ಬುಧವಾರ, ಡಿಸೆಂಬರ್ 8, 2021
18 °C

ಮಾರಕಾಸ್ತ್ರದಿಂದ ಬೆದರಿಸಿ ಸುಲಿಗೆ: 6 ಮಂದಿ ಬಂಧನ, 174 ಗ್ರಾಂ ಚಿನ್ನ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಸ್ತೆ ಹಾಗೂ ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಓಡಾಡುವವರಿಗೆ ಮಾರಕಾಸ್ತ್ರದಿಂದ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ಆರು ಮಂದಿಯನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

‘ಸತೀಶ್ ಅಲಿಯಾಸ್ ಕಾಡುಪಾಪ (36), ನಾಗೇಂದ್ರ ಅಲಿಯಾಸ್ ದೇವಿ (32), ವೆಂಕಟೇಶ್ ಗೌಡ ಅಲಿಯಾಸ್ ಮಧು (27), ಎನ್‌. ಗಂಗಾಧರ ಅಲಿಯಾಸ್ ಭಂಗಿ (20), ಜಯಂತಗೌಡ ಅಲಿಯಾಸ್ ಜಾನು (20) ಹಾಗೂ ಲೋಕೇಶ್‌ಗೌಡ ಬಂಧಿತರು. ಅವರಿಂದ ₹ 8 ಲಕ್ಷ ಮೌಲ್ಯದ 174 ಗ್ರಾಂ ತೂಕದ ಚಿನ್ನಾಭರಣ, ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

’ಕಾರು ಹಾಗೂ ಆಟೊದಲ್ಲಿ ಮಾರಕಾಸ್ತ್ರ ಇಟ್ಟುಕೊಳ್ಳುತ್ತಿದ್ದ ಆರೋಪಿಗಳು, ನಗರದ ಹಲವೆಡೆ ಸುತ್ತಾಡುತ್ತಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾರ್ವಜನಿಕರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸುತ್ತಿದ್ದರು. ಚಿನ್ನಾಭರಣ, ಮೊಬೈಲ್ ಹಾಗೂ ನಗದು ಸುಲಿಗೆ ಮಾಡಿಕೊಂಡು ಪರಾರಿಯಾಗುತ್ತಿದ್ದರು.’

‘ಕುಮಾರಸ್ವಾಮಿ ಲೇಔಟ್, ಬನಶಂಕರಿ, ಪುಟ್ಟೇನಹಳ್ಳಿ, ಜೆ.‍ಪಿ. ನಗರ ಹಾಗೂ ಪೀಣ್ಯ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಕೃತ್ಯ ಎಸಗಿದ್ದಾರೆ. ಇತ್ತೀಚೆಗೆ ಸುಲಿಗೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ತಂಡ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದೂ ಪಾಂಡೆ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು