ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಗುಂಡಿ: ಸ್ಕೂಟರ್‌ ಚಾಲಕ ಸಾವು

Last Updated 1 ಡಿಸೆಂಬರ್ 2021, 19:57 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಗುಂಡಿಯಲ್ಲಿ ಆಯತಪ್ಪಿ ಬಿದ್ದ ಸ್ಕೂಟರ್ ಸವಾರ ಅಜೀಂ ಅಹ್ಮದ್‌ (21) ಎಂಬುವರ ಮೇಲೆ ಗೂಡ್ಸ್‌ ವಾಹನವೊಂದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

‘ಅಜೀಂ ಅವರು ನ.27ರ ಮಧ್ಯಾಹ್ನ 1.30ರ ಸುಮಾರಿಗೆ ಥಣಿಸಂದ್ರದಿಂದ ಹೆಗಡೆ ನಗರಕ್ಕೆ ಥಣಿಸಂದ್ರ ಮುಖ್ಯರಸ್ತೆಯ ಮೂಲಕ ಹೋಂಡಾ ಡಿಯೊ ಸ್ಕೂಟರ್‌ನಲ್ಲಿ ಸಾಗುತ್ತಿದ್ದರು. ಪ್ರಕಾಶ್‌ ಹಾರ್ಡ್‌ವೇರ್‌ ಮುಂಭಾಗದ ರಸ್ತೆಯ ಎಡಭಾಗದಲ್ಲಿ ಗುಂಡಿ ಬಿದ್ದಿರುವುದು ಅವರ ಗಮನಕ್ಕೆ ಬಂದಿರಲಿಲ್ಲ. ಅದರೊಳಗೆ ಸ್ಕೂಟರ್‌ ಇಳಿದೊಡನೆ ಆಯತಪ್ಪಿ ಬಿದ್ದಿದ್ದಾರೆ. ಈ ವೇಳೆ ಗೂಡ್ಸ್‌ ವಾಹನ ಹರಿದಿದೆ. ಅದರಿಂದ ಅವರ ಬಲ ತೊಡೆ ಹಾಗೂ ಬಲಗೈಗೆ ತೀವ್ರ ಗಾಯಗಳಾಗಿದ್ದವು. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಘಟನೆ ಅದೇ ದಿನ ಸಂಜೆ 4.30ರ ಸುಮಾರಿಗೆ ಮೃತಪಟ್ಟಿದ್ದಾರೆ’ ಎಂದು ಸಂಚಾರ ಪೊಲೀಸರ ಪ್ರಕಟಣೆ ತಿಳಿಸಿದೆ.

‘ಈ ಸಂಬಂಧ ಬಾಣಸವಾಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸವಿತಾ ಹಾಗೂ ಗೂಡ್ಸ್‌ ವಾಹನ ಚಾಲಕ ಬಂಡೇಹೊಸೂರು ಗ್ರಾಮದ ರವಿ ಎಂಬುವರನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ರಸ್ತೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ನಿರ್ಲಕ್ಷ್ಯವೂ ಘಟನೆಗೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ. ಪ್ರಕರಣದ ಮೂರನೇ ಆರೋಪಿಯಾಗಿರುವ ಆತನನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ’ ಎಂದು ಹೇಳಿದೆ.

ಕಾಲೇಜು ಬಸ್‌ ಹರಿದು ವಿದ್ಯಾರ್ಥಿನಿ ಸಾವು

ಬೆಂಗಳೂರು: ಆಯತಪ್ಪಿ ಸ್ಕೂಟರ್‌ ಸಮೇತ ರಸ್ತೆ ಮೇಲೆ ಬಿದ್ದ ವಿದ್ಯಾರ್ಥಿನಿ ಮೇಲೆ ಕಾಲೇಜು ಬಸ್‌ ಹರಿದಿದ್ದು, ಆಕೆ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಯಲಹಂಕದ ಶಿವನಹಳ್ಳಿ ನಿವಾಸಿ ಎಂ.ಸಾಯಿ ವೈಷ್ಣವಿ (21) ಮೃತ ಯುವತಿ. ಖಾಸಗಿ ಕಾಲೇಜೊಂದರಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಯುವತಿಯು ತಂಗಿಯನ್ನು ಟ್ಯೂಷನ್‌ನಿಂದ ಕರೆತರಲು ಬೆಳಿಗ್ಗೆ 7.40ರ ಸುಮಾರಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದಳು. ಯಲಹಂಕ ಸಂತೆ ಸರ್ಕಲ್‌ ಬಳಿ ಇರುವ ಬಿಡಿಕೆ ಕಲ್ಯಾಣ ಮಂಟಪದ ಮುಂಭಾಗದ ರಸ್ತೆಯಲ್ಲಿ ಸಾಗುವಾಗ ವೈಷ್ಣವಿ ಅವರ ಸ್ಕೂಟರ್‌, ಸೈಕಲ್‌ಗೆ ತಾಗಿದೆ. ಹೀಗಾಗಿ ಆಕೆ ಆಯತಪ್ಪಿ ಬಿದ್ದಿದ್ದಾಳೆ. ಈ ವೇಳೆ ರೈತರ ಸಂತೆ ಕಡೆಯಿಂದ ಬರುತ್ತಿದ್ದ ಕಾಲೇಜು ಬಸ್‌ ಆಕೆ ಮೇಲೆ ಹರಿದಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಬಿಬಿಎಂಪಿಯಿಂದ ಪರಿಹಾರ ಮರೀಚಿಕೆ

ರಸ್ತೆ ಗುಂಡಿಗಳಿಂದಾಗುವ ಅಪಘಾತಗಳಲ್ಲಿ ಗಾಯಗೊಂಡವರಿಗೆ ಹಾಗೂ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಹೈಕೋರ್ಟ್, 2019ರ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಪರಿಹಾರ ನೀಡುವುದಕ್ಕಾಗಿ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಿದೆ. ಈ ಬಗ್ಗೆ ಬಿಬಿಎಂಪಿ ಆದೇಶ ಹೊರಡಿಸಿ ವರ್ಷ ಕಳೆದಿದೆ. ಆದರೂ ಇದುವರೆಗೂ ಯಾವುದೇ ಗಾಯಾಳುಗಳಿಗೂ ಪರಿಹಾರ ವಿತರಣೆ ಆಗಿಲ್ಲ.

ಹದಗೆಟ್ಟ ರಸ್ತೆಯಿಂದಾಗಿ ಅಥವಾ ರಸ್ತೆಗುಂಡಿಗಳಿಂದಾಗಿ ಸಂಭವಿಸುವ ಅಪಘಾತದಲ್ಲಿ ಮೃತರ ಕುಟುಂಬಕ್ಕೆ ₹ 3 ಲಕ್ಷ ಹಾಗೂ ಗಂಭೀರ ಗಾಯಗೊಂಡವರಿಗೆ ಗರಿಷ್ಠ ₹ 15 ಸಾವಿರದ ವರೆಗೆ ಪರಿಹಾರವನ್ನು ಬಿಬಿಎಂಪಿ ನಿಗದಿಪಡಿಸಿದೆ. ಸಣ್ಣ ಪ್ರಮಾಣದ ಗಾಯಕ್ಕೆ ₹ 5,000 ಹಾಗೂ ಇತರ ಹೆಚ್ಚುವರಿ ಗಾಯಗಳಿಗೆ ತಲಾ ₹ 500ರಂತೆ ಪರಿಹಾರ ಪಡೆಯಬಹುದು. ವೈದ್ಯಕೀಯ ವೆಚ್ಚದ ರೂಪದಲ್ಲಿ ₹ 10 ಸಾವಿರದವರೆಗೆ ಮಧ್ಯಂತರ ಪರಿಹಾರ ಪಡೆಯಲು ಅವಕಾಶವಿದೆ. ಗಾಯದ ನೋವು ಉಳಿದುಕೊಂಡು ಮೂರು–ನಾಲ್ಕು ದಿನಗಳ ಕಾಲ ಚಿಕಿತ್ಸೆ ಪಡೆದರೆ ₹ 10 ಸಾವಿರದವರೆಗೆ ಪರಿಹಾರ ನೀಡಬಹುದು. ಗಾಯಕ್ಕೆ ಒಮ್ಮೆ ಪರಿಹಾರ ಪಡೆದ ಬಳಿಕ ಚಿಕಿತ್ಸೆಗೆ ಪ್ರತ್ಯೇಕವಾಗಿ ಪರಿಹಾರ ನೀಡಲು ಬರುವುದಿಲ್ಲ. ಎಕ್ಸ್‌–ರೇ ಮತ್ತಿತರ ಪರೀಕ್ಷೆಗಳನ್ನು ನಡೆಸಿದ್ದರೆ ಅದರ ವೆಚ್ಚ ಮರುಪಾವತಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT