ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಷ್ಕಿಂದೆಯಾದ ನೆಲಗದರನಹಳ್ಳಿ ರಸ್ತೆ

ಫುಟ್‌ಪಾತೇ ಇಲ್ಲದ ದಟ್ಟಣೆಯ ರಸ್ತೆ l 10 ವರ್ಷದಿಂದ ನನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಪ್ರಸ್ತಾವನೆ
Last Updated 7 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಕಿಷ್ಕಿಂದೆಯನ್ನು ನೆನಪಿಸುವಷ್ಟು ಕಿರಿದಾದ ರಸ್ತೆ, ನಿತ್ಯ ಸಾಲುಗಟ್ಟಿ ನಿಲ್ಲುವ ವಾಹನಗಳು...

ನೆಲಗದರನಹಳ್ಳಿ ಎಂದ ಕೂಡಲೇ ಕಣ್ಮುಂದೆ ಬರುವ ದೃಶ್ಯವಿದು. ಅಂದ್ರಹಳ್ಳಿ ಮುಖ್ಯ ರಸ್ತೆ ಎಂದರೆ ತುಮಕೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ಇದು ನೈಸ್ ರಸ್ತೆಗೆ ಪರ್ಯಾಯವಾದ ರಸ್ತೆ ಕೂಡ ಆಗಿದೆ.

8ನೇ ಮೈಲಿಯಿಂದ ಗಂಗಾ ಇಂಟರ್ ನ್ಯಾಷನಲ್ ಶಾಲೆವರೆಗಿನ ಸುಮಾರು ಎರಡೂವರೆ ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ವಾಹನ ಚಾಲನೆ ಮಾಡುವುದೆಂದರೆ ಅದು ಸಾಹಸದ ಕೆಲಸವೇ ಸರಿ. ಹೆಸರಿಗೆ 30 ಅಡಿ ರಸ್ತೆ ಇದಾಗಿದ್ದು, ಕೆಲವು ಕಡೆ 15 ಅಡಿ ಮತ್ತು 20 ಅಡಿಯ ರಸ್ತೆ ಉಳಿದುಕೊಂಡಿದೆ.

ನೆಲಗದರನಹಳ್ಳಿ ಸುತ್ತಮುತ್ತಲ ನಿವಾಸಿಗಳು ತುಮಕೂರು ಮುಖ್ಯರಸ್ತೆ, ಮೆಟ್ರೊ ನಿಲ್ದಾಣ ತಲುಪಲು ಇದೇ ಪ್ರಮುಖ ರಸ್ತೆ. ನೆಲಗದರನಹಳ್ಳಿಯಿಂದ 8ನೇ ಮೈಲಿಯ ನಾಗಸಂದ್ರ ಕ್ರಾಸ್‌ ತನಕ ಪ್ರತಿನಿತ್ಯ ಬಸ್‌ಗಳು,ಲಾರಿಗಳು ಸೇರಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಒಬ್ಬರಿಗೆ ₹10 ಪಡೆದು ಪ್ರಯಾಣಿಕರನ್ನು ಕರೆದೊಯ್ಯುವ ಆಟೊರಿಕ್ಷಾಗಳು ಈ ಕಿರಿದಾದ ದಾರಿಯಲ್ಲೇ ಸಾಗಬೇಕು.

ಬೆಳಿಗ್ಗೆ ಮತ್ತು ಸಂಜೆ ಶಾಲಾ ವಾಹನಗಳು ಸಂಚರಿಸುವ ಸಮಯದಲ್ಲಂತೂ ಸಂಚಾರ ದಟ್ಟಣೆ ಉಂಟಾಗುವುದು ಇಲ್ಲಿ ಸಾಮಾನ್ಯ. ಸಂಚಾರ ದಟ್ಟಣೆ ಸಮಯದಲ್ಲಿ ದೊಡ್ಡ ವಾಹನವೊಂದು ಈ ರಸ್ತೆಗೆ ಪ್ರವೇಶಿಸಿತೆಂದರೆ ಗಂಟೆಗಟ್ಟಲೆ ಕಾದು ನಿಲ್ಲಲೇಬೇಕು. ಈ ದಟ್ಟಣೆ ಸೀಳಿಕೊಂಡು ನೆಲಗದರನಹಳ್ಳಿ ಗಂಗಾ ಇಂಟರ್ ನ್ಯಾಷನಲ್ ಶಾಲೆ ದಾಟಿದರೆ ಅಂದ್ರಹಳ್ಳಿ ಮೂಲಕ ಮಾಗಡಿ ರಸ್ತೆ ತನಕ ಸಾಗುವುದು ಸುಲಭ. ಮುಂದೆ ಅಗಲವಾದ ರಸ್ತೆಯಿದೆ. ನೆಲಗದರನಹಳ್ಳಿ ಬಳಿಯ ಎರಡೂವರೆ ಕಿಲೋ ಮೀಟರ್ ರಸ್ತೆ ಇಕ್ಕಟ್ಟಾಗಿದ್ದು, ವಾಹನ ಸವಾರರಿಗೆ ಕಿರಿಕಿರಿ ತಂದೊಡ್ಡಿದೆ.

60 ಅಡಿ ರಸ್ತೆಯನ್ನಾಗಿ ವಿಸ್ತರಿಸುವ ಯೋಜನೆ 10 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೂರು ಬಾರಿ ಶಂಕುಸ್ಥಾಪನೆ ನೆರವೇರಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎನ್ನುತ್ತಾರೆ ಬೆಲ್ಮಾರ್ ಲೇಔಟ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಂಗಸ್ವಾಮಿ.

ರಸ್ತೆಗೆ ಚಾಚಿಕೊಂಡಿರುವ ಕಟ್ಟಡಗಳನ್ನು ಬಿಬಿಎಂಪಿ ಅಧಿಕಾರಿಗಳು ಈ ಹಿಂದೆ ಗುರುತು ಮಾಡಿದ್ದರು. ಆದರೆ, ಕಟ್ಟಡಗಳ ತೆರವುಗೊಳಿಸುವ ಕೆಲಸ ಮಾತ್ರ ಆಗಲಿಲ್ಲ ಎಂದರು.

‘ರಸ್ತೆ ವಿಸ್ತರಣೆಗೆ ಸರ್ವೆ ಕಾರ್ಯ ಮುಗಿದಿದ್ದು, ಕಾಮಗಾರಿ ಆರಂಭಿಸುವ ಸಿದ್ಧತೆಯಲ್ಲಿದ್ದೆವು. ಆದರೆ, ಹೊಸ ಸರ್ಕಾರ ಈ ಕ್ಷೇತ್ರದ ಅನುದಾನ ವಾಪಸ್ ಪಡೆದ ಕಾರಣ ಕಾಮಗಾರಿ ಆರಂಭಿಸಲು ಸಾಧ್ಯವಾಗುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪಾದಚಾರಿ ಮಾರ್ಗ ಒತ್ತುವರಿ

ಕಿರಿದಾದ ರಸ್ತೆ ಬದಿಯಲ್ಲಿರುವ ಚರಂಡಿ ಮೇಲೆ ಹಾಕಿರುವ ಸ್ಲ್ಯಾಬ್‌ಗಳೇ ಇಲ್ಲಿ ಪಾದಚಾರಿ ಮಾರ್ಗ. ಅದನ್ನೂ ಅಂಗಡಿಗಳ ಮಾಲೀಕರು ಒತ್ತುವರಿ ಮಾಡಿದ್ದು, ಪಾದಚಾರಿಗಳು ಕಷ್ಟಪಟ್ಟು ಸಾಗಬೇಕು.

‘ಕೆಲವರು ಅಂಗಡಿಯ ಮುಂಗಟ್ಟುಗಳನ್ನು ಸ್ಲ್ಯಾಬ್‌ಗಳ ಮೇಲೆ ಇಡುತ್ತಾರೆ. ಮತ್ತೆ ಕೆಲವರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ. ನಡೆದುಕೊಂಡು ಹೋಗುವವರಿಗೆ ದಾರಿಯೇ ಇಲ್ಲ. ಈ ಸಮಸ್ಯೆಯನ್ನು ಯಾರಿಗೆ ಹೇಳಿದರೂ ಪ್ರಯೋಜನ ಆಗಿಲ್ಲ’ ಎನ್ನುತ್ತಾರೆ ಶಕುಂತಲಾ.

ವಿಸ್ತರಣೆ ಯೋಜನೆಗೆ ರಾಜಕೀಯ
ನೆಲಗದರನಹಳ್ಳಿ ರಸ್ತೆ ವಿಸ್ತರಣೆ ಯೋಜನೆ ವಿಳಂಬಕ್ಕೆ ರಾಜಕೀಯ ಕಾರಣಗಳು ಇವೆ ಎನ್ನುತ್ತಾರೆ ಸ್ಥಳೀಯರು.

‘ಈ ಹಿಂದಿನ ಶಾಸಕರು ರಾಜಕೀಯ ಕಾರಣಕ್ಕೆ ಈ ಭಾಗವನ್ನು ನಿರ್ಲಕ್ಷ್ಯ ಮಾಡಿದ್ದರು. ಹಾಲಿ ಜೆಡಿಎಸ್ ಶಾಸಕರಿದ್ದಾರೆ. ರಸ್ತೆ ವಿಸ್ತರಣೆ ಆಗಬಹುದು ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ಸರ್ಕಾರ ಅನುದಾನ ವಾಪಸ್ ಪಡೆದಿದೆ. ಹೀಗಾಗಿ ಮತ್ತೊಮ್ಮೆ ರಸ್ತೆ ವಿಸ್ತರಣೆ ಪ್ರಸ್ತಾಪ ನನೆಗುದಿಗೆ ಬೀಳುವ ಸಾಧ್ಯತೆ ಇದೆ’ ಎಂದು ನೆಲಗದರನಹಳ್ಳಿ ನಿವಾಸಿ ಚಂದ್ರಶೇಖರ್ ಹೇಳಿದರು.

‘ಈ ರಸ್ತೆ ವಿಸ್ತರಣೆಗೆ ಬಜೆಟ್‌ನಲ್ಲಿ ₹18 ಕೋಟಿ ನಿಗದಿ ಮಾಡಲಾಗಿತ್ತು. ಆದರೆ, ಅನುದಾನ ವಾಪಸ್ ಪಡೆದಿರುವ ಕಾರಣ ತೊಂದರೆಯಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನ ಪಡೆಯುವ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಆರ್. ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT