ಶುಕ್ರವಾರ, ಮೇ 27, 2022
23 °C
ಅನುಮತಿ ಪಡೆಯದೆ ರಸ್ತೆ ಅಗೆದರೆ ಬೀಳುತ್ತದೆ ಭಾರಿ ದಂಡ

ರಸ್ತೆ ಅಗೆತ: ಹೇಳೋರು, ಕೇಳೋರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಯಾವುದೇ ವಾರ್ಡ್‌ನಲ್ಲಿ ಸಂಚರಿಸಿದರೂ ಅಲ್ಲಲ್ಲಿ ರಸ್ತೆ ಅಗೆದಿರುವುದು ಕಾಣುತ್ತದೆ. 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿಗಾಗಿ ಜಲಮಂಡಳಿ ರಸ್ತೆ ಅಗೆಯುತ್ತಿದ್ದರೆ, ಭೂಗತ ಕೇಬಲ್‌ ಅಳವಡಿಸುವ ಕಾಮಗಾರಿಯನ್ನು ಬೆಸ್ಕಾಂ ಕೈಗೊಂಡಿದೆ.

ಈ ಮಧ್ಯೆ, ಆಪ್ಟಿಕಲ್‌ ಫೈಬರ್‌ ಕೇಬಲ್‌ (ಒಎಫ್‌ಸಿ) ಕಂಪನಿಗಳು ಅಥವಾ ದೂರಸಂರ್ಪಕ ಕಂಪನಿಗಳು ರಾತ್ರೋ ರಾತ್ರಿ ರಸ್ತೆ ಅಗೆಯುತ್ತಿರುವುದರಿಂದ ಸಂಚಾರವೇ ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ಕೇಬಲ್‌ ಅಳವಡಿಕೆಗೆ ಗುಂಡಿ ತೋಡುವ ಕಂಪನಿಗಳು, ಕೆಲಸ ಮುಗಿದ ನಂತರ ರಸ್ತೆಯನ್ನು ದುರಸ್ತಿ ಮಾಡುವುದಿಲ್ಲ ಎಂದೂ ನಾಗರಿಕರು ದೂರುತ್ತಾರೆ.

‘ಈ ಹಿಂದೆ ಎನ್. ಮಂಜುನಾಥ್ ಪ್ರಸಾದ್‌ ಅವರು ಬಿಬಿಎಂಪಿ ಆಯುಕ್ತರಾಗಿದ್ದಾಗ, ಒಮ್ಮೆ ರಸ್ತೆ ಅಗೆದ ನಂತರ ಒಂದು ವರ್ಷದವರೆಗೆ ಆ ರಸ್ತೆಯನ್ನು ಮತ್ತೆ ಅಗೆಯಬಾರದು ಎಂದು ಆದೇಶ ಮಾಡಿದ್ದರು. ಈಗ ಅವರೇ ಆಯುಕ್ತರಾಗಿದ್ದಾರೆ. ಈಗಲೂ ಬೇಕಾಬಿಟ್ಟಿ ರಸ್ತೆ ಅಗೆಯುವ ಕಾರ್ಯ ಮುಂದುವರಿದಿದೆ‌’ ಎಂದು ವರ್ತೂರಿನ ಜಗದೀಶ ರೆಡ್ಡಿ ಹೇಳುತ್ತಾರೆ.

’ಪಾಲಿಕೆ ಸದಸ್ಯರ ಅವಧಿ ಮುಗಿದ ನಂತರ, ಒಎಫ್‌ಸಿ ಏಜೆನ್ಸಿಗಳು ರಸ್ತೆ ಅಗೆಯುವ ಪ್ರಮಾಣ ಹೆಚ್ಚಾಗಿದೆ. ರಾತ್ರಿ ವೇಳೆ ಅಗೆದು ಕೇಬಲ್‌ ಹಾಕಿ, ಬೆಳಿಗ್ಗೆ ವೇಳೆಗೆ ಮಣ್ಣು ಹಾಕಿ ಹೋಗಿರುತ್ತಾರೆ. ಮೊದಲಾದರೆ ಜನಪ್ರತಿನಿಧಿಗಳು ಇರುತ್ತಿದ್ದರು. ಅವರು ಪ್ರಭಾವ ಬೀರಿ, ಕಂಪನಿಗಳಿಗೆ ರಸ್ತೆ ಅಗೆಯಲು ಅನುಮತಿ ಕೊಡಿಸಿರಬಹುದು ಎಂದುಕೊಳ್ಳಬಹುದಿತ್ತು. ಆದರೆ, ಈಗ ನೋಡಲ್‌ ಅಧಿಕಾರಿಗಳಿದ್ದಾರೆ. ಎಲ್ಲವೂ ನಿಯಮದ ಪ್ರಕಾರವೇ ನಡೆಯಬೇಕು. ಆದರೂ ಬೇಕಾಬಿಟ್ಟಿ ರಸ್ತೆ ಅಗೆಯುವುದು ನಿಂತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಹಳೆಯ ವಾರ್ಡ್‌ ಸಮಿತಿಗಳನ್ನು ರದ್ದು ಮಾಡಲಾಗಿದೆ. ಆದರೆ, ಕೆಲವು ವಾರ್ಡ್‌ಗಳಲ್ಲಿ ಹೊಸ ವಾರ್ಡ್‌ ಸಮಿತಿಗಳು ಇನ್ನೂ ರಚನೆಯಾಗಿಲ್ಲ. ಈ ಸಮಿತಿಗಳನ್ನು ರಚಿಸುವಂತೆ ನೋಡಲ್‌ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡ ಲಾಗಿದೆ. ಆದರೆ, ಈಗ ಯಾರಿಗೂ ಹೇಳೋರಿಲ್ಲ, ಕೇಳೋರಿಲ್ಲದಂತಾಗಿದೆ‘ ಎಂದರು.

‘ಅಗೆದ ರಸ್ತೆಯನ್ನು ಕೇವಲ ಮಣ್ಣು ಹಾಕಿ ಮುಚ್ಚುತ್ತಿರುವುದರಿಂದ ಮಳೆಯಲ್ಲಿ ಕೆಸರು ಉಂಟಾಗುತ್ತಿದೆ. ಭಾರಿ ವಾಹನಗಳು ಸಂಚರಿಸಿದಾಗ ಅಪಘಾತಗಳು ಸಂಭವಿಸುವ ಅಪಾ ಯವೂ ಇದೆ. ವೆಟ್‌ಮಿಕ್ಸ್‌ ಮತ್ತು ಜಲ್ಲಿ ಹಾಕಿ ರಸ್ತೆಯ ಗುಂಡಿ ಮುಚ್ಚಬೇಕು ಎಂದು ಒಎಫ್‌ಸಿ ಕಂಪನಿಗಳಿಗೆ ಸೂಚನೆ ನೀಡಬೇಕು‘ ಎಂದು ಹಗದೂರು ವಾರ್ಡ್‌ನ ಮುರಳಿ ಗೋವಿಂದರಾಜು ಹೇಳುತ್ತಾರೆ.

ಕಂಪನಿಗಳಿಗೆ ದಂಡ:  ಅನಧಿಕೃತವಾಗಿ ರಸ್ತೆ ಅಗೆದಿರುವುದು ಮತ್ತು ಸಾರ್ವ ಜನಿಕರ ಆಸ್ತಿಗೆ ಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಯೊ ಡಿಜಿಟಲ್‌ ಫೈಬರ್‌ ಕಂಪನಿಗೆ ₹30 ಲಕ್ಷ ಹಾಗೂ ಏಟ್ರಿಯಾ ಕನ್ವರ್ಜೆನ್ಸ್‌ ಟೆಕ್ನಾಲಜಿಕಲ್‌ ಲಿಮಿಟೆಡ್‌ಗೆ ಒಟ್ಟು ₹35 ಲಕ್ಷ ದಂಡವನ್ನು ಬಿಬಿಎಂಪಿ ವಿಧಿಸಿದೆ.

₹25 ಲಕ್ಷದವರೆಗೆ ದಂಡ

ಯಾವುದೇ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳು ಅನಧಿಕೃತವಾಗಿ ರಸ್ತೆ ಅಗೆದರೆ, ಪ್ರತಿ ಘಟನೆಗೆ ₹25 ಲಕ್ಷ, ಸಾರ್ವಜನಿಕರಿಗೆ ₹10 ಲಕ್ಷ ದಂಡ ವಿಧಿಸುವ ಅಧಿಕಾರವನ್ನು ಸಂಬಂಧಪಟ್ಟ ಪಾಲಿಕೆ ಎಂಜಿನಿಯರ್‌ಗೆ ಪಾಲಿಕೆ ನೀಡಿದೆ.

ಸಂಸ್ಥೆಗಳು ರಾತ್ರಿ ವೇಳೆ ಕೆಲಸ ಮಾಡುವ ಸಂದರ್ಭದಲ್ಲಿ, ಸ್ಥಳದಲ್ಲಿ ಎಲ್‌ಇಡಿ ದೀಪದ ವ್ಯವಸ್ಥೆ ಅಳವಡಿಸಿಕೊಳ್ಳಬೇಕು,  ರಸ್ತೆಯ ಬದಿಯ ಹೂಳನ್ನು ತೆರವುಗೊಳಿಸಬೇಕು ಹಾಗೂ ಬ್ಯಾರಿಕೇಡ್‌ಗಳನ್ನು ಅಳವಡಿಸಿರ
ಬೇಕು ಎಂದೂ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್‌ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು