ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲಕ್ಕೆ ಮುಕ್ತವಾಗುವುದೇ ಹೊಸ ಸೇತುವೆ ?

ಮುಂಡಿಗೆ ಹಳ್ಳಕ್ಕೆ ನಿರ್ಮಾಣ
Last Updated 28 ಮೇ 2018, 12:38 IST
ಅಕ್ಷರ ಗಾತ್ರ

ಸಿದ್ದಾಪುರ: ಪಟ್ಟಣದ ಮೀನು ಮಾರುಕಟ್ಟೆ ಸಮೀಪ ಮುಖ್ಯ ರಸ್ತೆಯಲ್ಲಿ ಹೊಸ ಸೇತುವೆಯೊಂದು ನಿರ್ಮಾಣಗೊಳ್ಳುತ್ತಿದ್ದು, ಮಳೆಗಾಲ ಆರಂಭ ಆಗುವುದರೊಳಗೆ ಈ ಸೇತುವೆಯ ನಿರ್ಮಾಣ ಪೂರ್ಣಗೊಳ್ಳಲೇಬೇಕಾಗಿದೆ.

ಪಟ್ಟಣದಿಂದ ಕುಮಟಾ, ಸಾಗರ, ಜೋಗಕ್ಕೆ ಸಾಗುವ ಮುಖ್ಯ ರಸ್ತೆಯಲ್ಲಿ ಇರುವ ‘ಮುಂಡಿಗೆ ಹಳ್ಳ’ ಎಂಬ ಸಣ್ಣ ಹೊಳೆಗೆ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ಬತ್ತಿ ಹೋಗುವ ಈ ಹೊಳೆಯಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿಯುತ್ತದೆ. ಹಲವು
ದಶಕಗಳ ಹಿಂದೆ ಇಲ್ಲಿ ನಿರ್ಮಿಸಲಾಗಿದ್ದ ಸೇತುವೆ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ಹೊಸ ಸೇತುವೆ ನಿರ್ಮಾಣ ಅಗತ್ಯವಾಗಿತ್ತು.

‘ರಾಷ್ಟ್ರೀಯ ಹೆದ್ದಾರಿ ವಿಭಾಗದ ರಾಷ್ಟ್ರೀಯ ರಸ್ತೆ ನಿಧಿಯ ಅನುದಾನದಲ್ಲಿ ಈ ಸೇತುವೆ ನಿರ್ಮಾಣಗೊಳ್ಳುತ್ತಿದೆ. ಪಟ್ಟಣದ ಈ ಸೇತುವೆ ಹಾಗೂ ತಾಲ್ಲೂಕಿನ ಗುಡ್ಡೆಕೊಪ್ಪ, ಹುಲ್ಲುಂಡೆ ಸೇತುವೆ ಸೇರಿ ಒಟ್ಟು ₹ 7.3 ಕೋಟಿ ಅನುದಾನದಲ್ಲಿ ಮೂರು ಸೇತುವೆಗಳ ನಿರ್ಮಾಣ ನಡೆದಿದೆ. ಮೂರು ಸೇತುವೆಗಳಿಂದ ಒಟ್ಟಾರೆ ಅನುದಾನ ಮಂಜೂರಾಗಿದ್ದು, ಈ ಅನುದಾನವನ್ನು ಪ್ರತ್ಯೇಕಗೊಳಿಸಿಲ್ಲ’ ಎಂದು ರಾಷ್ಟ್ರೀಯ ಹೆದ್ದಾರಿಯ ಹೊನ್ನಾವರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ ನಾಯ್ಕ ಮಾಹಿತಿ ನೀಡಿದರು.

‘ಈ ಸೇತುವೆ 12 ಮೀಟರ್ ಅಗಲ ಹಾಗೂ 14 ಮೀಟರ್ ಉದ್ದ ಇದೆ. ಸೇತುವೆಯಲ್ಲಿ 7 ಮೀಟರ್ ಉದ್ದದ ಎರಡು ಅಂಕಣಗಳಿವೆ. ಸೇತುವೆಯ ಅಗಲದಲ್ಲಿ ಪಾದಚಾರಿ ಮಾರ್ಗ ಕೂಡ ಸೇರಿದೆ. ಈ ಸೇತುವೆಯ ಸ್ಲ್ಯಾಬ್ ಕೆಲಸ ಮುಗಿದಿದ್ದು, ಸೇತುವೆಯನ್ನು ಮಳೆಗಾಲದಲ್ಲಿ ಓಡಾಟಕ್ಕೆ ಬಿಡಲಿದ್ದೇವೆ. ಸೇತುವೆಯ ಮೇಲಿನ ರಸ್ತೆ ಕೆಲಸವನ್ನು ನಂತರ ಮಾಡಿಕೊಳ್ಳುತ್ತೇವೆ’ ಎಂದರು.

‘ಸುಮಾರು 75 ವರ್ಷಗಳ ಕಾಲ ಈ ಸೇತುವೆಗೆ ಏನೂ ತೊಂದರೆ ಇಲ್ಲ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಹಿನ್ನೆಲೆಯಲ್ಲಿ ನಾಲ್ಕು ಲೇನ್ ರಸ್ತೆ ಆಗುವವರೆಗೂ ಈ ಸೇತುವೆ ಬಳಕೆಗೆ ಸಿಗಲಿದೆ’ ಎಂದು ವಿಶ್ವಾಸ ಅವರದ್ದು.

‘ಹೊಸ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಲಾಗಿದೆ. ಈ ತಾತ್ಕಾಲಿಕ ರಸ್ತೆಯಲ್ಲಿ ಮಳೆಗಾಲದಲ್ಲಿ ವಾಹನ ಓಡಾಟ ಸಾಧ್ಯವಾಗುವುದಿಲ್ಲ. ಆದ್ದರಿಂದ ಮಳೆಗಾಲ ಆರಂಭವಾಗುವುದರೊಳಗೆ ಹೊಸ ಸೇತುವೆಯನ್ನು ವಾಹನ ಓಡಾಟಕ್ಕೆ ತೆರವು ಮಾಡಲೇಬೇಕಾಗಿದೆ. ಇಲ್ಲವಾದರೆ ಇಲ್ಲಿ ರಸ್ತೆ ಸಂಚಾರವೇ ಸ್ಥಗಿತಗೊಳ್ಳುತ್ತದೆ. ಮಳೆಗಾಲದಲ್ಲಿ ನೀರು ತುಂಬುವುದರಿಂದ ತಾತ್ಕಾಲಿಕ ರಸ್ತೆ ಉಪಯೋಗಕ್ಕೆ ಬಾರದು’ ಎಂಬ ಆತಂಕ ಸಾರ್ವಜನಿಕರದ್ದು.

‘ಈ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಈ ಸ್ಥಳದಲ್ಲಿ ನೀರು ಹರಿಯುವ ವ್ಯವಸ್ಥೆಯೂ ಮುಚ್ಚಿಹೋಗಿದೆ. ಆದ್ದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆಯನ್ನೂ ಮಾಡಬೇಕಾಗಿದೆ. ಈ ಕೆಲಸ ಮಾಡಲು ಸೇತುವೆ ಕಾಮಗಾರಿ ಮುಗಿಯಬೇಕಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ವಿವರಣೆ ನೀಡಿದರು.

**
ಮಳೆಗಾಲದ ಆರಂಭದೊಳಗೆ ಈ ಸೇತುವೆಯನ್ನು ಪೂರ್ಣಗೊಳಿಸಿ, ವಾಹನ ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ. ಯಾಕೆಂದರೆ ಇಲ್ಲಿ ಬೇರೆ ಪರ್ಯಾಯ ರಸ್ತೆ ಇಲ್ಲ
ಮಹೇಶ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಉಪವಿಭಾಗದ ಸಹಾಯಕ ಎಂಜಿನಿಯರ್

ರವೀಂದ್ರ ಭಟ್ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT