ಭಾನುವಾರ, ಸೆಪ್ಟೆಂಬರ್ 25, 2022
20 °C
ಈಸ್ಟ್‌ ವೆಸ್ಟ್‌ ಶಾಲೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಪಾದಚಾರಿ ಮಾರ್ಗವೇ ಬಟ್ಟೆ ತೊಳೆಯುವ ಸ್ಥಳ; ಖಾಸಗಿ ಬಸ್‌ಗೆ ರಸ್ತೆಯೇ ನಿಲ್ದಾಣ!

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹಗಲು, ರಾತ್ರಿಯೆನ್ನದೇ ರಸ್ತೆ ಬದಿಯಲ್ಲೇ ನಿಲ್ಲುವ ಖಾಸಗಿ ಬಸ್‌ಗಳು, ಕಾರು, ಜೀಪುಗಳನ್ನೂ ಅಲ್ಲಿಯೇ ನಿಲುಗಡೆ ಮಾಡಿ ತೆರಳುವ ಬಸ್‌ ಮಾಲೀಕರು, ಸರಕು ಸಾಗಣೆ ಟ್ರಕ್ಕುಗಳ ನಿಲ್ದಾಣವೂ ಅದೇ... ಇದರಿಂದ ವಿದ್ಯಾರ್ಥಿಗಳು ನಿತ್ಯವೂ ಸಂಕಷ್ಟ ಪಡುತ್ತಿದ್ದಾರೆ.

ಇದು ಬಸವಗುಡಿಯ ಆರ್ಮುಗಂ ವೃತ್ತದ ‘ದಿ ಈಸ್ಟ್‌ ವೆಸ್ಟ್‌ ಸ್ಕೂಲ್‌’ನ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಂಕಷ್ಟ. 

ಈಸ್ಟ್‌ ವೆಸ್ಟ್‌ ಎಜುಕೇಷನ್‌ ಟ್ರಸ್ಟ್‌ಗೆ ಸೇರಿದ ಶಾಲೆ ಇದಾಗಿದ್ದು, 1ನೇ ತರಗತಿಯಿಂದ ಎಸ್ಸೆಸ್ಸೆಲ್ಸಿ ತನಕ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ.

ಈ ಶಾಲೆಯ ಸುತ್ತಮುತ್ತಲ ರಸ್ತೆಯಲ್ಲಿಯೇ ಜಬ್ಬಾರ್‌ ಟ್ರ್ಯಾವೆಲ್ಸ್‌ಗೆ ಸೇರಿದ 5 ಬಸ್‌ಗಳು ನಿತ್ಯವೂ ನಿಲ್ಲುತ್ತಿವೆ. ಅವುಗಳಿಗೆ ರಸ್ತೆಯೇ ‘ಬಸ್‌ ನಿಲ್ದಾಣ’. ರಾತ್ರಿ ವೇಳೆ ದೂರದ ಊರಿಗೆ ತೆರಳುವ ಖಾಸಗಿ ಬಸ್‌ಗಳು, ಹಗಲಿನಲ್ಲಿ ಈ ಸ್ಥಳಕ್ಕೆ ಬಂದು ನಿಲ್ಲುತ್ತಿವೆ.

ಚಾಲಕರು, ನಿರ್ವಾಹಕರು, ಕ್ಲೀನರ್‌ಗೆ ಶಾಲಾ ಸುತ್ತಲಿನ ಪಾದಚಾರಿ ಮಾರ್ಗವೇ ಸ್ನಾನಗೃಹವಾಗಿದೆ. ನಿತ್ಯ ರಸ್ತೆ ಬದಿಯಲ್ಲೇ ಅವರು ಬಟ್ಟೆ ತೊಳೆಯುವುದು, ಬಸ್‌ ಶುಚಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಲುಷಿತ ನೀರಿನಿಂದ ರಸ್ತೆಯಲ್ಲಿ ಮಲಿನ ವಾತಾವರಣ ನಿರ್ಮಾಣವಾಗುತ್ತಿದೆ.

ಬಸ್‌ ಮಾಲೀಕರು ರಸ್ತೆಯನ್ನೇ ಗ್ಯಾರೇಜ್‌ ಮಾಡಿಕೊಂಡಿದ್ದಾರೆ. ಇದರಿಂದ ಹೊಮ್ಮುವ ಶಬ್ದ ಮಕ್ಕಳ ಪಾಠಕ್ಕೆ ಅಡ್ಡಿ ಆಗುತ್ತಿದೆ. ರಸ್ತೆಯಲ್ಲಿ ಬಸ್‌ಗಳು ಅನಧಿಕೃತವಾಗಿ ದಿನಪೂರ್ತಿ ನಿಲ್ಲುತ್ತಿರುವುದು ಅಪಘಾತಕ್ಕೂ ಕಾರಣವಾಗುತ್ತಿದೆ ಎಂದು ಪೋಷಕರು ನೋವು ತೋಡಿಕೊಂಡರು.

ದಶಕದ ಸಮಸ್ಯೆ: ಇದು ದಶಕದ ಸಮಸ್ಯೆ, ಇನ್ನೂ ಬಗೆಹರಿದಿಲ್ಲ. ಟ್ರಸ್ಟ್‌ ಸದಸ್ಯರು ಹಾಗೂ ಶಿಕ್ಷಕರು ಹತ್ತು ವರ್ಷಗಳಿಂದಲೂ ಪರಿಹಾರ ಒದಗಿಸುವಂತೆ ಪಾಲಿಕೆ ಸದಸ್ಯರಿಗೆ ಹಾಗೂ ಸಂಚಾರ ಪೊಲೀಸರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನ ಆಗಿಲ್ಲ ಎಂದು ಶಿಕ್ಷಕರು ದೂರಿದ್ದಾರೆ.

2018ರಲ್ಲಿ ಬಸವನಗುಡಿ ಸಂಚಾರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು, ಬಸ್ ಮಾಲೀಕರಿಗೆ ಎಚ್ಚರಿಕೆ ನೀಡಿ ಶಾಲೆ ಸಮೀಪ ನಿಲುಗಡೆ ಮಾಡದಂತೆ ತಾಕೀತು ಮಾಡಿದ್ದರು.

ಇದರಿಂದ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಬಸ್ ನಿಲುಗಡೆ ಮುಂದುವರಿದಿದೆ.

ವಿದ್ಯಾರ್ಥಿಗಳ ಆತಂಕದ ಹೆಜ್ಜೆ
‘ಸಮೀಪದಲ್ಲಿ ಪಿಯು ಕಾಲೇಜುಗಳಿವೆ. ಅಲ್ಲಿನ ವಿದ್ಯಾರ್ಥಿಗಳು ಬೈಕ್‌ನಲ್ಲಿ ವೇಗವಾಗಿ ತೆರಳುತ್ತಾರೆ. ಶಾಲೆಗೆ ಬರುವ ಪುಟ್ಟ ಮಕ್ಕಳು ಆತಂಕದಿಂದ ಹೆಜ್ಜೆ ಹಾಕುವ ಸ್ಥಿತಿಯಿದೆ. ರಸ್ತೆಯಲ್ಲಿ ಖಾಸಗಿ ಬಸ್‌ಗಳ ನಿಲುಗಡೆಯಿಂದಾಗಿ ಶಾಲೆ ಅವಧಿಯಲ್ಲಿ ಆರ್ಮುಗಂ ವೃತ್ತ, ಆಸುಪಾಸಿನಲ್ಲಿ ಸಂಚಾರ ದಟ್ಟಣೆ ಇರುತ್ತದೆ’ ಎಂದು ಸ್ಥಳೀಯರಾದ ನವೀನ್‌ ಹೇಳಿದರು.

ದಿವಾನ್‌ ಮಾಧವ ರಸ್ತೆ, ಪಟಾಲಮ್ಮ ದೇವಸ್ಥಾನ ರಸ್ತೆ, ಹಳೇ ಕನಕಪುರ ರಸ್ತೆಯ ಮೂಲಕ ಬರುವ ಸಾವಿರಾರು ವಾಹನಗಳ ಚಾಲಕರು ಮುಖ್ಯರಸ್ತೆಗೆ ತೆರಳಲು ಮಸೀದಿ ರಸ್ತೆಯನ್ನೇ ಬಳಸುತ್ತಾರೆ. ಈ ಮಾರ್ಗದಲ್ಲಿ ನಿತ್ಯವೂ ವಾಹನ ದಟ್ಟಣೆ. ವಿದ್ಯಾರ್ಥಿಗಳಂತೂ ಆತಂಕದಿಂದಲೇ ಹೆಜ್ಜೆ ಹಾಕುತ್ತಿದ್ದಾರೆ.

ಕ್ರಮ ಕೈಗೊಳ್ಳದ ಪೊಲೀಸರು
ಸಮಸ್ಯೆ ಬಗೆಹರಿಸುವಂತೆ ಕೋರಿ ಟ್ರಸ್ಟ್‌ ಸದಸ್ಯರು ಮತ್ತೆ ಜುಲೈ 29ರಂದು ಬಸವನಗುಡಿ ಸಂಚಾರ ಪೊಲೀಸ್‌ ಠಾಣೆಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿದ್ದಾರೆ. ಪೊಲೀಸರು ಮನವಿ ಸ್ವೀಕರಿಸಿ ಮೊಹರು ಹಾಗೂ ಸಹಿ ಹಾಕಿ ಕಳುಹಿಸಿದ್ದಾರೆ. 18 ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ಸ್ಥಳಕ್ಕೆ ಮಂಗಳವಾರವೂ ಬಸ್‌ ಬಂದು ನಿಂತಿದೆ.

***

ಮಾಲೀಕರಿಗೆ ಎಚ್ಚರಿಕೆ ನೀಡಿ, ನೋಟಿಸ್‌ ಜಾರಿ ಮಾಡಲಾಗಿದೆ. ಪುನರಾವರ್ತನೆ ಆದಲ್ಲಿ 15 ದಿನದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದೇವೆ.
-ಚಿದಾನಂದಮೂರ್ತಿ, ಇನ್‌ಸ್ಪೆಕ್ಟರ್‌, ಬಸವನಗುಡಿ ಸಂಚಾರ ಪೊಲೀಸ್‌ ಠಾಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು