ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಎಲ್ಲ ಇಲಾಖೆಗಳ ಸಮನ್ವಯ ಸಭೆ, ರಾತ್ರಿ ಜಂಟಿ ತಪಾಸಣೆ ನಡೆಸಿದರೂ ತುರ್ತಾಗಿ ಆಗಬೇಕಾದ ಕಾಮಗಾರಿಗಳಲ್ಲಿ ಶೇ 50ರಷ್ಟೂ ಮುಗಿದಿಲ್ಲ.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬಿಎಂಆರ್‌ಸಿಎಲ್, ಸ್ಮಾರ್ಟ್ ಸಿಟಿ ಸೇರಿ ಎಲ್ಲ ಪ್ರಮುಖ ಸಂಸ್ಥೆಗಳ ಮುಖ್ಯಸ್ಥರ ಸಮನ್ವಯ ಸಮಿತಿಯನ್ನು ರಚಿಸಿ, ಒಂದೂವರೆ ತಿಂಗಳಿಂದ ಜಂಟಿ ಸಭೆ, ರಾತ್ರಿ ತಪಾಸಣೆ ಎಂದು ನಡೆಸಲಾಗಿತ್ತು. ಆದರೆ, ತುರ್ತಾಗಿ ಆಗಬೇಕಾದ ಕೆಲಸಗಳು ಇನ್ನೂ ಆಗಿಲ್ಲ. ಅದರಲ್ಲೂ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದಿಂದ ರಸ್ತೆಗಳ ದುರಸ್ತಿ ಕಾರ್ಯ ಬಹುತೇಕ ನಡೆದೇ ಇಲ್ಲ.
ಮಳೆಯಿಂದ ಹಾನಿಗೊಳಗಾಗಿದ್ದ ಸ್ಥಳಗಳಲ್ಲಿ ಸಂಚಾರ ಅತ್ಯಂತ ಹದಗೆಟ್ಟಿತ್ತು. ಇದನ್ನು ನಿವಾರಿಸಲು ಬೆಂಗಳೂರು ಸಂಚಾರ ಪೊಲೀಸರು ಮಳೆಯಿಂದ ಹಾನಿಗೊಳಗಾಗಿದ್ದ 50 ಸ್ಥಳಗಳಲ್ಲಿ ತುರ್ತಾಗಿ ಕೈಗೊಳ್ಳಬೇಕಾದ ಸಿವಿಲ್ ಕಾಮಗಾರಿ ಹಾಗೂ 54 ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿ ಮಾಡಬೇಕು ಎಂದು ವರದಿ ನೀಡಿದ್ದರು. ಇದನ್ನು ಸಮನ್ವಯ ಸಮಿತಿ ರಾತ್ರಿ ತಪಾಸಣೆ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ, ಒಂದೂವರೆ ತಿಂಗಳಾದರೂ ಈ ಕಾಮಗಾರಿಗಳಲ್ಲಿ ಪೂರ್ಣಗೊಂಡಿರುವುದು 22 ಮಾತ್ರ ಎಂದು ಸಂಚಾರ ಪೊಲೀಸರು ಜುಲೈ 25ರಂದು ನೀಡಿರುವ ‘ಕ್ರಮ ತೆಗೆದುಕೊಂಡ ವರದಿಯಲ್ಲಿ’ ವಿವರವಾದ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ 22 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಿದೆ. ಬಿಎಂಆರ್‌ಸಿಎಲ್, ಜಲಮಂಡಳಿ ತಲಾ ಒಂದು ಕಾಮಗಾರಿ ಪೂರ್ಣಗೊಳಿಸಿವೆ. ಎಚ್ಎಸ್‌ಆರ್ ಬಡಾವಣೆ, ನ್ಯೂ ಬಿಇಎಲ್ ರಸ್ತೆ, ಮಾರತ್ ಹಳ್ಳಿ ಹೊರವರ್ತುಲ ರಸ್ತೆ, ಟಿ.ಸಿ.ಪಾಳ್ಯ ರಸ್ತೆ, ವೈಟ್‌ಫೀಲ್ಡ್ ಮುಖ್ಯರಸ್ತೆ, ಸದಾನಂದ ನಗರ ಮುಖ್ಯರಸ್ತೆ, ಹಳೇ ಏರ್‌ಪೋರ್ಟ್ ರಸ್ತೆ, ಖೋಡೆ ಜಂಕ್ಷನ್, ಹಳೇ ಮೈಸೂರು ರಸ್ತೆ ರೈಲ್ವೆ ಸೇತುವೆ, ಕೆಂಗೇರಿ–ಮೈಸೂರು ಮುಖ್ಯರಸ್ತೆ ಮಸೀದಿ ಬಳಿ, ಮಲ್ಲೇಶ್ವರ ವ್ಯಾಪ್ತಿಯ ವಾಟಾಳ್ ನಾಗರಾಜ್ ರಸ್ತೆ, ಯಶವಂತಪುರದಲ್ಲಿ ತುಮಕೂರು ರಸ್ತೆ– ಸರ್ವಿಸ್ ರಸ್ತೆ, ವಿ.ವಿ ಪುರಂನ ಎನ್.ಆರ್. ರಸ್ತೆ, ಬಸವನಗುಡಿ ಆರ್.ವಿ. ಜಂಕ್ಷನ್, ಯಲಹಂಕ ಎಂ.ಎಸ್. ಪಾಳ್ಯ ಬಸ್ ಡಿಪೊ, ಪುಟ್ಟೇನಹಳ್ಳಿ ಬಸ್ ಡಿಪೊ, ಕೋಗಿಲು ಕ್ರಾಸ್ ಬಳಿ, ಆರ್.ಟಿ.ನಗರದ ಸಂಜಯನಗರ ಯು ತಿರುವು ಮುಂದಿನ ರಸ್ತೆ, ಸಿಬಿಐ ಬಸ್ ನಿಲ್ದಾಣ, ಯುಎಎಸ್ ಅಂಡರ್‌ಪಾಸ್, ಹೆಬ್ಬಾಳ ಮೇಲುರಸ್ತೆ, ವೀರಣ್ಣಪಾಳ್ಯ–ನಾಗವಾರ ರಸ್ತೆಗಳಲ್ಲಿ ತಾತ್ಕಾಲಿಕ ಅಥವಾ ಭಾಗಶಃ ಮಾತ್ರ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.
ವಿ.ವಿ ಪುರಂನ ಸಜ್ಜನ್‌ರಾವ್ ವೃತ್ತದಿಂದ ಮಿನರ್ವ ಜಂಕ್ಷನ್‌ನಲ್ಲಿ ಚರಂಡಿ ನಿರ್ಮಾಣ ಕಾರ್ಯ ಕೈಗೊಂಡಿಲ್ಲ. ಮಾಳಗಾಳ ಸರ್ವಿಸ್ ರಸ್ತೆಯನ್ನು ದುರಸ್ತಿ ಪಡಿಸಲಾಗಿದ್ದರೂ ಅದನ್ನು ಸರಿಯಾಗಿ ಮಾಡಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪೀಣ್ಯ ವ್ಯಾಪ್ತಿಯ ನೆಲಗೆದರನಹಳ್ಳಿ ರಸ್ತೆಯಲ್ಲಿ ರಾಜಕಾಲುವೆ ದೀರ್ಘಾವಧಿಯಿಂದ ಸಂಪೂರ್ಣ ಒತ್ತುವರಿಯಾಗಿದ್ದು, ಬಿಬಿಎಂಪಿ ಇನ್ನೂ ಯಾವುದೇ ಕ್ರಮಕೈಗೊಂಡಿಲ್ಲ.
ಶಿವಾಜಿನಗರ ಮೀನಾಕ್ಷಿ ಕೊಯಿಲ್ ಸ್ಟ್ರೀಟ್ ರಸ್ತೆಯ ದೀರ್ಘ ಅವಧಿಯಿಂದ ಹಾಳಾಗಿದ್ದು, ಅದನ್ನು ಬಿಎಂಆರ್‌ಸಿಎಲ್ ಇನ್ನೂ ದುರಸ್ತಿಪಡಿಸಿಲ್ಲ.
54 ರಸ್ತೆಗಳು ಬಹುತೇಕ ಹಾಳಾಗಿದ್ದು, ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ವರದಿ ನೀಡಲಾಗಿತ್ತು. ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದಿಂದ ಈ ಕಾಮಗಾರಿಗಳು ನಡೆಯಬೇಕಿದ್ದವು. ಆದರೆ, ಒಂದೂವರೆ ತಿಂಗಳಲ್ಲಿ ಈ 54 ರಸ್ತೆಗಳಲ್ಲಿ ಕೇವಲ 8 ರಸ್ತೆಗಳಲ್ಲಿ ದುರಸ್ತಿ ಕಾರ್ಯ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.