ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇವ್‌ ಪಾರ್ಟಿ’ ಮಾಹಿತಿ; ಸಿಸಿಬಿ ದಾಳಿ

ಡಿಸ್ಕೊ ಜಾಕಿ ಬಂಧನ
Last Updated 25 ಆಗಸ್ಟ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ರೇವ್ ಪಾರ್ಟಿ ನಡೆಯುತ್ತಿದೆ’ ಎಂಬ ಮಾಹಿತಿ ಮೇರೆಗೆ ಮಹಾಲಕ್ಷ್ಮಿ ಲೇಔಟ್‌ ಮೆಟ್ರೊ ನಿಲ್ದಾಣ ಸಮೀಪದ ‘ಆರ್‌.ಜೆ. ರಾಯಲ್’ ಹೋಟೆಲ್‌ ಮೇಲೆ ಸಿಸಿಬಿ ಪೊಲೀಸರು ಶನಿವಾರ ತಡರಾತ್ರಿ ದಾಳಿ ಮಾಡಿದರು. ಆದರೆ, ‘ರೇವ್ ಪಾರ್ಟಿ’ಗೆ ಸಂಬಂಧಪಟ್ಟ ಯಾವುದೇ ಪುರಾವೆಗಳೂ ಲಭ್ಯವಾಗಲಿಲ್ಲವೆಂದು ಗೊತ್ತಾಗಿದೆ.

ಹೊಟೇಲ್‍ನ 6ನೇ ಮಹಡಿಯಲ್ಲಿರುವ ಬಾರ್ ಆ್ಯಂಡ್‌ ರೆಸ್ಟೊರೆಂಟ್‌ನಲ್ಲಿ 20 ಯುವತಿಯರು, 50 ವಿದೇಶಿಯರು ಸೇರಿ 150ಕ್ಕೂ ಹೆಚ್ಚು ಗ್ರಾಹಕರು ಇದ್ದರು. ಎಸಿಪಿ ವೆಂಕಟೇಶ್ ಪ್ರಸನ್ನ ಹಾಗೂ ಇನ್‌ಸ್ಪೆಕ್ಟರ್ ಕೆ.ನಾರಾಯಣಗೌಡ ನೇತೃತ್ವದ ತಂಡ ಭಾನುವಾರ ನಸುಕಿನ 4 ಗಂಟೆವರೆಗೂ ತಪಾಸಣೆ ನಡೆಸಿತು.

‘ಹೋಟೆಲ್‌ನಲ್ಲಿ ಗ್ರಾಹಕರಿಗೆ ಮದ್ಯ, ಊಟ ಹಾಗೂ ಮಾದಕ ವಸ್ತು ನೀಡುತ್ತಿದ್ದ ಬಗ್ಗೆ ಬಾತ್ಮಿದಾರರೊಬ್ಬರು ಮಾಹಿತಿ ನೀಡಿದ್ದರು. ದಾಳಿ ಮಾಡಿ ಹೋಟೆಲ್‌ನಲ್ಲಿ ಪರಿಶೀಲನೆ ನಡೆಸಿದಾಗ, ಎಲ್ಲಿಯೂ ಮಾದಕ ವಸ್ತು ಪತ್ತೆ ಆಗಲಿಲ್ಲ. ಪಾರ್ಟಿಗೆ ಸಂಬಂಧಪಟ್ಟ ಪುರಾವೆಗಳೂ ಕಂಡುಬರಲಿಲ್ಲ. ಗ್ರಾಹಕರನ್ನು ಮನೆಗೆ ಕಳುಹಿಸಲಾಯಿತು’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

‘ಅಬಕಾರಿ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ ಅವಧಿ ಮೀರಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಅಬ್ಬರದ ಸಂಗೀತವನ್ನೂ ಬಳಸಲಾಗುತ್ತಿತ್ತು. ಈ ಎರಡೂ ಆರೋಪದಡಿ ಬಾರ್‌ ಆ್ಯಂಡ್ ರೆಸ್ಟೊರೆಂಟ್ ವಿರುದ್ಧ ಮಹಾಲಕ್ಷ್ಮಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ತಿಳಿಸಿದರು.

‘ಬಾರ್‌ನಲ್ಲಿ ಡಿಸ್ಕೊ ಜಾಕಿ (ಡಿಜೆ) ಆಗಿದ್ದ ಕ್ಯಾಮರಾನ್‌ ಪ್ರಜೆ ಥಾಂಬೆ ಡ್ಯಾನಿಯಲ್ ಅಥೆಮ್ (30) ಎಂಬಾತನನ್ನು ಬಂಧಿಸಲಾಗಿದೆ. ಸಂಗೀತ ಪರಿಕರ, ಸ್ವೈಪಿಂಗ್ ಉಪಕರಣ ಹಾಗೂ ₹ 1,500 ನಗದು ಜಪ್ತಿ ಮಾಡಲಾಗಿದೆ’ ಎಂದು ಅಧಿಕಾರಿ ಹೇಳಿದರು.

ಅಡುಗೆ ಕೊಠಡಿಯಿಂದ ಪರಾರಿ

‘ದಾಳಿ ಮಾಡುತ್ತಿದ್ದಂತೆ ಬಾರ್‌ ಮಾಲೀಕ ರವೀಶ್‍ಗೌಡ, ವ್ಯವಸ್ಥಾಪಕರಾದ ವೆಂಕಟೇಶ್, ಸೆಬಾಸ್ಟಿಯನ್, ಕಾರ್ಯಕ್ರಮ ಸಂಘಟನಾ ವ್ಯವಸ್ಥಾಪಕ ಸಲೀಂ ಎಂಬುವರು ಹೋಟೆಲ್‌ನ ಅಡುಗೆ ಮನೆಯಲ್ಲಿರುವ ಬಾಗಿಲಿನಿಂದ ಹೊರಗೆ ಹೋಗಿ ಪರಾರಿಯಾಗಿದ್ದಾರೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT