ಮಂಗಳವಾರ, ಡಿಸೆಂಬರ್ 1, 2020
19 °C
ಮುದ್ರಣ ದೋಷ ಎಂದ ರೇರಾ ಅಧಿಕಾರಿಗಳು

ರೇರಾ: ನಿಯಮ ಮೀರಿ ಯೋಜನಾವಧಿ ವಿಸ್ತರಣೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವು (ರೇರಾ) ನಿರ್ಮಾಣ ಯೋಜನೆಗಳ ಅವಧಿಯನ್ನು ನಿಯಮ ಮೀರಿ ವಿಸ್ತರಿಸುತ್ತಿದೆ ಎಂದು ಫೋರಂ ಫಾರ್‌ ಪೀಪಲ್‌ ಕಲೆಕ್ಟಿವ್ ಎಫರ್ಟ್‌ (ಎಫ್‌ಎಫ್‌ಪಿಸಿಎ) ಆರೋಪಿಸಿದೆ.

‘ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳಿಸದೆ ಬಿಲ್ಡರ್‌ಗಳು ಖರೀದಿದಾರರನ್ನು ಅಲೆದಾಡಿಸುತ್ತಿರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮನಸಿಗೆ ಬಂದಂತೆ ರೇರಾ ಅವಧಿ ವಿಸ್ತರಿಸುತ್ತಿದೆ’ ಎಂದು ಸಂಘಟನೆ ದೂರಿದೆ.

‘ರೇರಾದ ವೆಬ್‌ಸೈಟ್‌ನಲ್ಲಿರುವ ದಾಖಲೆಗಳನ್ನು ನೋಡಿದರೆ, ರೇರಾ ಯಾವ ರೀತಿ ನಿಯಮ ಮೀರುತ್ತಿದೆ ಎಂಬುದು ತಿಳಿಯುತ್ತದೆ. ಮೊದಲ ಬಾರಿ ನೋಂದಣಿಯಾದ ಯೋಜನೆಯೊಂದರ ಅವಧಿ 2017ರಿಂದ 2018ರ ಮಾರ್ಚ್‌ 31ರವರೆಗೆ ಇತ್ತು. ಆದರೆ, ಈ ಯೋಜನೆಯ ಅವಧಿಯನ್ನು 2019ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ ಎಂದು ದಾಖಲೆಯಲ್ಲಿದೆ. ಆದರೆ, 2019ರ ನವೆಂಬರ್‌ 11ರವರೆಗೆ ವಿಸ್ತರಿಸಲಾಗಿದೆ. ನಂತರ ಕೋವಿಡ್‌ ಸಂದರ್ಭದಲ್ಲಿ ಸ್ವಯಂಚಾಲಿತವಾಗಿ 6 ತಿಂಗಳು ಅವಧಿ ವಿಸ್ತರಿಸಲಾಗಿದೆ’ ಎಂದು ಸಂಘಟನೆ ಹೇಳಿದೆ. 

‘ಯಾವುದೇ ಯೋಜನೆಯ ಅವಧಿಯನ್ನು ಕೇವಲ ಒಂದು ವರ್ಷದವರೆಗೆ ವಿಸ್ತರಿಸುವ ಅಧಿಕಾರ ಮಾತ್ರ ರೇರಾಗೆ ಇದೆ. ವರ್ಷಕ್ಕೂ ಮೀರಿ ಅವಧಿ ವಿಸ್ತರಿಸುವುದಾದರೆ ಸರ್ಕಾರದ ಅನುಮತಿ ಪಡೆಯಬೇಕು. ಆದರೆ, ಈ ನಿರ್ದಿಷ್ಟ ಯೋಜನೆಯ ಅವಧಿಯನ್ನು 20 ತಿಂಗಳು ವಿಸ್ತರಿಸಲಾಗಿದೆ’ ಎಂದು ಎಫ್ಎಫ್‌ಪಿಸಿಎ ಆರೋಪಿಸಿದೆ.

ಮುದ್ರಣ ದೋಷ

‘ಎಲ್ಲ ಯೋಜನೆಗಳ ವಿವರವನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತಿದೆ. ಈ ನಿರ್ದಿಷ್ಟ ಯೋಜನೆಯ ಅವಧಿ ವಿಸ್ತರಣೆ ಕುರಿತ ಮಾಹಿತಿ ಮುದ್ರಣ ದೋಷದಿಂದ ಕೂಡಿದೆ. ಉದ್ದೇಶಪೂರ್ವಕವಾಗಿ ಯಾವುದೇ ಯೋಜನೆಯ ಅವಧಿಯನ್ನು ವಿಸ್ತರಿಸಿಲ್ಲ ಮತ್ತು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ವಿಸ್ತರಿಸಲು ಸಾಧ್ಯವೂ ಇಲ್ಲ. ದುರುದ್ದೇಶದಿಂದ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ’ ಎಂದು ರೇರಾದ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ‘ಪ್ರಜಾವಾಣಿ’ಗೆ ಹೇಳಿದರು. 

‘ಹೊಸ ಯೋಜನೆಗಳ ನೋಂದಣಿ, ಅವಧಿ ವಿಸ್ತರಣೆ ಮತ್ತಿತರ ವಿವಾದಗಳ ಯೋಜನೆ ಸೇರಿದಂತೆ ಒಟ್ಟು 15 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಮುದ್ರಣ ದೋಷವಾಗಿರಬಹುದು’ ಎಂದೂ ಹೇಳಿದರು.

‘ಯಾವುದೇ ಯೋಜನೆ ಅವಧಿ ವಿಸ್ತರಿಸಿದರೆ ಅದರಿಂದ ಹೆಚ್ಚು ತೊಂದರೆಗೊಳಗಾಗುವವರು ಖರೀದಿದಾರರು. ಈವರೆಗೆ ನಮಗೆ ಯಾವ ಖರೀದಿದಾರರು ದೂರು ನೀಡಿಲ್ಲ. ಪ್ರಾಧಿಕಾರ ನಿಯಮ ಮೀರಿದ್ದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಎಲ್ಲರೂ ಸ್ವತಂತ್ರರಿದ್ದಾರೆ. ಅದು ಬಿಟ್ಟು ಪ್ರಚಾರಕ್ಕಾಗಿ ಹೀಗೆ ಆರೋಪ ಮಾಡುವುದು ಸರಿಯಲ್ಲ’ ಎಂದೂ ಅವರು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು