ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ವಿ.ಕೆ.ಅಯ್ಯಂಗಾರ್‌ ರಸ್ತೆ l ಗುಂಡಿ; ವಾಹನ ಸಂಚಾರಕ್ಕೆ ಅಡ್ಡಿ

ಗುಂಡಿ ಮುಚ್ಚಲು, ಪರ್ಯಾಯ ಮಾರ್ಗ ಅಭಿವೃದ್ಧಿಗೆ ಒತ್ತಾಯ
Last Updated 24 ಆಗಸ್ಟ್ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆಯ ಅರ್ಧಭಾಗ ವೈಟ್‌ ಟಾಪಿಂಗ್‌ನಿಂದಾಗಿ ಸಪಾಟಾಗಿದ್ದರೆ, ಉಳಿದ ಭಾಗದಲ್ಲಿ ರಸ್ತೆಗುಂಡಿಗಳು ಬಾಯ್ತೆರೆದುಕೊಂಡಿವೆ. ಇಲ್ಲಿ ದಿನವಿಡೀ ಸಂಚಾರ ದಟ್ಟಣೆ. ವಾಹನ ಸವಾರರು ತಾಸುಗಟ್ಟಲೇ ರಸ್ತೆಯಲ್ಲೇ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇದೆ.

ಕೆ.ಜಿ.ರಸ್ತೆಯಿಂದ ಆರಂಭವಾಗುವ ಬಿ.ವಿ.ಕೆ.ಅಯ್ಯಂಗಾರ್‌ ರಸ್ತೆಯು ಚಿಕ್ಕಪೇಟೆ, ಕೆ.ಆರ್‌.ಮಾರುಕಟ್ಟೆ ಹಾಗೂ ಮೈಸೂರು ರಸ್ತೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಿತ್ಯ ಇಲ್ಲಿ ವ್ಯಾಪಾರ ವಹಿವಾಟು ನಡೆಯುವ ಕಾರಣ ವಾಹನಗಳ ಸಂಚಾರ ಅಧಿಕವಾಗಿರುತ್ತದೆ.

ಜವಳಿ ಖರೀದಿಗೆ ರಾಜ್ಯದ ವಿವಿಧ ಭಾಗಗಳಿಂದ ಜನ ಚಿಕ್ಕಪೇಟೆಗೆ ಬರುತ್ತಾರೆ. ಇತ್ತ ಮೆಜೆಸ್ಟಿಕ್‌ನಿಂದ ಕೆ.ಆರ್‌. ಮಾರುಕಟ್ಟೆಗೆ ತಲುಪಲು ಜನ ಇದೇ ಮಾರ್ಗವನ್ನು ಹೆಚ್ಚಾಗಿ ಬಳಸುತ್ತಾರೆ. ಪ್ರತಿ ಭಾನುವಾರ ಇಲ್ಲಿ ನಡೆಯುವ ‘ಸಂಡೇ ಬಜಾರ್‌’ ವೇಳೆ ಈ ರಸ್ತೆ ದಾಟುವುದು ಸವಾಲಿನ ಕೆಲಸ.

ಈ ಹಿಂದೆ, ರಸ್ತೆಯೆಲ್ಲಾ ಗುಂಡಿಗಳಿಂದ ತುಂಬಿದ್ದ ಕಾರಣ ವಾಹನ ಸವಾರರು ಇದನ್ನು ಹೆಚ್ಚು ಬಳಸುತ್ತಿರಲಿಲ್ಲ. ಆದರೆ, ಇತ್ತೀಚೆಗಷ್ಟೇ ಕೆ.ಆರ್‌. ಮಾರುಕಟ್ಟೆಯಿಂದ ಚಿಕ್ಕಪೇಟೆ ವೃತ್ತದವರೆಗೆ ವೈಟ್‌ ಟಾಪಿಂಗ್‌ ಕಾಮಗಾರಿ ಮುಗಿದಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಈ ಕಿರಿದಾದ ರಸ್ತೆಯಲ್ಲೇ ಸಂಚರಿಸುತ್ತವೆ.

ಕೆ.ಜಿ.ರಸ್ತೆಯಿಂದ ಸಾಗುವಾಗ ಕಿಲಾರಿ ರಸ್ತೆ, ಆರ್‌.ಟಿ.ಸ್ಟ್ರೀಟ್‌ವರೆಗೆ ರಸ್ತೆ ಗುಂಡಿಗಳು ಅಧಿಕ ಸಂಖ್ಯೆಯಲ್ಲಿದ್ದು, ವಾಹನಗಳು ಸಾಲುಗಟ್ಟಿ ನಿಂತು ಸಾಗುತ್ತವೆ. ಇದರ ಪರಿಣಾಮ ಕೆ.ಜಿ.ರಸ್ತೆಯಲ್ಲೂ ಸದಾ ವಾಹನ ದಟ್ಟಣೆ ಅಧಿಕವಾಗಿರುತ್ತದೆ.ಅಯ್ಯಂಗಾರ್‌ ರಸ್ತೆಯಲ್ಲಿರುವ ನಾಲ್ಕೂ ವೃತ್ತಗಳ ಬಳಿಯೂ ವಾಹನದಟ್ಟಣೆ ವಿಪರೀತ ಇರುತ್ತದೆ. ಇಲ್ಲಿ ಟ್ರಾಫಿಕ್‌ ಸಿಗ್ನಲ್‌ಗಳ ಕೊರತೆ ಇದೆ. ವಾಹನಗಳು ಅಡ್ಡಾದಿಡ್ಡಿ ಚಲಿಸುತ್ತವೆ.

‘ರಸ್ತೆಯಲ್ಲಿ ಪಾದಚಾರಿಗಳು ನಡೆಯಲು ಜಾಗವೇ ಇಲ್ಲ. ವಾಹನಗಳ ನಡುವೆಯೇ ರಸ್ತೆ ದಾಟಬೇಕು. ಹಾಳಾಗಿರುವ ಈ ರಸ್ತೆಯಲ್ಲಿ ಪ್ರತಿದಿನವೂ ಸಂಚರಿಸಿದರೆ ವಾಹನಗಳ ಸಾಮರ್ಥ್ಯವೂ ಖಂಡಿತಾ ಕುಗ್ಗುತ್ತದೆ’ ಎಂದು ಬೈಕ್‌ ಸವಾರ ಎಂ.ನವೀನ್ ಬೇಸರ ವ್ಯಕ್ತಪಡಿಸಿದರು.

‘ಈ ಕಿರಿದಾದ ರಸ್ತೆಯಲ್ಲೇ ಕೆಲವರು ವಾಹನ ನಿಲ್ಲಿಸಿ ಖರೀದಿಗೆ ತೆರಳುತ್ತಾರೆ. ಕೆಲವೊಮ್ಮೆ ಅವರು ಬಂದು ವಾಹನ ತೆಗೆಯುವವರೆಗೂ ಬೇರೆ ವಾಹನಗಳು ಮುಂದಕ್ಕೆ ಹೋಗಲಾಗದು’ ಎಂದರು.

‘ನಗರದಲ್ಲಿ ಹೆಚ್ಚು ವ್ಯಾಪಾರ ನಡೆಯುವ ಸ್ಥಳಗಳಲ್ಲಿ ಇದೂ ಒಂದು. ಸಾಮಗ್ರಿ ಹೊತ್ತು ಬರುವ ಭಾರಿ ವಾಹನಗಳು ಅಂಗಡಿಗಳ ಮುಂದೆ ದೀರ್ಘ ಕಾಲ ನಿಲ್ಲುತ್ತವೆ. ಹೀಗಾಗಿ ದಟ್ಟಣೆ ಮತ್ತಷ್ಟು ಅಧಿಕವಾಗುತ್ತದೆ’ ಎಂದು ಹೆಸರು ಹೇಳಿಕೊಳ್ಳಲು ಬಯಸದ ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ವಿವರಿಸಿದರು.

‘ರಸ್ತೆ ಆದರೆ ದಟ್ಟಣೆ ಕುಗ್ಗಲಿದೆ’

‘ಕೆಂಪೇಗೌಡ ಬಸ್‌ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಿಂದ ಕೆ.ಆರ್‌.ಮಾರುಕಟ್ಟೆ, ಜಯನಗರ, ಚಾಮರಾಜಪೇಟೆಗೆ ಹೋಗಲುಸಾಮಾನ್ಯವಾಗಿ ಕೆ.ಆರ್.ವೃತ್ತ, ಕಾರ್ಪೊರೇಷನ್‌ ಮಾರ್ಗವಾಗಿ ಹೋಗಬೇಕು. ಆದರೆ,ಬಿ.ವಿ.ಕೆ.ಅಯ್ಯಂಗಾರ್‌ ರಸ್ತೆಯ ಮೂಲಕ ಕೆಲವೇ ನಿಮಿಷದಲ್ಲಿ ಕೆ.ಆರ್‌.ಮಾರುಕಟ್ಟೆ ತಲುಪಬಹುದು. ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನದಟ್ಟಣೆ ತಪ್ಪಿಸಲುಇಂತಹ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವುದು ಸೂಕ್ತ. ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಪಾಲಿಕೆ ಗಮನ ಹರಿಸಬೇಕು. ಇದರಿಂದ ದಟ್ಟಣೆಯೂ ಕಡಿಮೆ ಆಗಲಿದೆ’ ಎಂದು ಚಿಕ್ಕಪೇಟೆ ನಿವಾಸಿ ಶ್ಯಾಮ್‌ ಸುಂದರ್‌ ಸಲಹೆ ನೀಡಿದರು.

*ಪಾದಚಾರಿ ಮಾರ್ಗದವರೆಗೂ ಅಂಗಡಿ– ಮುಂಗಟ್ಟುಗಳು ಚಾಚಿಕೊಂಡಿವೆ. ಜನರಿಗೆ ಪಾದಚಾರಿ ಮಾರ್ಗವೇ ಇಲ್ಲ. ಮೊದಲು ಅವುಗಳನ್ನು ತೆರವುಗೊಳಿಸಬೇಕು.

ಸಂಧ್ಯಾವತಿ, ಬೆಂಗಳೂರು ನಿವಾಸಿ

* ರಸ್ತೆಯಲ್ಲಿ ಗುಂಡಿಗಳನ್ನು ತಾತ್ಕಾಲಿಕ ವಾಗಿಯಾದರೂ ಮುಚ್ಚಿದರೆ ಅನುಕೂಲ. ಇವು ದೊಡ್ಡ ಹಳ್ಳ ಆಗುವುದನ್ನು ಈಗಲೇ ತಡೆಯಬೇಕು. ಈ ಬಗ್ಗೆ ಪಾಲಿಕೆ ಕ್ರಮ ಕೈಗೊಳ್ಳಲಿ.

ಈಶ್ವರ್‌, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT