ಗುರುವಾರ , ಮೇ 19, 2022
21 °C
ಇನ್ನು ಮನೆ ಬಾಗಿಲಿಗೆ ಕಂದಾಯ ಇಲಾಖೆ

227 ಹಳ್ಳಿಗಳಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’: ಸಚಿವ ಆರ್. ಅಶೋಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಇದೇ 20ರಂದು 227 ಹಳ್ಳಿಗಳಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಯಲಿದೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಮಂಗಳವಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಜೊತೆ ವಿಡಿಯೊ ಸಂವಾದದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಣ್ಣ ಪುಟ್ಟ ಕೆಲಸಗಳಿಗೂ ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಸಾರ್ವಜನಿಕರು ಅಲೆಯುವುದನ್ನು ತಪ್ಪಿಸಲು ಪ್ರತಿ ತಿಂಗಳ ಮೂರನೇ ಶನಿವಾರ ಗುಮಾಸ್ತರನ್ನು ಹೊರತುಪಡಿಸಿ ಉಳಿದ ಎಲ್ಲ ಅಧಿಕಾರಿ, ಸಿಬ್ಬಂದಿ ಹಳ್ಳಿ ವಾಸ್ತವ್ಯ ಮಾಡಲಿದ್ದಾರೆ’ ಎಂದರು.

‘ಹಳ್ಳಿಗಳಿಗೆ ಭೇಟಿ ನೀಡುವ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ, ಪರಿಶಿಷ್ಟ ಜಾತಿ, ಪಂಗಡದ ವಸತಿನಿಲಯಗಳಲ್ಲಿ ಊಟ ಮಾಡಲಿದ್ದಾರೆ. ಭೇಟಿ ನೀಡುವ ಒಂದು ವಾರದ ಮೊದಲೇ ಅಧಿಕಾರಿಗಳು, ಕಾರ್ಯಸೂಚಿಗಳ ಅನ್ವಯ ಫಲಾನುಭವಿಗಳ ಅರ್ಜಿಗಳನ್ನು ಸಂಗ್ರಹಿಸಿ, ಯಾರ ಹಂತದಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂಬ ಪ್ರಕ್ರಿಯೆ ಪೂರ್ಣಗೊಳಿಸಿ ಗ್ರಾಮಗಳಿಗೆ ಭೇಟಿ ನೀಡಿದಾಗ ವಿಲೇವಾರಿ ಮಾಡಲಿದ್ದಾರೆ’’ ಎಂದರು.

‘ಪಹಣಿಯಲ್ಲಿನ ಲೋಪ ಸರಿಪಡಿಸುವುದು, ಸರ್ಕಾರದ ಸೌಲಭ್ಯಗಳ ಅರಿವು,  ಮತದಾರರ ಪಟ್ಟಿ ಪರಿಷ್ಕರಣೆ, ಬರ–ಪ್ರವಾಹ ಪರಿಹಾರ, ಪ್ರವಾಹದ ಹಾನಿ ತಡೆಗಟ್ಟಲು ಸಲಹೆ, ಅತಿವೃಷ್ಠಿ– ಅನಾವೃಷ್ಠಿ ಎದುರಿಸಲು ಮುಂಜಾಗ್ರತೆ, ಅರ್ಹರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿರುವ ಬಗ್ಗೆ ಖಚಿತಪಡಿಸಿಕೊಳ್ಳಲಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಪಿಂಚಣಿ ಬಿಟ್ಟು ಹೋಗಿದ್ದರೆ ವಿತರಣೆಗೆ ಆದೇಶ ನೀಡಲಿದ್ದಾರೆ’ ಎಂದು ವಿವರಿಸಿದರು.

ಜಿಲ್ಲಾಧಿಕಾರಿಗಳಿಗೆ ಸೂಚನೆ: ‘ತಾಂಡಾ, ಹಟ್ಟಿ, ದೊಡ್ಡಿ, ಮಜಿರೆ, ಹಾಡಿ, ಕಾಲೊನಿ ಹಾಗೂ ಇನ್ನಿತರೆ ದಾಖಲೆರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಅರ್ಹ ಪ್ರದೇಶಗಳನ್ನು ಗುರುತಿಸಲು ಬಾಕಿ ಇದೆ. ಅಂಥ ಪ್ರದೇಶಗಳನ್ನು ಗುರುತಿಸಿ 60 ದಿನಗಳ ಒಳಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದರು.

‘ಹೊಸಹಳ್ಳಿಯಲ್ಲಿ ವಾಸ್ತವ್ಯ’
‘ಇದೇ 20ರಂದು ಬೆಳಿಗ್ಗೆ 11 ಗಂಟೆಗೆ ದೊಡ್ಡಬಳ್ಳಾಪುರದ ಹೊಸಹಳ್ಳಿಗೆ ಭೇಟಿ ನೀಡಿ, ಎತ್ತಿನಗಾಡಿಯಲ್ಲಿ ಗ್ರಾಮದೇವತೆ ದರ್ಶನ ಪಡೆದು, ಪರಿಶಿಷ್ಟರ ಕಾಲೊನಿಯಲ್ಲಿ ಒಂದು ಗಂಟೆ ಕಳೆಯುತ್ತೇನೆ. ಅಲ್ಲಿನ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತೇನೆ. ನಂತರ ಹಳ್ಳಿಕಟ್ಟೆಗಳಲ್ಲಿ ಕುಳಿತು ಜನರ ಸಮಸ್ಯೆ ಆಲಿಸುತ್ತೇನೆ. ಅಂಗವಿಕಲರಿಗೆ ಆರೋಗ್ಯ ಶಿಬಿರದ ಮೂಲಕ ಕೃತಕ ಕೈ, ಕಾಲು ಜೋಡಣೆ ಮಾಡಲಾಗುವುದು. ಜನಪ್ರತಿನಿಧಿಗಳ ಜೊತೆ ಸಂಜೆ ಚರ್ಚಿಸಿ, ಜನರ ಸಮಸ್ಯೆ ಪರಿಹರಿಸಲು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲಿಸುತ್ತೇನೆ. ರಾತ್ರಿ ಸ್ಥಳೀಯ ಕಲಾವಿದರ ಪ್ರದರ್ಶನ ವೀಕ್ಷಿಸಿ, ಹಿಂದುಳಿದ ವರ್ಗಗಳ ಇಲಾಖೆ ವಿದ್ಯಾರ್ಥಿ ವಸತಿನಿಲಯದಲ್ಲಿ ವಾಸ್ತವ್ಯ ಮಾಡುತ್ತೇನೆ. ಮರುದಿನ ದಲಿತರ ಮನೆಯಲ್ಲಿ ತಿಂಡಿ ಸೇವಿಸುತ್ತೇನೆ’ ಎಂದು ಅಶೋಕ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು