾಯ್ದೆಯ ಸೆಕ್ಷನ್‌ 366 ಅವಕಾಶ ಕಲ್ಪಿಸುತ್ತದೆ. ಎದುರಾಗಿರುವ ಬಿಕ್ಕಟ್ಟು ನಿವಾರಿಸಲು ಸರ್ಕಾರ ಸಂದರ್ಭಾನುಸಾರ ಆದೇಶ ಹೊರಡಿಸಿ ಅದನ್ನು ರಾಜ್ಯಪತ್ರದಲ್ಲಿ ಪ್ರಕಟಿಸಬಹುದು ಎನ್ನುತ್ತದೆ ಈ ಸೆಕ್ಷನ್‌. ಆದರೆ, ಈ ಸೆಕ್ಷನ್‌ ಬಳಸಿ ಆಡಳಿತಾಧಿಕಾರಿಯನ್ನು ಮುಂದುವರಿಸುವುದು ಕಷ್ಟಸಾಧ್ಯ ಎನ್ನುತ್ತಾರೆ ಕಾನೂನು ತಜ್ಞರು.

ಬಿಕ್ಕಟ್ಟು ನಿವಾರಣೆಯ ಅಧಿಕಾರವನ್ನು ಹೇಗೆ ಬಳಸಬೇಕು ಎಂಬುದನ್ನು ಮಾಧವ ಉಪೇಂದ್ರ ಸಿನಾಯ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ನೀಡಿರುವ ತೀರ್ಪಿನಲ್ಲಿ (1975 (3) ಎಸ್‌ಸಿಸಿ 765) ಸುಪ್ರೀಂ ಕೋರ್ಟ್‌ ನಿರ್ದಿಷ್ಟಪಡಿಸಿದೆ. ಈ ಅಧಿಕಾರವನ್ನು ಸರ್ಕಾರ ಬೇಕಾಬಿಟ್ಟಿ ಬಳಸುವುದಕ್ಕೆ ಅವಕಾಶ ಇಲ್ಲ ಎಂಬುದು ತಜ್ಞರ ಅಭಿಪ್ರಾಯ.

‘ಸಂವಿಧಾನಾತ್ಮಕವಾಗಿ ಎದುರಾದ ಬಿಕ್ಕಟ್ಟು ನಿವಾರಣೆಗೆ ಬಿಕ್ಕಟ್ಟು ನಿವಾರಣೆಗೆ‘ಹೆನ್ರಿ VIII ವಿಧಿ' ಅಡಿಯ ಅಧಿಕಾರ ಬಳಸುವಂತೆಯೇ ಇಲ್ಲ. ಬಿಕ್ಕಟ್ಟು ನಿವಾರಣೆಗೆ ಕಾರ್ಯಾಂಗದ ಅಧಿಕಾರ ಬಳಸುವುದು ತೀರಾ ಅನಿವಾರ್ಯವೆಂದಾದರೆ, ಅದು ಕಾಯ್ದೆಯ ಅಂಶಗಳನ್ನು ಪರಿಣಾಮಕಾರಿಯಾಗಿಸುವುದಕ್ಕೆ ಸೀಮಿತವಾಗಿರಬೇಕೇ ಹೊರತು, ಅದಕ್ಕಿಂತ ಆಚೆಗಿನ ವ್ಯಾಪ್ತಿಯನ್ನು ಹೊಂದಿರಬಾರದು ಎಂಬುದನ್ನು ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅವರು ತಿಳಿಸಿದರು.

‘ಬಿಕ್ಕಟ್ಟು ನಿವಾರಣೆಗೆ ರಾಜ್ಯ ಸರ್ಕಾರವು ಒಂದೋ ಸಂವಿಧಾನದ 243– ಯು ವಿಧಿಯ ಪ್ರಕಾರ ಚುನಾವಣೆ ನಡೆಸಬೇಕು ಅಥವಾ ಆಡಳಿತಾಧಿಕಾರಿಯ ಅವಧಿ ವಿಸ್ತರಣೆಗೆ ಕ್ರಮ ಕೈಗೊಳ್ಳಬೇಕು. ಆಡಳಿತಾಧಿಕಾರಿಯನ್ನು ನೇಮಿಸಿದ್ದರೂ ಅವರ ಗರಿಷ್ಠ ಅವಧಿ ಆರು ತಿಂಗಳು. ಇದೂ ಮಾರ್ಚ್‌ 10ಕ್ಕೆ ಕೊನೆಗೊಂಡಿದೆ. ಹಾಗಾಗಿ ಚುನಾವಣೆ ನಡೆಸುವುದೊಂದೇ ಸರ್ಕಾರದ ಮುಂದಿರುವ ದಾರಿ’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT