ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿಯಿಂದ ಉರುಳಿಬಿದ್ದ ಬೈಕ್: ಯುವಕ ಸಾವು

* ಅಕ್ರಮವಾಗಿ ರಸ್ತೆ ಅಗೆದು ನೀರಿನ ಸಂಪರ್ಕ * ಆಪ್‌ ಪ್ರತಿಭಟನೆ: ಮುಖಂಡರು ವಶಕ್ಕೆ
Last Updated 14 ಮಾರ್ಚ್ 2022, 21:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎಂ.ಎಸ್. ಪಾಳ್ಯದ ಮುನೇಶ್ವರ ಬಡಾವಣೆಯಲ್ಲಿ ರಸ್ತೆ ಗುಂಡಿಯಿಂದಾಗಿ ಬೈಕ್ ಉರುಳಿಬಿದ್ದಿದ್ದು, ಸವಾರ ಅಶ್ವಿನ್ ಜುಗ್ಡೆ (27) ಎಂಬುವರು ಮೃತಪಟ್ಟಿದ್ದಾರೆ.

‘ಬಿ.ಕಾಂ ಪದವೀಧರರಾಗಿದ್ದ ಅಶ್ವಿನ್, ನಗರದ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ವಡೇರಹಳ್ಳಿಯಲ್ಲಿ ಪೋಷಕರ ಜೊತೆ ವಾಸವಿದ್ದರು. ಭಾನುವಾರ ರಾತ್ರಿ 9.30ರ ಸುಮಾರಿಗೆ ಬೈಕ್‌ನಲ್ಲಿ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಅಶ್ವಿನ್ ಪೋಷಕರು, ಹಾವೇರಿಯವರು. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿದ್ದರು. ಅವರ ಒಬ್ಬನೇ ಮಗ ಅಶ್ವಿನ್. ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಮಗ ಮೃತಪಟ್ಟಿರುವುದಾಗಿ ಪೋಷಕರು ಹಾಗೂ ಸ್ನೇಹಿತರು ಹೇಳಿಕೆ ನೀಡಿದ್ದಾರೆ. ಅದರನ್ವಯ ಬಿಬಿಎಂಪಿ ಹಾಗೂ ಜಲಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಚಿಕಿತ್ಸೆಗೆ ಫಲಿಸದೇ ಸಾವು: ‘ರಸ್ತೆ ಹಲವೆಡೆ ಹದಗೆಟ್ಟಿದೆ. ಜಲಮಂಡಳಿಯವರು ಅಲ್ಲಲ್ಲಿ ರಸ್ತೆ ಅಗೆದು ಕೆಲವರ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಿದ್ದಾರೆ. ಅಗೆದ ರಸ್ತೆಯನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದು, ಇದರಿಂದಾಗಿ ಗುಂಡಿಗಳು ಬಿದ್ದಿವೆ. ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದು ಸ್ಥಳ ಪರಿಶೀಲನೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಗುಂಡಿಗಳು ಹೆಚ್ಚಿದ್ದ ರಸ್ತೆಯಲ್ಲಿ ಅಶ್ವಿನ್ ಬೈಕ್ ಚಲಾಯಿಸಿಕೊಂಡು ಹೊರಟಿದ್ದರು. ಗುಂಡಿಯಲ್ಲಿ ಬೈಕ್ ಚಕ್ರ ಇಳಿಯುತ್ತಿದ್ದಂತೆ ಉರುಳಿ ಬಿದ್ದಿತ್ತು. ರಸ್ತೆಗೆ ಬಿದ್ದಿದ್ದ ಅಶ್ವಿನ್, ತೀವ್ರ ಗಾಯಗೊಂಡು ನರಳುತ್ತಿದ್ದರು. ಸ್ಥಳೀಯರೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೇ ಅಶ್ವಿನ್ ಸೋಮವಾರ ಬೆಳಿಗ್ಗೆ ತೀರಿಕೊಂಡಿದ್ದಾರೆ’ ಎಂದೂ ತಿಳಿಸಿದರು.

‘ಬಿಬಿಎಂಪಿಗೆ ಸೇರಿದ್ದ ರಸ್ತೆಯನ್ನು ಅಕ್ರಮವಾಗಿ ಜಲಮಂಡಳಿಯವರು ಅಗೆದಿದ್ದರು. ಅದನ್ನು ಬಿಬಿಎಂಪಿ ಅಧಿಕಾರಿಗಳು ಪ್ರಶ್ನಿಸಿಲ್ಲ. ಗುಂಡಿ ಬಿದ್ದರೂ ಅದನ್ನು ಮುಚ್ಚಿಸಲು ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳು ಪ್ರಯತ್ನಿಸಿಲ್ಲ. ಹೀಗಾಗಿ, ಎರಡೂ ಸಂಸ್ಥೆಗಳ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಶ್ವಿನ್ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ’ ಎಂದೂ ಪೊಲೀಸ್ ಅಧಿಕಾರಿ ವಿವರಿಸಿದರು.

ಹೆಲ್ಮೆಟ್ ಧರಿಸದ ಅಶ್ವಿನ್: ‘ಅಪಘಾತವಾದ ಸ್ಥಳದಲ್ಲಿ ಯಾವುದೇ ಹೆಲ್ಮೆಟ್ ದೊರೆತಿಲ್ಲ. ಬೈಕ್ ಚಲಾಯಿಸುವ ವೇಳೆ ಅಶ್ವಿನ್ ಹೆಲ್ಮೆಟ್ ಧರಿಸಿರಲಿಲ್ಲವೆಂಬುದು ಗೊತ್ತಾಗಿದೆ’ ಎಂದು ಅಧಿಕಾರಿ ಹೇಳಿದರು.

‘ಅವರ ವೈದ್ಯಕೀಯ ವರದಿ ಬರಬೇಕಿದ್ದು, ಪಾನಮತ್ತರಾಗಿದ್ದು ಸಾಬೀತಾದರೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗುವುದು’ ಎಂದೂ ತಿಳಿಸಿದರು.

ಆಪ್‌ ಪ್ರತಿಭಟನೆ: ‘ರಸ್ತೆ ಗುಂಡಿಯಿಂದ ಅಶ್ವಿನ್ ಮೃತಪಟ್ಟಿದ್ದು, ₹ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಆಮ್‌ ಆದ್ಮಿ ಪಕ್ಷದ (ಆಪ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

'ರಸ್ತೆ ಗುಂಡಿಯಿಂದಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಅಶ್ವಿನ್ ಮೃತಪಟ್ಟಿದ್ದು, ಇದಕ್ಕೆ ಬಿಬಿಎಂಪಿ ಆಯುಕ್ತ ಹಾಗೂ ಉನ್ನತ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಡು, ಬಂಧಿಸಬೇಕು’ ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪೊಲೀಸರು, ‘ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿಲ್ಲ’ ಎಂದು ಹೇಳಿದರು. ಇದೇ ವಿಚಾರವಾಗಿ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಆಪ್‌ನ ಕೆಲ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು, ಜೀಪಿನಲ್ಲಿ ಕರೆದೊಯ್ದರು. ವಿದ್ಯಾರಣ್ಯಪುರ ಠಾಣೆ ಎದುರು ಸೇರಿದ್ದ ಕಾರ್ಯಕರ್ತರು, ಮುಖಂಡರ ಬಿಡುಗಡೆಗಾಗಿ ಪ್ರತಿಭಟನೆ ನಡೆಸಿದರು. ಕೆಲ ಹೊತ್ತಿನ ನಂತರ, ಮುಖಂಡರನ್ನು ಪೊಲೀಸರು ಬಿಟ್ಟು ಕಳುಹಿಸಿದರು.

‘ಅಶ್ವಿನ್ ಕುಟುಂಬಕ್ಕೆ ಉಚಿತ ನಿವೇಶನ’
ಮೃತ ಅಶ್ವಿನ್ ಅವರ ಕುಟುಂಬಕ್ಕೆ ವಡೇರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20x30 ಅಳತೆ ನಿವೇಶನವನ್ನು ಉಚಿತವಾಗಿ ನೀಡುವುದಾಗಿ ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಶಾಸಕ ಎಸ್‌.ಆರ್. ವಿಶ್ವನಾಥ್ ಭರವಸೆ ನೀಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಮುನೇಶ್ವರ ಬಡಾವಣೆ ರಸ್ತೆ ಚೆನ್ನಾಗಿದೆ. ಆದರೆ, ಒಂದು ಕಡೆ ಮ್ಯಾನ್‌ಹೋಲ್‌ನಿಂದ ನೀರು ಹೊರ ಬಂದು ಹರಿಯುತ್ತಿತ್ತು. ಅಲ್ಲಿಯೇ ಗುಂಡಿ ಬಿದ್ದಿತ್ತು. ಅದೇ ಗುಂಡಿಯಿಂದಲೇ ಅಪಘಾತ ಸಂಭವಿಸಿದೆ’ ಎಂದಿದ್ದಾರೆ.

‘ಅನುಮತಿ ಇಲ್ಲದೇ ಅನಧಿಕೃತವಾಗಿ ಮನೆಗಳಿಗೆ ನೀರಿನ ಸಂಪರ್ಕ ಸಂಪರ್ಕ ಕಲ್ಪಿಸಲಾಗಿದೆ. ಅನಧಿಕೃತ ನೀರಿನ ಸಂಪರ್ಕ ಪಡೆದವರು ಮತ್ತು ಸಂಪರ್ಕ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಲಾಗಿದೆ’ ಎಂದೂ ವಿಶ್ವನಾಥ್ ಹೇಳಿದ್ದಾರೆ.

‘ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ’
‘ಗುಂಡಿಯಿಂದ ಅಪಘಾತ ಸಂಭವಿಸಿ ಯುವಕ ಮೃತಪಟ್ಟಿರುವುದು ದುರಂತದ ಸಂಗತಿ. ಇಂಥ ಘಟನೆಗಳು ನಡೆಯಬಾರದು. ಅಧಿಕಾರಿಗಳು ಅಪಘಾತದ ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ಯುವಕನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಮಾತನಾಡಿದ ಅವರು, ‘ಬಿಬಿಎಂಪಿಗೆ ಮಾಹಿತಿ ನೀಡದೇ ರಸ್ತೆ ಅಗೆದಿದ್ದರಿಂದ ಈ ಅನಾಹುತ ಆಗಿದೆ. ಈ ರೀತಿ ಅಕ್ರಮವಾಗಿ ರಸ್ತೆ ಅಗೆದ ವಿಚಾರಕ್ಕೆ ಸಂಬಂಧಪಟ್ಟಂತೆ ಜಲಮಂಡಳಿ, ಬೆಸ್ಕಾಂ ಸೇರಿ ಇತರೆ ಸಂಸ್ಥೆಗಳ ವಿರುದ್ಧ 5 ಎಫ್‌ಐಆರ್ ದಾಖಲು ಮಾಡಲಾಗಿದೆ’ ಎಂದೂ ತಿಳಿಸಿದರು.

ರಸ್ತೆ ಗುಂಡಿಯಿಂದ ಅಪಘಾತವಾಗಿದ್ದ ಪ್ರಕರಣಗಳು
* 2021ರ ನ. 27
: ಥಣಿಸಂದ್ರ ಮುಖ್ಯರಸ್ತೆಯಲ್ಲಿ ರಸ್ತೆ ಗುಂಡಿಯಲ್ಲಿ ಆಯತಪ್ಪಿ ಬಿದ್ದ ಸ್ಕೂಟರ್ ಸವಾರ ಅಜೀಂ ಅಹ್ಮದ್‌ (21) ಎಂಬುವರಿಗೆ ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಜೀಂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು

* 2021ರ ಸೆಪ್ಟೆಂಬರ್ 7: ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಮುಖ್ಯರಸ್ತೆಯಲ್ಲಿ ಗುಂಡಿಯಿಂದಾಗಿ ದ್ವಿಚಕ್ರ ವಾಹನ ಉರುಳಿ ಬಿದ್ದಿದ್ದು, ಮೈಕೊ ಲೇಔಟ್‌ನ ಬಿಸ್ಮಿಲ್ಲಾ ನಗರದ ಸವಾರ ಖುರ್ಷಿದ್ ಅಹ್ಮದ್ (65) ಎಂಬುವರು ಮೃತಪಟ್ಟಿದ್ದರು

* 2022ರ ಜನವರಿ 29: ಬ್ಯಾಡರಹಳ್ಳಿ ಮುಖ್ಯರಸ್ತೆಯ ಅಂಜನಾನಗರ ವೃತ್ತದಲ್ಲಿ ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿ ಶಿಕ್ಷಕಿ ಶರ್ಮಿಳಾ (38) ಎಂಬುವರು ಮೃತಪಟ್ಟಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT