ಅಪಘಾತ: ವಾಹನದ ಚಕ್ರ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

7

ಅಪಘಾತ: ವಾಹನದ ಚಕ್ರ ಹರಿದು ತಾಯಿ, ಮಗು ಸ್ಥಳದಲ್ಲೇ ಸಾವು

Published:
Updated:
ರಘು, ಸುರೇಖಾ ಮತ್ತು ಮಗು ಆರಾಧ್ಯ

ಬೆಂಗಳೂರು: ಸಂಬಂಧಿಕರ ಮನೆಯಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ವಾಪಾಸ್ಸಾಗುತ್ತಿದ್ದಾಗ ಸ್ಕೂಟರ್‌ಗೆ ಯಾವುದೋ ವಾಹನ ಡಿಕ್ಕಿ ಹೊಡೆದು ಮೂರು ವರ್ಷದ ಮಗು ಆರಾಧ್ಯ ಹಾಗೂ ಆಕೆಯ ತಾಯಿ ಸುರೇಖಾ (30) ಮೃತಪಟ್ಟಿದ್ದಾರೆ.

ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಹೆಬ್ಬಾಳದ ಲುಂಬಿಣಿ ಗಾರ್ಡನ್ ಎದುರು ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಸುರೇಖಾ ಪತಿ ರಘು ಗಾಯಗೊಂಡಿದ್ದಾರೆ.

ಈ ಕುಟುಂಬ ಸಿಬಿಐ ಕಚೇರಿ ರಸ್ತೆಯ ಬಾಡಿಗೆ ಮನೆಯಲ್ಲಿ ನೆಲೆಸಿತ್ತು. ರಘು ಮನೆ ಸಮೀಪವೇ ಬೇಕರಿ ಇಟ್ಟುಕೊಂಡಿದ್ದಾರೆ. ಬ್ಯಾಟರಾಯನಪುರದಲ್ಲಿರುವ ಸಂಬಂಧಿಕರು, ಗಣೇಶ ಹಬ್ಬದ ಪ್ರಯುಕ್ತ ಪೂಜೆಗೆ ಆಹ್ವಾನಿಸಿದ್ದರು. ಮಗಳನ್ನು ಕರೆದುಕೊಂಡು ಸಂಜೆ ಅವರ ಮನೆಗೆ ತೆರಳಿದ್ದ ದಂಪತಿ, ಅಲ್ಲೇ ಊಟ ಮುಗಿಸಿಕೊಂಡು 11 ಗಂಟೆಗೆ ಮನೆಗೆ ವಾಪಸಾಗುತ್ತಿದ್ದರು.

ಈ ಪ್ರದೇಶಕ್ಕೆ ಹೊಸಬರಾದ ರಘು ಅವರಿಗೆ ರಸ್ತೆಗಳ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಸರ್ವಿಸ್ ರಸ್ತೆಯಲ್ಲಿ ಸಾಗುವ ಬದಲು ಅವರು ಹೆಬ್ಬಾಳ ಮೇಲ್ಸೇತುವೆ ಏರಿದ್ದರು. ಸ್ವಲ್ಪ ದೂರ ಸಾಗಿದ ಬಳಿಕ ತಾವು ದಾರಿ ತಪ್ಪಿರುವುದು ಅವರ ಗಮನಕ್ಕೆ ಬಂದಿತ್ತು. ಹೀಗಾಗಿ, ಆಟೊ ಚಾಲಕರೊಬ್ಬರ ಬಳಿ ಮಾಹಿತಿ ಪಡೆದು, ವೀರಣ್ಣನಪಾಳ್ಯ ಜಂಕ್ಷನ್‌ನಲ್ಲಿ ಯು–ತಿರುವು ಪಡೆದುಕೊಂಡಿದ್ದರು. ಲುಂಬಿಣಿ ಗಾರ್ಡನ್ ಎದುರು ಬರುತ್ತಿದ್ದಂತೆಯೇ ಯಾವುದೋ ವಾಹನ ಹಿಂದಿನಿಂದ ಗುದ್ದಿದೆ ಎಂದು ಪೊಲೀಸರು ಹೇಳಿದರು.

ರಸ್ತೆ ಮಧ್ಯೆ ಬಿದ್ದ ತಾಯಿ–ಮಗಳ ತಲೆ ಮೇಲೆ ವಾಹನದ ಚಕ್ರ ಹರಿದಿದ್ದರಿಂದ, ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದರು. ರಘು ರಸ್ತೆ ಬದಿಗೆ ಉರುಳಿದಾಗ ತಲೆಗೆ ಪಾದಚಾರಿ ಮಾರ್ಗದ ಕಲ್ಲು ಬಡಿದಿದ್ದರಿಂದ ಅವರೂ ಪ್ರಜ್ಞೆ ತಪ್ಪಿದರು. ಇತರೆ ವಾಹನಗಳ ಸವಾರರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದರು. ಆಸ್ಪತ್ರೆಗೆ ಕರೆದೊಯ್ಯಲು ಆಟೊದಲ್ಲಿ ಕೂರಿಸುತ್ತಿದ್ದಾಗ ರಘು ಅವರಿಗೆ ಎಚ್ಚರವಾಯಿತು ಎಂದು ಮಾಹಿತಿ ನೀಡಿದರು.

ಆ ರಸ್ತೆಯಲ್ಲಿರುವ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ. ಅಪಘಾತ ಮಾಡಿದ ವಾಹನದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ರಸ್ತೆಯಲ್ಲಿ ಮೂಡಿರುವ ಚಕ್ರದ ಗುರುತು ನೋಡಿದರೆ, ಅದು ಕಾರು ಅಥವಾ ಸರಕುಸಾಗಣೆ ವಾಹನವಿರಬಹುದು ಎನಿಸುತ್ತದೆ ಎಂದು ಪೊಲೀಸರು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 4

  Amused
 • 9

  Sad
 • 0

  Frustrated
 • 3

  Angry

Comments:

0 comments

Write the first review for this !