ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘಿಸಿ ವರ್ಗಾವಣೆ: ರದ್ದತಿಗಾಗಿ ಶಿಕ್ಷಕಿ ಅನಿತಾ ಧರಣಿ

Last Updated 10 ಮಾರ್ಚ್ 2018, 7:17 IST
ಅಕ್ಷರ ಗಾತ್ರ

ಹಾವೇರಿ: ಆರ್‌ಟಿಇ (ಕಡ್ಡಾಯ ಶಿಕ್ಷಣದ ಹಕ್ಕು) ಕಾಯ್ದೆ ಮತ್ತು ಜ್ಯೇಷ್ಠತೆಯನ್ನು ಉಲ್ಲಂಘಿಸುವ ಮೂಲಕ ಕಾನೂನು ಬಾಹಿರವಾಗಿ ಮಾಡಲಾದ ತನ್ನ ವರ್ಗಾವಣೆಯನ್ನು ರದ್ದು ಪಡಿಸಬೇಕು ಒತ್ತಾಯಿಸಿ ಹಿರೇಕೆರೂರ ತಾಲ್ಲೂಕಿನ ಚಿಕ್ಕೇರೂರ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿ ಅನಿತಾ ಪಾಟೀಲ ಗುರುವಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಇಬ್ಬರು ಮಕ್ಕಳೊಂದಿಗೆ ಧರಣಿ ಆರಂಭಿಸಿದರು.

ನಮ್ಮ ಶಾಲೆಯಲ್ಲಿ 14 ಶಿಕ್ಷಕರಿದ್ದು, ಹೆಚ್ಚುವರಿ 5 ಮಂದಿಯನ್ನು ವರ್ಗಾವಣೆ ಮಾಡಬೇಕಿತ್ತು. ಶಾಲೆಯಲ್ಲಿ ಸಲ್ಲಿಸಿದ ಸೇವಾ ಜ್ಯೇಷ್ಠತೆಯ ಆಧಾರದಲ್ಲಿ ಈ ವರ್ಗಾವಣೆಯನ್ನು ಇಲಾಖೆ ಮಾಡಬೇಕಿತ್ತು. ಆದರೆ, ಪ್ರಭಾವಿ ಶಿಕ್ಷಕರೊಬ್ಬರನ್ನು ಶಾಲೆಯಲ್ಲೇ ಉಳಿಸುವ ಕಾರಣ, ಜ್ಯೇಷ್ಠತಾ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ನನ್ನನ್ನು ಅಂದಿನ ಕ್ಷೇತ್ರಶಿಕ್ಷಣಾಧಿಕಾರಿಗಳು ವರ್ಗಾವಣೆ ಮಾಡಿದ್ದಾರೆ. ಇದು ಕಾನೂನು ಬಾಹಿರ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳಿಗೆ ಪತ್ರ ಬರೆದರೂ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೂ ದೂರು ನೀಡಿದ್ದೇನೆ. ಎಲ್ಲ ಪ್ರಯತ್ನ ಗಳು ವಿಫಲಗೊಂಡ ಕಾರಣ, ದಿಕ್ಕು ತೋಚದೇ ಮಕ್ಕಳ ಜೊತೆಗೆ ಪ್ರತಿಭಟನೆ ಕುಳಿತಿದ್ದೇನೆ. ನನ್ನ ಹಾಗೂ ಮಕ್ಕಳ ಜೀವಕ್ಕೆ ಯಾವುದೇ ಸಮಸ್ಯೆ ಉಂಟಾದರೂ, ನಿಯಮ ಮೀರಿ ವರ್ಗಾವಣೆ ಮಾಡಿದ ಅಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖಾ ಸಿಬ್ಬಂದಿಯೇ ಕಾರಣ ಎಂದು ದೂರಿದರು.

ಹಿರೇಕೆರೂರ ತಾಲ್ಲೂಕಿನಲ್ಲಿ ಒಟ್ಟು 693 ಶಿಕ್ಷಕರ ವರ್ಗಾವಣೆ ಆಗಬೇಕಿತ್ತು. ಆದರೆ, ಕೇವಲ 93 ಮಂದಿಯನ್ನು ಮಾತ್ರ ವರ್ಗಾವಣೆ ಮಾಡಿದ್ದಾರೆ. ಈ ಪೈಕಿಯೂ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.

ಮಕ್ಕಳಾದ ಅನ್ವಿತಾ, ರಾಘವಿ ಹಾಗೂ ಮುಖಂಡರಾದ ಈರನಗೌಡ ಚನ್ನಬಸಪ್ಪ ಪಾಟೀಲ, ನಿವೃತ್ತ ನ್ಯಾಯಾಧೀಶ ಜಿ.ಬಿ. ಮುದಿಗೌಡರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT