ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ: ಸಿಟಿ ಜನರ ಹಕ್ಕಿನ ಹಬ್ಬ

Last Updated 25 ಜನವರಿ 2019, 19:45 IST
ಅಕ್ಷರ ಗಾತ್ರ

ಕಪ್ಪು, ಬಿಳುಪು, ಬಡವ, ಬಲ್ಲಿದ, ಹೆಣ್ಣು, ಗಂಡು.. ಜಗತ್ತು ಎಲ್ಲರಿಗೂ ಸೇರಿದ್ದು. ದೇಶವೂ ಅಷ್ಟೇ. ದೇಶವೆಂದರೆ ಒಂದು ನಕ್ಷೆಯಲ್ಲ. ಎಳೆದ ಗೆರೆಯೊಳಗೆ ಸೀಮಿತ ಭೂಪ್ರದೇಶವಷ್ಟೇ ಅಲ್ಲ. ಜನಸಂಸ್ಕೃತಿ, ಇತಿಹಾಸ, ಪರಂಪರೆಯೊಂದಿಗೆ ಬಾಳಿ ಬಹುತ್ವದ ಬದುಕನ್ನು ಸಾಕಾರಗೊಳಿಸಿಕೊಂಡ ನಾಗರಿಕತೆ. ಅದಕ್ಕೊಂದು ಅನನ್ಯ ವ್ಯಕ್ತಿತ್ವವನ್ನು ಸ್ಪಷ್ಟವಾಗಿ ಕಟ್ಟಿಕೊಟ್ಟಿದ್ದೇ ಸಂವಿಧಾನ. ಎಲ್ಲರೂ ಒಂದಾಗಿ ಬಾಳುವ, ಬದುಕುವ ಹಕ್ಕು ಕಲ್ಪಿಸಿದ ಮಹೋನ್ನತ ಕೃತಿ. ಅದನ್ನು ಅಧಿಕೃತವಾಗಿ ಒಪ್ಪಿ ಅನುಸರಿಸುತ್ತಿರುವ ದೇಶ ಭಾರತ. ಜನವರಿ 26 ಎಂದರೆ ರೋಮಾಂಚನ ಉಕ್ಕಿಸುವ, ಗಣರಾಜ್ಯೋತ್ಸವ ಎಂದು ಹೆಮ್ಮೆಯಿಂದ ನೆನೆವ ದಿನ. ಇಂಡಿಯಾ ಎಂದು ಜಗದ ಎಲ್ಲೆಡೆ ಹೆಸರಾಗಿರುವ ಅನನ್ಯ ದೇಶ ಇಂದು ಗಣರಾಜ್ಯೋತ್ಸವವನ್ನು ಹಕ್ಕಿನ ಹಬ್ಬವಾಗಿ ಆಚರಿಸುತ್ತಿದೆ. ಸಂವಿಧಾನಕ್ಹೆಕೊಂದು ಹೆಮ್ಮೆಯ ಸೆಲ್ಯೂಟ್‌ ಹೇಳುತ್ತಿದೆ. ಸಂವಿಧಾನ, ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಜನತೆಯ ಹಕ್ಕು.. ಒಟ್ಟೊಟ್ಟಿಗೆ ಸಂಭ್ರಮದಿಂದ ಸ್ಮರಿಸುವ ದಿನ. ಮತ್ತೆ ಮತ್ತೆ ನಮ್ಮ ಹಕ್ಕು, ಸಾಂವಿಧಾನಿಕ ಜವಾಬ್ದಾರಿಗಳನ್ನು ಎಚ್ಚರಿಸುವ ಈ ದಿನವನ್ನು ನಗರದ ಜನತೆ (ಸಿಟಿಜನರು) ಕಾಣುತ್ತಿರುವ, ಪರಿಭಾವಿಸುತ್ತಿರುವ ಪರಿಯನ್ನು ಕಟ್ಟಿಕೊಡುವಮೆಟ್ರೊ ಪ್ರಯತ್ನವಿದು.

* ಸಂವಿಧಾನ ಓದಿ, ಅರ್ಥೈಸಿ, ಮೈಗೂಡಿಸಿಕೊಳ್ಳಿ
ಎಲ್ಲ ಸ್ವತಂತ್ರ ದೇಶಗಳು ಗಣರಾಜ್ಯಗಳಲ್ಲ, ಆದರೆ ಎಲ್ಲ ಗಣರಾಜ್ಯಗಳು ಸ್ವತಂತ್ರ ದೇಶಗಳಾಗಿವೆ. 1947ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ಪಡೆದ ಭಾರತ 1950ರ ಜನವರಿ 26ರಂದು ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಅಳವಡಿಸಿಕೊಂಡಾಗಿನಿಂದ ಇದು ಗಣರಾಜ್ಯವಾಗಿದೆ. 70 ವರ್ಷಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಇದಕ್ಕೆ ನಮ್ಮ ಸಂವಿಧಾನವೇ ಕಾರಣ.

ಸಾಧಿಸಬೇಕಾದದ್ದು ಇನ್ನಷ್ಟಿವೆ. ಭ್ರಷ್ಟಾಚಾರ, ಭಯೋತ್ಪಾದನೆ, ಮೂಲಭೂತವಾದ, ಕೋಮುವಾದ, ಅಪರಾಧೀಕರಣ ಸೇರಿದಂತೆ ಹಲವಾರು ಸವಾಲುಗಳು ಮತ್ತು ಸಮಸ್ಯೆಗಳೂ ನಮ್ಮ ಮುಂದಿವೆ. ಕೆಲವರು ಇದಕ್ಕೆ ಸಂವಿಧಾನವೇ ಕಾರಣ ಎನ್ನುತ್ತಾರೆ. ಆದರೆ ಸಂವಿಧಾನದಲ್ಲಿ ಯಾವುದೇ ದೋಷವಿಲ್ಲ. ಸಂವಿಧಾನದ ಅನುಷ್ಠಾನದಲ್ಲಿನ ದೋಷದಿಂದಾಗಿ ಈ ಸವಾಲು, ಸಮಸ್ಯೆಗಳು ಇವೆ.

ಇದಕ್ಕಾಗಿ ನಮ್ಮ ಸಂವಿಧಾನ ಎಂಥದ್ದು. ಅದರಲ್ಲಿ ಏನೇನು ಹೇಳಲಾಗಿದೆ ಎಂಬುದನ್ನು ದೇಶದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಇದಕ್ಕಾಗಿ ಸಂವಿಧಾನವನ್ನು ಓದಬೇಕು. ಅದನ್ನು ಅರ್ಥೈಸಿಕೊಂಡು, ಅದರ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಇಡೀ ದೇಶವನ್ನು ಇನ್ನಷ್ಟು ಪ್ರಗತಿಯತ್ತ ಕೊಂಡೊಯ್ಯಬಹುದು. ಬಲಿಷ್ಠ ದೇಶವನ್ನಾಗಿಸಬಹುದು.

ಈ ಸಂಬಂಧ ನಾನು ನಾಲ್ಕು ತಿಂಗಳಿಂದ ‘ಸಂವಿಧಾನ ಓದು’ ಅಭಿಯಾನದಲ್ಲಿ ತೊಡಗಿದ್ದೇನೆ. ರಾಜ್ಯದ 25 ಜಿಲ್ಲೆಗಳಲ್ಲಿ ಸುತ್ತಾಡಿ ನೂರಕ್ಕೂ ಹೆಚ್ಚು ಕಾಲೇಜುಗಳಲ್ಲಿ, ವಿದ್ಯಾ ಸಂಸ್ಥೆಗಳಲ್ಲಿ ಸಂವಿಧಾನದ ಮಹತ್ವ, ಅದರಲ್ಲಿರುವ ಆಶಯಗಳನ್ನು ವಿದ್ಯಾರ್ಥಿಗಳು ಮತ್ತು ಯುವ ಪೀಳಿಗೆಗೆ ತಿಳಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ. ಸಂವಿಧಾನ ಮತ್ತು ಅದರಲ್ಲಿನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕೆಲಸ ಕಾರ್ಯಗಳು, ನಾಗರಿಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಹೇಳುತ್ತಿದ್ದೇನೆ.

ಮೀಸಲಾತಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ, ಧಾರ್ಮಿಕ ವಿಚಾರಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ, ಭ್ರಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲಗಳಿವೆ. ಅವುಗಳನ್ನು ಪರಿಹರಿಸಿ ಸಂವಿಧಾನದ ಆಶಯಗಳನ್ನು ಅವರಿಗೆ ಮನದಟ್ಟು ಮಾಡುತ್ತಿದ್ದೇನೆ.

– ಎಚ್‌.ಎನ್‌. ನಾಗಮೋಹನ್‌ ದಾಸ್‌, ವಿಶ್ರಾಂತ ನ್ಯಾಯಮೂರ್ತಿ

* ಅನುಷ್ಠಾನದ ದಿನ

ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಂವಿಧಾನವನ್ನು ಅರ್ಪಣೆ ಮಾಡಿದ ದಿನವೇ ಗಣರಾಜ್ಯೋತ್ಸವ. ಬಹಳ ವರ್ಷಗಳ ಕಾಲ ಹಂಬಲಿಸಿದ ಸಮಾನತೆ, ಮಾನವೀಯತೆ, ಸಹೋದರತೆ, ಜಾತ್ಯತೀತ, ಸಮಾಜವಾದಿ ಆಶಯಗಳನ್ನು ಮೂಡಿಸುವ ಸಂವಿಧಾನ ನಮ್ಮದು. ಅದರ ಅನುಷ್ಠಾನದ ದಿನವನ್ನು ನಾವು ಗಣರಾಜ್ಯದ ದಿನವೆಂದು ಸಂಭ್ರಮಿಸುತ್ತೇವೆ.

-ಲಕ್ಷ್ಮಿನಾರಾಯಣ ನಾಗವಾರ, ಡಿಎಸ್‌ಎಸ್‌ ಮುಖಂಡ

ಸಮಾನತೆ ಇರಲಿ
ಸಂವಿಧಾನ ಜಾರಿಗೆ ಬಂದು 70 ವರ್ಷವಾಯಿತು. ಆದರೆ, ಅದರ ಮಹತ್ವ ಈಗೀಗ ಅರಿವಿಗೆ ಬರುತ್ತಿದೆ. ಜಾತಿಪದ್ಧತಿಗಳ ರಾಜಕೀಯ ನಿರ್ಮೂಲನ ಆಗಲಿ. ದೇಶದಲ್ಲಿ ಸಮಾನತೆ, ಸೌಹಾರ್ದತೆ ಇರಲಿ. ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಲಿ ಎಂದು ಹಾರೈಸುತ್ತೇನೆ. ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

–ಎನ್.ಎಂ.ನಬಿ, ಮಾಜಿ ಸಚಿವ

ಆಚರಣೆಯೂ ಇಲ್ಲ
ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮವನ್ನು ಬಡಿದೆಬ್ಬಿಸಬೇಕಾದ ಮಹತ್ವದ ದಿನಗಳು, ‘ಒಂದು ದಿನದ ರಜೆ’ಯ ಬಾಬತ್ತುಗಳಾಗಿ ಪರಿಣಮಿಸುತ್ತಿವೆಯೇ? ಹೌದು ಎನ್ನುತ್ತಾರೆ, ಸಾಫ್ಟ್‌ವೇರ್‌ ಎಂಜಿನಿಯರ್‌ ಶಾಲಿನಿ ಧನರಾಜ್‌.

ರಾಷ್ಟ್ರೀಯತೆಯ ಮಹತ್ವ ಸಾರಬೇಕಾದ ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ದಿನಗಳು ಮಹತ್ವ ಕಳೆದುಕೊಂಡಿವೆ. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಟ್ಟದಲ್ಲಿ ಆಚರಣೆ ಮಾಡಿ ಮಹತ್ವ ತಿಳಿಸುವ ಅಭ್ಯಾಸ ಈಗ ನಿಂತೇ ಹೋಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರವೂ ನಿರ್ಲಕ್ಷ್ಯ ವಹಿಸಿರುವ ಕಾರಣ ಹೀಗಾಗಿದೆ. ಹೀಗಿರುವಾಗ, ಮಕ್ಕಳಲ್ಲಿ ರಾಷ್ಟ್ರಪ್ರೇಮ ಮೂಡಿಸುವ ಕೆಲಸ ಆಗುವುದಾದರೂ ಹೇಗೆ’ ಎಂದು ಶಾಲಿನಿ ಪ್ರಶ್ನಿಸುತ್ತಾರೆ.

ಸ್ವಾತಂತ್ರ್ಯೋತ್ಸವ ದಿನಾಚರಣೆ ಎಂದರೆ ಶಾಲಾ ಮಟ್ಟದ ಹಬ್ಬವೆಂಬಂತೆ ಸಂಭ್ರಮಿಸುತ್ತಿದ್ದ ಕಾಲವೊಂದಿತ್ತು. ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧೆಗಳನ್ನಾದರೂ ನಡೆಸಲಾಗುತ್ತಿತ್ತು. ಅಂತಹ ವಾತಾವರಣದಿಂದಾಗಿ ಮಕ್ಕಳು ಸಂವಿಧಾನದತ್ತ ಹಕ್ಕುಗಳು, ಮಹತ್ವಗಳನ್ನು ಅರಿತುಕೊಳ್ಳಲು ಅವಕಾಶ ಸಿಗುತ್ತಿತ್ತು ಎಂಬುದು ಅವರ ಅನಿಸಿಕೆ.

* ಆಶಯ ಈಡೇರಲಿ
ಸಂವಿಧಾನದ ಆಶಯ ಸಮಸಮಾಜದ ನಿರ್ಮಾಣ. ರಾಜಕೀಯ ಸ್ವಾತಂತ್ರ್ಯಕ್ಕಿಂತಲೂ ಭಿನ್ನವಾಗಿ ಸಾಮಾಜಿಕ, ಆರ್ಥಿಕ ಪ್ರಜಾಪ್ರಭುತ್ವ ಸಂವಿಧಾನದ ಆಶಯ. ಆರ್ಥಿಕವಾಗಿ ಸಂಪನ್ಮೂಲಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿಲ್ಲ. ತಾರತಮ್ಯಗಳು ಮುಂದುವರಿದಲ್ಲಿ ಪ್ರಜಾಪ್ರಭುತ್ವದ ಆಶಯ ಕುಸಿಯುತ್ತವೆ. ದೇಶದ ಪ್ರಜೆಗಳಿಗೆ ಧರ್ಮಾತೀತ, ಜಾತ್ಯತೀತವಾಗಿ ಅಭಿವೃದ್ಧಿ ಆಶಯಗಳಲ್ಲಿ ಸಕಾರಾತ್ಮವಾಗಿ ಒಳಗೊಳ್ಳುವಲ್ಲಿ ನಾಗರಿಕರು ಶ್ರಮಿಸಿದಲ್ಲಿ ಗಣರಾಜ್ಯೋತ್ಸವದ ಆಶಯ ಈಡೇರುತ್ತದೆ.

–ಬಾನು ಮುಷ್ತಾಕ್, ಹಿರಿಯ ಲೇಖಕಿ



* ಸರ್ಕಾರಗಳಿಗೆ ಧಿಕ್ಕಾರವಿರಲಿ
ಭಾರತವು ಗಣರಾಜ್ಯವಾಗಿ ಉಳಿದೇ ಇಲ್ಲ, ಶ್ರೀಮಂತ ಗಣಗಳ ರಾಜ್ಯವಾಗಿ ಪರಿವರ್ತಿತವಾಗಿದೆ. ಅಂತೆಯೇ ಪ್ರಜಾಪ್ರಭುತ್ವ ದೇಶವಾಗಿಯೂ ಉಳಿದಿಲ್ಲ. ಮಾರುಕಟ್ಟೆಯ ಪ್ರಭುತ್ವವಾಗಿ ಪರಿವರ್ತಿತವಾಗಿದೆ. ಉಚಿತ ತೆರಿಗೆ, ಕೈಉತ್ಪನ್ನಗಳ ಮಾರಾಟ ತೆರಿಗೆಗಳಿಂದ ಜೀವಿಸುತ್ತಿರುವ ಇಂದಿನ ಸರ್ಕಾರಗಳು ಜನಪರ ಸರ್ಕಾರ ಹೇಗೆ ತಾನೇ ಆದವು? ಅತ್ತ, ಕುಡಿತದಿಂದ ರೋಸಿಹೋದ ಗ್ರಾಮೀಣ ಮಹಿಳೆಯರು ಮದ್ಯಪಾನ ನಿಷೇಧಿಸಿ ಅಂತ ಬೇಡಿಕೆ ಇಟ್ಟು, ಸಾವಿರ ಸಾವಿರ ಸಂಖ್ಯೆಯಲ್ಲಿ ವಿಧಾನಸೌಧವನ್ನು ಮುತ್ತಿಗೆ ಹಾಕಲೆಂದು ನೂರಾರು ಕಿಲೋಮೀಟರ್ ದೂರದಿಂದ ನಡೆದುಬರುತ್ತಿದ್ದರೆ, ಇತ್ತ ವಿಧಾನಸೌಧ ಖಾಲಿಯಿದೆ. ಜನಪ್ರತಿನಿಧಿಗಳು ರೆಸಾರ್ಟ್‌ಗಳು ಕುಳಿತು, ಕುಡಿದು ರಾಜಕಾರಣದ ನೆಪದಲ್ಲಿ ರಾದ್ದಾಂತ ಮಾಡುತ್ತಿದ್ದಾರೆ. ತಾವೂ ಕುಡಿದು, ಬಡವರಿಗೂ ಕುಡಿಸಿ ಅನೈತಿಕತೆ ಮೆರೆಯುತ್ತಿರುವ ಜನಪ್ರತಿನಿಧಿಗಳಿಗೆ, ಸರ್ಕಾರಗಳಿಗೆ ಧಿಕ್ಕಾರವಿರಲಿ! ಕೈಉತ್ಪನ್ನದ ಬಡವರನ್ನು ಹಿಂಸಿಸುತ್ತಿರುವ ಸರ್ಕಾರಗಳಿಗೆ ಧಿಕ್ಕಾರವಿರಲಿ.

–ಪ್ರಸನ್ನ, ಹಿರಿಯ ರಂಗಕರ್ಮಿ

ಒಕ್ಕೂಟ ವ್ಯವಸ್ಥೆ ಅಗತ್ಯ
ಗಣರಾಜ್ಯ ಅನ್ನುವುದು ಬಹುತ್ವದ ಪ್ರತಿನಿಧಿ. ಭಾರತ ಒಂದು ದೇಶವಲ್ಲ. ಹಲವು ರಾಷ್ಟ್ರೀಯತೆಗಳ ಒಕ್ಕೂಟ. ವಿಭಿನ್ನತೆಯನ್ನು ಒಂದು ದೇಶವನ್ನಾಗಿ ಕಟ್ಟಿದ್ದು ಸ್ವಾತಂತ್ರ್ಯೋತ್ಸವದ ಆಂದೋಲನ. ಒಕ್ಕೂಟವಾಗಿ ಉಳಿಯದಿದ್ದರೆ, ನಗರ, ಗ್ರಾಮೀಣ ಪ್ರದೇಶದ ಅಂತರ್ ಸಂಬಂಧ ತಪ್ಪಿಹೋಗುತ್ತದೆ. ಬೇರೆ ರಾಜ್ಯಗಳ ಉತ್ಪನ್ನಗಳು ದೇಶದ ಎಲ್ಲೆಡೆ ಲಭ್ಯವಾಗುತ್ತಿದೆ. ಇತರ ರಾಜ್ಯಗಳ ಕಾರ್ಮಿಕರ ಶ್ರಮದ ಪ್ರತಿಫಲ ಉಣ್ಣುವಂತಾಗಿದೆ. ಇದು ಒಕ್ಕೂಟದ ವ್ಯವಸ್ಥೆಯಿಂದ ಸದೃಢವಾಗಿದೆ. ಇದರಿಂದ ನಗರದ ನಾಗರಿಕತೆ ಬೆಳೆಯುವಂತಾಗಿದೆ. ಭಾಷೆ, ಆರ್ಥಿಕ, ರಾಜಕೀಯ, ಧಾರ್ಮಿಕ ದಬ್ಬಾಳಿಕೆಗಳು ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವಂಥವು. ಪರಸ್ಪ‍ರ ಗೌರವದಿಂದ ಇರಲು ಒಕ್ಕೂಟ ವ್ಯವಸ್ಥೆ ಅಗತ್ಯವಿದೆ.

ಬೆಂಗಳೂರು ನಗರ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರು ಬಿಹಾರ, ಒರಿಸ್ಸಾ, ಈಶಾನ್ಯ ರಾಜ್ಯಗಳು ಮತ್ತು ಉ.ಕರ್ನಾಟಕ ಕಾರ್ಮಿಕರು. ಇದರಿಂದ ಅವರ ಜೀವನವೂ ನಿರ್ವಹಣೆಯಾಗುತ್ತದೆ. ಬೆಂಗಳೂರು ಕಟ್ಟುವ ಮತ್ತು ಸ್ವಚ್ಛತೆಯ ಕೆಲಸದಲ್ಲೂ ವಲಸಿಗರ ಪಾಲಿದೆ. ಇದೆಲ್ಲಾ ಸಾಧ್ಯವಾಗಿದ್ದು ಒಕ್ಕೂಟ ವ್ಯವಸ್ಥೆಯಿಂದ. ಇದೆಲ್ಲಾ ಸಾಧ್ಯವಾಗಿದ್ದು ಸಂವಿಧಾನ ಮತ್ತು ಗಣರಾಜ್ಯ ವ್ಯವಸ್ಥೆಯಿಂದ.

–ಡಾ.ಸಿದ್ಧನಗೌಡ ಪಾಟೀಲ, ಹಿರಿಯ ಕಾರ್ಮಿಕ ಹೋರಾಟಗಾರ

ಶೋಷಿತರಿಗೆ ನ್ಯಾಯ ಸಿಗಲಿ
ಗಣರಾಜ್ಯೋತ್ಸವ ಆಚರಣೆ ಮತ್ತು ಪರಿಕಲ್ಪನೆಯ ಬಗ್ಗೆ ನಮಗೆ ಗೌರವವಿದೆ. ಆದರೆ, ಪ್ರಸ್ತುತ ಕೇಂದ್ರ ಸರ್ಕಾರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ. ಗಣರಾಜ್ಯ ಪರಿಕಲ್ಪನೆಯ ನಡುವೆ ನಾವು ಸ್ವತಂತ್ರವಾಗಿ ರಾಜ್ಯ ಸರ್ಕಾರವನ್ನು ಆಯ್ಕೆ ಮಾಡಿದ್ದರೂ ಕೇಂದ್ರದ ಕಾನೂನನ್ನು ಗೌರವಿಸಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಗಂಭೀರವಾಗಿ ಯೋಚಿಸುವ ಅಗತ್ಯವಿದೆ.

ತೃತೀಯಲಿಂಗಿಗಳ ಹಕ್ಕುಗಳಿಗಾಗಿ ದೇಶಾದ್ಯಂತ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ನಮಗೆ ಒಮ್ಮತವಿಲ್ಲದ ಕೆಲ ನಿಯಮಗಳನ್ನು ಕಾನೂನು ಮೂಲಕ ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಈ ಬಾರಿ ರಾಜ್ಯಸಭೆಯಲ್ಲಿ ಈ ಬಗ್ಗೆ ಮಂಡನೆಯಾಗಲಿಲ್ಲವಾದರೂ, ಬಜೆಟ್ ಅಧಿವೇಶನದಲ್ಲಿ ಚರ್ಚೆಯಾಗುವ ಸಾಧ್ಯವಿದೆ. ಅಕಸ್ಮಾತ್ ಇದಕ್ಕೆ ಅನುಮೋದನೆ ದೊರೆತಲ್ಲಿ ರಾಜ್ಯ ಸರ್ಕಾರಗಳು ಅನಿವಾರ್ಯವಾಗಿ ಈ ಕಾನೂನನ್ನು ಪಾಲಿಸಬೇಕಾಗುತ್ತದೆ. ಒಕ್ಕೂಟ ಅಥವಾ ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ, ಶೋಷಿತ ಸಮುದಾಯಗಳಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕಿದೆ.

–ನಿಶಾ ಗೂಳೂರು, ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ

* ಸಂವಿಧಾನ ದಿನವಾಗಲಿ
ಗಣರಾಜ್ಯೋತ್ಸವ ದಿನ ನಿಜವಾದ ಅರ್ಥದಲ್ಲಿ ಸಂವಿಧಾನ ದಿನವಾಗಬೇಕಿತ್ತು. ಇದನ್ನು ಪ್ರಜ್ಞಾಪೂರ್ವಕವಾಗಿ ಹತ್ತಿಕ್ಕಲಾಗಿದೆ. ಸ್ವಾತಂತ್ರ್ಯೋತ್ಸವದಷ್ಟೇ ಮಹತ್ವ ಗಣರಾಜ್ಯೋತ್ಸವಕ್ಕೆ ನೀಡಬೇಕು. ಭಾಷಾವಾರು ಪ್ರಾಂತ್ಯಗಳಿಗೆ ಸ್ವಾಯತ್ತತೆ ಸಿಕ್ಕಿದ್ದು, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಮಾನ್ಯತೆ ಸಿಕ್ಕಿದ್ದು ಸಂವಿಧಾನದಿಂದಲೇ. ಹಾಗಾಗಿ, ಈ ದಿನ ಹೆಚ್ಚು ಮಹತ್ವ ಪಡೆಯಬೇಕಿತ್ತು.

ಸಂವಿಧಾನದ ಬಗ್ಗೆ ಅರಿವು ಮೂಡಿಸುವ ದಿನವಾಗಬೇಕು. ಸಂವಿಧಾನ ಮೇಲೆ ಸತತವಾಗಿ ನಡೆಯುತ್ತಿರುವ ದಾಳಿಗಳ ಈ ದಿನಗಳಲ್ಲಿ ಸಂವಿಧಾನದ ಕುರಿತು ಜನರಲ್ಲಿ ಜನರಿಗೆ ಜ್ಞಾನ, ಅರಿವು ಬಂದಷ್ಟು ಪ್ರಭುತ್ವದ ಅನ್ಯಾಯಗಳಿಗೆ ಪ್ರಜೆಗಳೇ ಪ್ರತಿರೋಧ ಒಡ್ಡುತ್ತಾರೆ. ಕೇಂದ್ರದ ಮಂತ್ರಿಯೊಬ್ಬರು ಸಂವಿಧಾನದ ಬಗ್ಗೆ ಕೆಟ್ಟದಾಗಿ ಮಾತನಾಡಿದರೂ ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆಗಳು ಬರುವುದೇ ಇಲ್ಲ. ಸಮಾನತೆ, ಜಾತ್ಯತೀತತೆ, ಸಹಬಾಳ್ವೆಯ ವಿರೋಧಿಗಳು ಸಂವಿಧಾನದ ವಿರೋಧಿಗಳಾಗಿದ್ದಾರೆ. ಶಾಲಾ ಮಟ್ಟದಲ್ಲಿ ಸಂವಿಧಾನದ ಕುರಿತು ಪ್ರಾಥಮಿಕ ಪಾಠಗಳಾಗಬೇಕಿದೆ. ಮಕ್ಕಳಲ್ಲಿ ಕಾರ್ಟೂನ್, ಆ್ಯನಿಮೇಷನ್ ಮೂಲಕ ತಿಳಿಪಡಿಸುವ ಅಗತ್ಯವಿದೆ. ಕಾನೂನು ವಿದ್ಯಾರ್ಥಿಗಳಿಗೂ ಸಂವಿಧಾನ ಮಹತ್ವ ಸಾರುವ ಪಠ್ಯಗಳು ನಮ್ಮಲ್ಲಿಲ್ಲ. ಸಂವಿಧಾನ ದಿನವನ್ನು ಅರಿವು ಮೂಡಿಸುವ ದಿನವನ್ನಾಗಿ ಆಚರಿಸಬೇಕಿದೆ.

–ಡಾ.ಸಿ.ಎಸ್. ದ್ವಾರಕಾನಾಥ್, ಕಾನೂನು ತಜ್ಞ

ಢೋಂಗಿವಾದ ಸಾಯಲಿ
ಇಷ್ಟು ವರ್ಷಗಳಲ್ಲಿ ಏನೆಲ್ಲಾ ಆಗಬೇಕಿತ್ತಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಂತೂ ಎಲ್ಲೆಡೆಯೂ ನಡೆಯುತ್ತಿದೆ. ಢೋಂಗಿತನದ ವಾದಗಳು ಮುನ್ನೆಲೆಗೆ ಬರುತ್ತಿವೆ. ಇಂಥ ಪರಂಪರೆಗಳು ಸಾಯಬೇಕಿದೆ. ಯಾರೋ ಹೇಳಿದ್ದನ್ನು ನಾವು ಓದ್ಬೇಕು, ಯಾರು ಹೇಳಿದ್ದನ್ನು ತಿನ್ಬೇಕು ಅನ್ನೋದನ್ನು ಕೇಳಿಕೊಂಡು ಮನುಷ್ಯರು ಯಂತ್ರಗಳಂತೆ ತಲೆ ಆಡಿಸಿಕೊಂಡು ಇರಬೇಕಾ? ಇಂದು ಮುಂಜಾನೆಯಷ್ಟೇ ಪೌರ ಕಾರ್ಮಿಕನೊಬ್ಬ ನನ್ನ ಕಣ್ಣೆದುರಿಗೇ ಬರಿಗೈಯಲ್ಲೇ ಮಲ–ಮೂತ್ರ ಬಾಚಿದ. ಇದನ್ನೆಲ್ಲಾ ನೋಡಿದರೆ ನಿಜಕ್ಕೂ ಸಂವಿಧಾನದ ಸಮಾನತೆಯ ಆಶಯ ಈಡೇರಿದೆಯಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ.

ಗಣರಾಜ್ಯೋತ್ಸವ ದಿನದಂದು ಹೊರಗಿನಿಂದ ಬರುವ ಅತಿಥಿಗಳಿಗೆ ನಮ್ಮ ಸೇನಾಶಕ್ತಿಯ ಪ್ರದರ್ಶನ ಮಾಡ್ತೀವಿ. ಆದರೆ, ನಮ್ಮ ದೇಶ ಏನಾಗಿದೆ ಅಂತ ಅರಿಯುತ್ತಿದ್ದೇವೆಯೇ? ಸಮಾನತೆ ಸಿಕ್ಕಿದೆಯೇ ಅಂತ ಕೇಳಿಕೊಳ್ಳುವಾಗ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ನಿಜಕ್ಕೂ ನನಗೆ ದೇವರಂತೆ ಕಾಣಿಸುತ್ತಾರೆ. ಅಕಸ್ಮಾತ್ ಅಂಬೇಡ್ಕರ್‌ ಬರದಿದ್ದರೆ ಏನಾಗುತ್ತಿತ್ತು ಅಂತ ಯೋಚಿಸುತ್ತೇನೆ.

–ಸುಮನಾ ಕಿತ್ತೂರು, ಚಿತ್ರ ನಿರ್ದೇಶಕಿ

* ಸಂವಿಧಾನ ಅನುಷ್ಠಾನದ ಅವಲೋಕನದ ದಿನ
ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಿದ್ದರೆ, ಸಂವಿಧಾನ ಜಾರಿಯಾದ ದಿನವನ್ನು ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಸಂವಿಧಾನ ಎಷ್ಟರ ಮಟ್ಟಿಗೆ ಜಾರಿಯಾಗಿದೆ, ಸಂವಿಧಾನದ ಆಶಯದ ಅನ್ವಯವೇ ದೇಶದ ಪ್ರಗತಿ ಆಗುತ್ತಿದೆಯಾ? ಇಲ್ಲವಾ? ಎಂಬುದರ ಅವಲೋಕನ ಈ ಸಂದರ್ಭದಲ್ಲಿ ಆಗಬೇಕು. ಸಂವಿಧಾನದ ಆಶಯಗಳು ಜಾರಿಯಾಗಬೇಕು ಎಂದರೆ ಪ್ರಜೆಗಳಿಗೆ ರಾಜಕೀಯ ಶಿಕ್ಷಣ ಅತ್ಯವಶ್ಯಕ. ಅದನ್ನು ಒದಗಿಸುವ ಸಂಕಲ್ಪ ಈ ದಿನದಂದು ಆಗಬೇಕು.

ಚಿದಾನಂದ ಶೃಂಗೇರಿ, ರಾಜ್ಯಶಾಸ್ತ್ರದ ಬೋಧಕರು, ಯಲಹಂಕ

* ಸಂವಿಧಾನ ಅಳವಡಿಸಿಕೊಂಡ ದಿನ
‘ಗಣರಾಜ್ಯ’ ಪದವು ರಾಷ್ಟ್ರದ ಮುಖ್ಯಸ್ಥರು (ರಾಷ್ಟ್ರಪತಿ) ಚುನಾಯಿತ ಪ್ರತಿನಿಧಿ ಎಂಬುದನ್ನು ಸೂಚಿಸುತ್ತದೆ. ಭಾರತವು ತನ್ನದೇ ಆದ ಸಂವಿಧಾನವನ್ನು ಅಳವಡಿಸಿಕೊಂಡ ದಿನ 1950 ಜನವರಿ 26. ಸಂವಿಧಾನವು 1949ರ ನವೆಂಬರ್‌ 26ರಲ್ಲಿಯೇ ಸಿದ್ಧಗೊಂಡಿತ್ತು. ಆದರೂ ಅದರ ಅಳವಡಿಕೆಗೆ ಜನವರಿ 26ರವರೆಗೂ ಕಾಯಲಾಯಿತು. ಏಕೆಂದರೆ, 1930ರ ಜನವರಿ 26ರಂದು ಜವಾಹರ ಲಾಲ್‌ ನೆಹರೂ ಲಾಹೋರ್‌ನ ರಾವಿ ನದಿ ದಡದಲ್ಲಿ ಧ್ವಜಾರೋಹಣ ನಡೆಸಿದ್ದರು (ಅದಕ್ಕೂ ಮುನ್ನ 1929ರ ಡಿಸೆಂಬರ್‌ 31ರಂದು ಅವರು ಅಲ್ಲಿಯೇ ಸ್ವರಾಜ್ಯ ಘೋಷಣೆ ಮಾಡಿದ್ದರು). ಈ ದಿನವನ್ನೂ ಸ್ಮರಿಸಲು 1950ರ ಜನವರಿ 26ರಂದೇ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ದೇಶ ವಿವಿಧ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯನ್ನು ಜಗತ್ತಿಗೆ ಈ ದಿನದಂದು ತೋರಿಸಲಾಗುತ್ತದೆ.

ಅಶ್ವಿನಿ ಕೊಟ್ಟಾರ್ಗಿ, ಸ್ಪರ್ಧಾಕಾಂಕ್ಷಿ, ವಿಜಯನಗರ

* ಸಂಕಲ್ಪ ದಿನ

ಸಂವಿಧಾನದ ಆಶಯ ಜಾರಿಯಾಗಲು ರಾಜಕೀಯ ಶಿಕ್ಷಣ ಅತ್ಯವಶ್ಯಕ. ಒದಗಿಸುವ ಸಂಕಲ್ಪ ಈ ದಿನದಂದು ಆಗಬೇಕು.

ಚಿದಾನಂದ ಶೃಂಗೇರಿ, ಉಪನ್ಯಾಸಕ, ಯಲಹಂಕ

* ಖುಷಿಯಿಂದ ಆಚರಿಸಿ

ಗಣರಾಜ್ಯೋತ್ಸವದ ಮಹತ್ವ ಎಷ್ಟೋ ಜನರಿಗೆ ಗೊತ್ತಿಲ್ಲ. ಈ ದಿನವನ್ನು ನಾವು ಹಬ್ಬದಂತೆ ಆಚರಿಸಬೇಕು. ಕಾನೂನುಗಳನ್ನು ಪರಿಪಾಲನೆ ಮಾಡಲು ಕಂಕಣ ತೊಡಬೇಕು. ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಮನಸಾರೆ ನೆನೆಯಬೇಕು. ಗಣರಾಜ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನಗಳನ್ನು ಇಂದಿನ ಯುವಕ, ಯುವತಿಯರು ಅರ್ಥ ಮಾಡಿಕೊಂಡು ದೇಶಕ್ಕಾಗಿ ಸಮಯ ತೆಗೆದುಕೊಂಡು ಓದಿ, ತಿಳಿದುಕೊಳ್ಳಬೇಕು.

– ಉದಯ್‌ ಗರುಡಾಚಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT