ಶನಿವಾರ, ಆಗಸ್ಟ್ 13, 2022
26 °C
ಬಿಬಿಎಂಪಿ: ಕೋವಿಡ್‌ ಲಾಕ್‌ಡೌನ್‌: ಎರಡನೇ ಹಂತದ ತೆರವು

ದೇವಸ್ಥಾನ ಪ್ರವೇಶ, ಮದುವೆ ನಿರ್ಬಂಧ ಸಡಿಲಿಕೆ: ಎಚ್ಚರ ಅಗತ್ಯ ಎಂದ ಗೌರವ್ ಗುಪ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆಯನ್ನು ಹದ್ದುಬಸ್ತಿಗೆ ತರಲು ಜಾರಿಗೊಳಿಸಿರುವ ಲಾಕ್‌ಡೌನ್‌ ತೆರವಿನ ಎರಡನೇ ಹಂತದಲ್ಲಿ ದೇವಸ್ಥಾನಗಳ ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಹಾಗೂ ಮದುವೆ ಸಮಾರಂಭಗಳ ಮೇಲಿನ ನಿಯಂತ್ರಣ ಕ್ರಮಗಳ ಸಡಿಲಿಕೆ ಬಗ್ಗೆ ಬಿಬಿಎಂಪಿ ಸಹಮತ ಹೊಂದಿಲ್ಲ.

‘ಹಿಂದಿನ ಅನುಭವ ಆಧರಿಸಿ ಹೇಳುವುದಾದರೆ ದೇವಸ್ಥಾನಗಳಲ್ಲಿ ಹಾಗೂ ಮದುವೆ ಸಮಾರಂಭಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು ಇದೆ. ಇವುಗಳಿಗೆ ಅವಕಾಶ ಕಲ್ಪಿಸುವ ಮುನ್ನ ತಜ್ಞರ ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ತಿಳಿಸಿದರು.

ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಲಾಕ್‌ಡೌನ್‌ ಅನ್ನು ಇನ್ನಷ್ಟು ಸಡಿಲಗೊಳಿಸುವ ಸಮಯ ಬಂದಿದೆ. ಯಾವೆಲ್ಲ ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಎಂಬ ಬಗ್ಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ. ಜೀವನಾವಶ್ಯಕ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸುವ ಅಗತ್ಯವಿದೆ. ಕಾರ್ಖಾನೆಗಳಿಗೆ, ನಿರ್ಮಾಣ ಕಾರ್ಯಗಳಿಗೆ ಅಗತ್ಯವಿರುವ ಸಾಮಗ್ರಿ ಖರೀದಿಗೆ ಪೂರ್ತಿ ಅವಕಾಶ ಕಲ್ಪಿಸುವ ಚಿಂತನೆ ಇದೆ. ಆಯ್ದ ವಲಯಗಳಿಗೆ ಮಾತ್ರ ಪೂರ್ತಿ ನಿರ್ಬಂಧ ಸಡಿಲಿಕೆ ಮೂಲಕ ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಲಿದ್ದೇವೆ’ ಎಂದರು.

‘ಅಂಗಡಿ ಮಳಿಗೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸುವುದಕ್ಕೆ ಲಾಕ್‌ಡೌನ್‌ ತೆರವಿನ ಮುಂದಿನ ಹಂತದಲ್ಲಿ ಅವಕಾಶ ಕೊಡಬೇಕು. ಎಲ್ಲ ರೀತಿಯ ಮಳಿಗೆಗಳನ್ನು ತೆರೆಯಲು ಒಮ್ಮೆಲೆ ಅವಕಾಶ ಕಲ್ಪಿಸಿದರೆ ಪರಿಸ್ಥಿತಿ ನಿಯಂತ್ರಣ ತಪ್ಪಲಿದೆ. ವಾಸ್ತವಿಕ ಅಂಶಗಳನ್ನು ಆಧರಿಸಿ ಕ್ರಮಕೈಗೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯ‍ಪಟ್ಟರು.

‘ಸದ್ಯ ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇದೆ. ದರ್ಶಿನಿಗಳು, ಸಣ್ಣ ಪುಟ್ಟ ಹೋಟೆಲ್‌ಗಳನ್ನು ತೆರೆಯಲು ಹಾಗೂ ಅಲ್ಲೇ ಊಟ ಮಾಡಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇರುವುದು ನಿಜ. ಆದರೆ, ಕೋವಿಡ್‌ ಸೊಂಕು ಹರಡುತ್ತಿರುವುದರಿಂದ, ಅದರಿಂದಾಗುವ ಅಪಾಯವನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಾರ್ವಜನಿಕರ ಆರೋಗ್ಯ ಕಾಪಾಡುವ ಬಗ್ಗೆಯೂ ಎಚ್ಚರ ವಹಿಸಬೇಕು. ಅದೇ ವೇಳೆ ಬಡವರಿಗೆ ಊಟ ಒದಗಿಸಬೇಕಾಗಿದೆ. ಈ ಸಲುವಾಗಿ ಇಂದಿರಾ ಕ್ಯಾಂಟೀನ್‌ಗಳ ಮೂಲಕ ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಿಸುತ್ತಿದ್ದೇವೆ’ ಎಂದರು.

ಮಾರುಕಟ್ಟೆಗಳಲ್ಲಿ ವಹಿವಾಟಿಗೆ ಅವಕಾಶ ಕಲ್ಪಿಸುವ ಕುರಿತು ಪ್ರತಿಕ್ರಿಯಿಸಿದ ಗೌರವ್ ಗುಪ್ತ, ‘ಲಾಕ್‌ಡೌನ್‌ ತೆರವಿನ ಎರಡನೇ ಹಂತದಲ್ಲಿ ಮಾರುಕಟ್ಟೆಗಳಲ್ಲಿನ ಮಳಿಗೆಗಳು ವಹಿವಾಟು ನಡೆಸಲು ಅವಕಾಶ ಕಲ್ಪಿಸಿದರೆ ಅವು ಜನದಟ್ಟಣೆ ಪ್ರದೇಶವಾಗಿ ಮಾರ್ಪಡುತ್ತದೆ. ಒಂದೇ ಕಡೆ ಜನ ಸೇರಿದರೆ ಮತ್ತೆ ಸಮಸ್ಯೆ ಆಗುತ್ತದೆ’ ಎಂದರು.

‘ಮಾಲ್‌ಗಳು, ಜಿಮ್‌ಗಳೂ ಜೀವನಕ್ಕೆ ಅವಶ್ಯಕ. ಆದರೆ ಅವುಗಳಿಗೆ ನಿರ್ಬಂಧ ವಿಧಿಸದೇ ಒಮ್ಮೆಲೇ ತೆರೆಯಲು ಅನುವು ಮಾಡಿಕೊಟ್ಟರೆ ಸೋಂಕು ಹರಡುವಿಕೆ ಹೆಚ್ಚುವ ಅಪಾಯ ಇದೆ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸಿದ ಬಳಿಕ ಸರ್ಕಾರವೇ ನಿರ್ಧಾರ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದರು. 

ಅನವಶ್ಯಕ ಸೌಕರ್ಯ ಕಡಿತ: ‘ನಮ್ಮಲ್ಲಿ ಕೆಲ ತಿಂಗಳ ಹಿಂದೆ ಅವಶ್ಯಕತೆಗೆ ತಕ್ಕಂತೆ ವಾರ್‌ ರೂಂಗಳು, ಶವ ಸಾಗಾಟ ವಾಹನಗಳು ಹಾಗೂ ಆಂಬ್ಯುಲೆನ್ಸ್‌ಗಳ ಸಂಖ್ಯೆ ಹೆಚ್ಚಿಸಿದ್ದೆವು. ಇವುಗಳಲ್ಲಿ ಅನವಶ್ಯಕವಾಗಿರುವ ಕೆಲವು ಸೌಕರ್ಯಗಳನ್ನು ಕಡಿತಗೊಳಿಸುತ್ತೇವೆ. ಆದರೆ, ಚಿಕಿತ್ಸಾ ನಿರ್ಧಾರ ಕೇಂದ್ರಗಳನ್ನು (ಟ್ರಯಾಜಿಂಗ್‌ ಸೆಂಟರ್‌) ಮುಂದುವರಿಸುತ್ತೇವೆ. ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡರೆ ಅದನ್ನು ನಿಯಂತ್ರಿಸಲು ಏನೆಲ್ಲ ಸೌಕರ್ಯಗಳ ಅಗತ್ಯ ಇರುತ್ತದೆಯೋ, ಅವುಗಳನ್ನು ಮುಂದುವರಿಸುತ್ತೇವೆ. ಮುಂಜಾಗ್ರತಾ ರೂಪದಲ್ಲಿ ಅವುಗಳಿಗೆ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕಾಗುತ್ತದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು