ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಸ್ಥಾನಗಳಿಗೆ ಪ್ರವೇಶ ನಿಷೇಧ– ಬಿಬಿಎಂಪಿ, ಜಿಲ್ಲಾಡಳಿತ ಭಿನ್ನ ನಿಲುವು!

Last Updated 11 ಆಗಸ್ಟ್ 2021, 12:30 IST
ಅಕ್ಷರ ಗಾತ್ರ

ಬೆಂಗಳೂರು: ಶ್ರಾವಣ ತಿಂಗಳಲ್ಲಿ ಬರುವ ಹಬ್ಬಗಳಲ್ಲಿ ದೇವಸ್ಥಾನಗಳಲ್ಲಿ ಜನಜಂಗುಳಿ ಹೆಚ್ಚು ಇರುತ್ತದೆ. ಈ ಸಂದರ್ಭಗಳಲ್ಲಿ ಕೋವಿಡ್‌ ಹರಡುವುದನ್ನು ತಡೆಯಲು ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರವೇಶ ಕಲ್ಪಿಸುವ ವಿಚಾರದಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವಿಭಿನ್ನ ನಿಲುವು ತಳೆದಿವೆ.

‘ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳನ್ನು ಹಾಗೂ ಮಾರುಕಟ್ಟೆಗಳನ್ನು ಮುಚ್ಚುವ ತೀರ್ಮಾನವನ್ನು ಕೈಗೊಂಡಿಲ್ಲ. ದೇವಸ್ಥಾನ ಹಾಗೂ ಮಾರುಕಟ್ಟೆಗಳಲ್ಲಿ ಜನಜಂಗುಳಿ ಉಂಟಾಗುವುದನ್ನು ಜನರೇ ತಡೆಯಬೇಕು. ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಆದಷ್ಟು ತಪ್ಪಿಸಬೇಕು. ದೇವಸ್ಥಾನ ಹಾಗೂ ಮಾರುಕಟ್ಟೆಗಳಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಕುರಿತು ವಿಸ್ತೃತ ಆದೇಶ ಹೊರಡಿಸಿದ್ದೇವೆ. ಅವುಗಳ ಜಾರಿಗೆ ಮಾರ್ಷಲ್‌ಗಳು, ಗೃಹರಕ್ಷಕ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡಗಳನ್ನು ರಚಿಸಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಬುಧವಾರ ಹೇಳಿಕೆ ನೀಡಿದ್ದರು.

ಇದರ ಬೆನ್ನಲ್ಲೇ ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್‌, ‘ಕೋವಿಡ್‌ ಹರಡುವುದನ್ನು ತಪ್ಪಿಸಲು ನಗರ ಜಿಲ್ಲಾ ವ್ಯಾಪ್ತಿಯ ಎಲ್ಲ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹಾಗೂ ಖಾಸಗಿ ದೇವಸ್ಥಾನಗಳಲ್ಲಿ ಶ್ರಾವಣ ಮಾಸದ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ’ ಎಂದು ಆದೇಶ ಹೊರಡಿಸಿದ್ದಾರೆ.

‘ಭಕ್ತರಿಗೆ ಪ್ರವೇಶ ನಿರ್ಬಂಧ ಹೇರಿರುವ ದಿನಗಳಲ್ಲಿ ಅರ್ಚಕರು ಮತ್ತು ದೇವಸ್ಥಾನದ ಸಿಬ್ಬಂದಿಯ ಉಪಸ್ಥಿತಿಯಲ್ಲಿ ದೈನಂದಿನ ಧಾರ್ಮಿಕ ಕಾರ್ಯಗಳನ್ನು ಎಂದಿನಂತೆ ಮುಂದುವರಿಸಬಹುದು. ಭಕ್ತರಿಗೆ ಪ್ರವೇಶಾವಕಾಶ ಇರುವ ಇನ್ನುಳಿದ ದಿನಗಳಲ್ಲಿ ಧಾರ್ಮಿಕ ಮತ್ತು ದತ್ತಿ ಆಯುಕ್ತರು ಹೊರಡಿಸಿರುವ ಕೋವಿಡ್‌ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಕ್ತರು ದೇವರ ದರ್ಶನ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬಹುದು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

‘ಶ್ರಾವಣ ಮಾಸದ ಶನಿವಾರ ಮತ್ತು ಭಾನುವಾರ ನಗರದ ದೇವಸ್ಥಾನಗಳಿಗೆ ವಿವಿಧ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಸಮಯದಲ್ಲಿ ಕೋವಿಡ್‌ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ. ಕೋವಿಡ್‌ ಮೂರನೇ ಅಲೆಯ ಭೀತಿಯೂ ಇದೆ. ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಕೋವಿಡ್‌ ಪರೀಕ್ಷೆ ವಿಳಂಬಕ್ಕೆ ಆಸ್ಪದವಿಲ್ಲ

ಕೋವಿಡ್‌ ಪರೀಕ್ಷೆಯ ವರದಿ ಕೈಸೇರುವುದು ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಪ್ರತಿಯೊಂದು ಪ್ರಯೋಗಾಲಯವೂ ಕೋವಿಡ್‌ ಪರೀಕ್ಷೆಯ ಫಲಿತಾಂಶವನ್ನು ಚಾಚೂತಪ್ಪದೇ ಬಿಬಿಎಂಪಿಗೆ ಒದಗಿಸುವಂತೆ ಆದೇಶ ಮಾಡಿದ್ದೇವೆ. ಕೋವಿಡ್ ಪರೀಕ್ಷಾ ಫಲಿತಾಂಶವನ್ನು 24 ಗಂಟೆಗಳ ಒಳಗೆ ನೀಡಬೇಕು. ವಿಳಂಬಕ್ಕೆ ಆಸ್ಪದವಿಲ್ಲ. ಯಾವುದಾದರೂ ನಿರ್ದಿಷ್ಟ ಪ್ರಕರಣದಲ್ಲಿ ಫಲಿತಾಂಶದ ವರದಿ ನೀಡುವಾಗ ವಿಳಂಬವಾಗಿದ್ದರೆ ಗಮನಕ್ಕೆ ತರಬಹುದು. ಈ ಬಗ್ಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ’ ಎಂದು ಗೌರವ್‌ ಗುಪ್ತ ತಿಳಿಸಿದರು.

ಕಟ್ಟಡ ನಿರ್ಮಿಸುವವರಿಂದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಈ ಎಲ್ಲ ಶುಲ್ಕಗಳನ್ನೂ ರದ್ದುಮಾಡಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತರು, ‘ಯಾವ ಸನ್ನಿವೇಶದಲ್ಲಿ ಹೈಕೋರ್ಟ್‌ ಈ ರೀತಿ ಆದೇಶ ಮಾಡಿದೆಯೋ ತಿಳಿಯದು. ಈ ಆದೇಶದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

––––––

‘ಸ್ವಾತಂತ್ರ್ಯ ದಿನಾಚರಣೆ– ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲ’

‘ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರು ಕೂಡ ಈ ಬಗ್ಗೆ ಪರಾಮರ್ಶಿಸಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಆ ಪ್ರಕಾರ ರಾಜಧಾನಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಗೆ ಸೀಮಿತ ಸಂಖ್ಯೆಯ ಜನರನ್ನು ಮಾತ್ರ ಆಹ್ವಾನಿಸಲಿದ್ದೇವೆ. ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ’ ಎಂದು ಗೌರವ್ ಗುಪ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT