ಮಂಗಳವಾರ, ಮೇ 11, 2021
24 °C

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಇಂದು: ಸಚಿವ ಕೆ. ಸುಧಾಕರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಇಂದು (ಏ. 15) ವರದಿ ಕೊಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ನಾಳೆ (ಶುಕ್ರವಾರ) ಭೇಟಿ ಮಾಡಿ ವರದಿ ಬಗ್ಗೆ ಚರ್ಚೆ ಮಾಡುತ್ತೇನೆ. ಬಳಿಕ ಸೋಂಕು ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಕೋವಿಡ್‌ ನಿಯಂತ್ರಣಕ್ಕೆ ಬೇರೆ ರಾಜ್ಯಗಳಲ್ಲಿ ತೆಗೆದುಕೊಂಡಿರುವ ಕಠಿಣ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಮಹಾರಾಷ್ಟ್ರದಲ್ಲಿ ಜನತಾ ಕರ್ಪ್ಯೂ ಮಾಡಿದ್ದಾರೆ. ಮಹಾರಾಷ್ಟ್ರದಷ್ಟು ಸೋಂಕಿನ ಪ್ರಮಾಣ ನಮ್ಮಲ್ಲಿ ಇಲ್ಲ. ಹೀಗಾಗಿ, ಅದನ್ನು ಇಲ್ಲಿ ಮಾಡುವ ಅಗತ್ಯತೆ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ಮುಖ್ಯಮಂತ್ರಿ, ಗೃಹ ಸಚಿವರು ಸೇರಿದಂತೆ ಎಲ್ಲರೂ ಅವರ ವಲಯಗಳಲ್ಲಿ ಗಮನಿಸುತ್ತಿದ್ದಾರೆ. ಏನೇ ಆದರೂ ಜನರ ಸಹಕಾರ ಅಗತ್ಯ. ಕೆಲವು ಕಾರ್ಯಕ್ರಮಗಳನ್ನು ಮುಂದೂಡುವುದರಿಂದ ಜೀವ ಏನೂ ಹೋಗಲ್ಲ. ಜನರು ಸಹಕಾರ ನೀಡಬೇಕು’ ಎಂದೂ ಮನವಿ ಮಾಡಿದರು.

ಕೋವಿಡ್‌ನಿಂದ ಸಾವಿನ ಪ್ರಮಾಣ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾವಿನ ಪ್ರಮಾಣವನ್ನು ಎಷ್ಟು ಸೋಂಕಿತರಲ್ಲಿ ಎಷ್ಟು ಜನರ ಸಾವಾಗಿದೆ ಎಂದು ಅಳೆಯಬೇಕು. ನಮ್ಮಲ್ಲಿ ಶೇ 0.5 ಅಥವಾ ಶೇ 0.6 ರಷ್ಟು ಸಾವಿನ ಪ್ರಮಾಣ ಸದ್ಯ ಇದೆ. ಇದನ್ನು ಇನ್ನಷ್ಟು ಕಡಿಮೆ ಮಾಡುವ ಗುರಿ ಇದೆ’ ಎಂದರು.

ಕೆಲವು ಜಿಲ್ಲೆಗಳಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕೊರತೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನಮ್ಮ ರಾಜ್ಯದಲ್ಲಿ ರೆಮ್‌ಡಿಸಿವಿರ್ ತಯಾರು ಮಾಡುವ ಮೂರು ಕಂಪನಿಗಳಿವೆ. ರಾಜ್ಯದಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ರೆಮ್‌ಡಿಸಿವಿರ್ ಕೊರತೆ ಆಗಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವವರಿಗೆ ಬೇಕಾದರೆ ತಕ್ಷಣ ವ್ಯವಸ್ಥೆ ಮಾಡುತ್ತೇವೆ’ ಎಂದರು.

‘ಇಡೀ ದೇಶದಲ್ಲಿ ರೆಮ್‌ಡಿಸಿವಿರ್ ತಯಾರಿಕೆ ಕಡಿಮೆ ಆಗಿದೆ. ಅಕ್ಟೋಬರ್‌ನಿಂದ ಪ್ರಕರಣಗಳು ಕಡಿಮೆ ಆಗಿತ್ತು. ಹೀಗಾಗಿ, ಔಷಧದ ತಯಾರಿಕೆ ಕಡಿಮೆ ಆಗಿತ್ತು. ಸರ್ಕಾರಿ ವ್ಯವಸ್ಥೆಯಲ್ಲಿ ಚುಚ್ಚುಮದ್ದು ಕೊರತೆ ಆಗಿಲ್ಲ. ಇದರಲ್ಲಿ ರಾಜಕಾರಣ ಮಾಡಬಾರದು. ಎಲ್ಲರೂ ಸೇರಿ ಹೋರಾಟ ಮಾಡಿದರೆ ಕೊರೊನಾ ಸೋಂಕು ಎದುರಿಸಬಹುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು