ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಮಾವು, ರಾಮಮೂರ್ತಿ ನಗರ ವ್ಯಾಪ್ತಿಯಲ್ಲಿ ಹದಗೆಟ್ಟ ರಸ್ತೆ: ಸವಾರರು ಹೈರಾಣ

ಹೊರಮಾವು, ರಾಮಮೂರ್ತಿ ನಗರ ವಾರ್ಡ್ ವ್ಯಾಪ್ತಿಯಲ್ಲಿ ಜನರ ಪಡಿಪಾಟಲು
Last Updated 27 ಸೆಪ್ಟೆಂಬರ್ 2021, 19:25 IST
ಅಕ್ಷರ ಗಾತ್ರ

ಕೆ.ಆರ್.ಪುರ: ದಾರಿಯುದ್ದಕ್ಕೂ ನೂರಾರು ಹಳ್ಳಗಳು, ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಗಳು, ರಾತ್ರಿಯಾದರೆ ಸಂಚರಿಸಲು ಆಗದೆ ಪರಿತಪಿಸುವ ಸಾರ್ವಜನಿಕರು...

ಇದು ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಹೊರಮಾವು ಮತ್ತು ರಾಮಮೂರ್ತಿ ನಗರ ವಾರ್ಡ್ ವ್ಯಾಪ್ತಿಯ ಬಡಾವಣೆಗಳ ರಸ್ತೆಗಳ ಸ್ಥಿತಿ. ಕಳೆದ ಎರಡು ವರ್ಷಗಳ ಹಿಂದೆ 110 ಹಳ್ಳಿಗಳಿಗೆ ಜಲಮಂಡಳಿಯ ಕಾವೇರಿ ನೀರು ಒದಗಿಸುವ ಯೋಜನೆಯ ಕಾಮಗಾರಿಗಳಿಂದಾಗಿ ರಸ್ತೆಗಳು ಪೂರ್ಣ ಹದಗೆಟ್ಟಿವೆ.

ಕಾವೇರಿ ನೀರು ಪೂರೈಕೆ ಕೊಳವೆ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆ ಒಂದು ವರ್ಷದ ಹಿಂದೆ ಪೂರ್ಣಗೊಂಡರೂ ರಸ್ತೆ ಮರು ನಿರ್ಮಾಣ ಮಾತ್ರ ಆಗಿಲ್ಲ. ರಸ್ತೆಗೆ ಡಾಂಬರ್ ಹಾಕಲು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ.

ಕಾವೇರಿ ಪೈ‍ಪ್‌ಲೈನ್ ಹಾಗೂ ಒಳಚರಂಡಿ ಕಲ್ಪಿಸಲು ಅಗೆದ ರಸ್ತೆಗಳು ಈಗ ತಗ್ಗು ದಿಣ್ಣೆಗಳಿಂದ ಕೂಡಿವೆ. ಒಳಚರಂಡಿ ಕಲ್ಪಿಸುವ ಸಂಧರ್ಭದಲ್ಲಿ ರಸ್ತೆ ಆಗೆದು ಸಮರ್ಪಕವಾಗಿ ಮುಚ್ಚದ ಕಾರಣ ನೂರಾರು ಹೊಂಡಗಳು ನಿರ್ಮಾಣವಾಗಿ ಅಪಘಾತಗಳು ಸಂಭವಿಸುತ್ತಿವೆ.‌

ಹೊರಮಾವು –ಅಗರ ಮುಖ್ಯರಸ್ತೆಯ ವೃತ್ತದಿಂದ ಕಲ್ಕೆರೆ ಗ್ರಾಮದವರೆಗೂ, ಕನಕಗಿರಿ ಬಡಾವಣೆಯ ಮುಖ್ಯ ರಸ್ತೆಗಳು, ಹೊರಮಾವು ಮುಖ್ಯ ರಸ್ತೆಯಿಂದ ಬಂಜಾರ ಬಡಾವಣೆಯ ವೃತ್ತದವರೆಗೂ, ಹೊಯ್ಸಳನಗರ, ಗೆದ್ದಲಹಳ್ಳಿ, ವಿನಾಯಕ ಬಡಾವಣೆಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿವೆ.

ಮಳೆ ಬಿದ್ದಾಗಲಂತೂ ರಸ್ತೆಗಳಲ್ಲಿ ರಸ್ತೆ ಗುಂಡಿಯಲ್ಲಿ ಬಿದ್ದು ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ಹೊರಮಾವು, ಜಯಂತಿನಗರ, ಕಲ್ಕೆರೆ, ಚನ್ನಸಂದ್ರ, ಅಗರ, ಜ್ಯೋತಿನಗರ, ಕನಕನಗರ ನಿವಾಸಿಗಳು ದಿನನಿತ್ಯದ ಕೆಲಸಗಳಿಗೆ ಈ ರಸ್ತೆಗಳಲ್ಲಿ ಸಂಚರಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಈ ಹದಗೆಟ್ಟ ರಸ್ತೆಯಲ್ಲಿ ವಾಹನ ಸವಾರರ ಹೈರಾಣಾಗಿದ್ದಾರೆ.

‘ಹಲವಾರು ಬಾರಿ ರಾಜಕೀಯ ಮುಖಂಡರು ಹಾಗೂ ಅಧಿಕಾರಿಗಳು ಸಮಸ್ಯೆ ಆಲಿಸಲು ಬಂದಾಗ ಮಾತ್ರ ಕಾಟಚಾರಕ್ಕೆ ಗುಂಡಿಗಳಿಗೆ ಮಣ್ಣು ಹಾಕಿಸುತ್ತಾರೆ. ಮತ್ತೆ ಒಂದು ವಾರದೊಳಗೆ ಅದೇ ಸ್ಥಿತಿ ಮರುಕಳಿಸುತ್ತದೆ’ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಕಾವೇರಿ ನೀರು ಒದಗಿಸುವ ಯೋಜನೆ ಕೆಲಸ ಪ್ರಗತಿ ಇದ್ದುದರಿಂದ ದುರಸ್ತಿ ಕೆಲಸ ವಿಳಂಬವಾಗಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ₹4 ಕೋಟಿ ವೆಚ್ಚದಲ್ಲಿ ಮುಖ್ಯರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಗತಿಯಲ್ಲಿದೆ. ತಕ್ಷಣವೇ ಕೆಲಸ ಆರಂಭಿಸಲಾಗುವುದು’ ಎಂದು ಬಿಬಿಎಂಪಿ ಸಹಾಯಕ ಎಂಜಿನಿಯರ್ ರಮೇಶ್ ತಿಳಿಸಿದರು.‌

***

ರಸ್ತೆ ಹಾಳಾಗಿರುವುದರಿಂದ ಅಂಗಡಿಗಳಿಗೆ ‌ಯಾರೂ ಬರುತ್ತಿಲ್ಲ. ಒಂದು ವರ್ಷದಿಂದ ವಹಿವಾಟಿಲ್ಲದೆ ಅಂಗಡಿ ಮುಚ್ಚುವ ಸ್ಥಿತಿ ಒದಗಿದೆ
- ಶಿವಪ್ರಸಾದ್ ಅಲ್ಲೂ, ದಿನಸಿ ಅಂಗಡಿ ಮಾಲಿಕ

ರಾಜಕೀಯ ನಾಯಕರು ಸಮಸ್ಯೆ ಅಲಿಸಿದೆ ಸುಮ್ಮನಾಗುತ್ತಾರೆ. ಮಳೆಗಾಲದಲ್ಲಿ ಈ ರಸ್ತೆಗಳಲ್ಲಿ ಸಂಚರಿಸಲು ಆಗುತ್ತಿಲ್ಲ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು
-‌ ಚೆಲುವ, ಆಟೋ ಚಾಲಕ

ಬಂಜಾರ ಬಡಾವಣೆಯ ರಸ್ತೆ ಹದಗೆಟ್ಟಿದೆ. ದಿನನಿತ್ಯ ಅಪಘಾತ ಸಂಭವಿಸಿ ಜನ ಹೈರಾಣಾಗಿದ್ದಾರೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು
- ಸುನೀಲ್ ಕುಮಾರ್, ರಾಮಮೂರ್ತಿನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT