ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಿಕೆ ಪಿಸ್ತೂಲ್ ತೋರಿಸಿ ಸುಲಿಗೆ; ಕ್ಯಾಬ್‌ ಚಾಲಕ ಬಂಧನ

ಪರಿಚಯಸ್ಥರ ಮನೆಯಲ್ಲೇ ಕೃತ್ಯ ಎಸಗಿದ್ದ ಆರೋಪಿ
Last Updated 16 ಡಿಸೆಂಬರ್ 2021, 22:08 IST
ಅಕ್ಷರ ಗಾತ್ರ

ಬೆಂಗಳೂರು: ಆಟಿಕೆ ಪಿಸ್ತೂಲ್ ಹಿಡಿದು ಒಂಟಿ ಮಹಿಳೆ ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ಆರೋಪದಡಿ ನಿಂಗಪ್ಪ ಎಂಬುವರನ್ನು ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸಿಂಗಾಪುರ ನಿವಾಸಿಯಾದ ಆರೋಪಿ, ಕ್ಯಾಬ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಪರಿಚಯಸ್ಥರೇ ಆಗಿದ್ದ ಅಬ್ಬಿಗೆರೆಯ ಎನ್‌ಎಚ್‌ಆರ್ ಬಡಾವಣೆಯ ಮಹಿಳೆ ಮನೆಗೆ ನುಗ್ಗಿ ಕೃತ್ಯ ಎಸಗಿದ್ದರು. ಅವರಿಂದ ₹ 5 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ನಕಲಿ ಪಿಸ್ತೂಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೂರುದಾರ ಮಹಿಳೆಯ ಸಂಬಂಧಿಕರೊಬ್ಬರು ತಮ್ಮ ಕಾರನ್ನು ಬಾಡಿಗೆಗೆ ಚಲಾಯಿಸಲೆಂದು ಆರೋಪಿಗೆ ನೀಡಿದ್ದರು. ಹೀಗಾಗಿ, ಮಹಿಳೆ ಮನೆಗೆ ಆರೋಪಿ ಆಗಾಗ ಬಂದು ಹೋಗುತ್ತಿದ್ದರು. ಚಿನ್ನಾಭರಣ ಹಾಗೂ ನಗದು ಇರುವುದನ್ನು
ತಿಳಿದಿದ್ದರು.’

‘₹ 1 ಲಕ್ಷ ಸಾಲ ಮಾಡಿಕೊಂಡಿದ್ದ ಚಾಲಕ, ಅದನ್ನು ತೀರಿಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಅದೇ ಕಾರಣಕ್ಕೆ ಮಹಿಳೆ ಮನೆಯಲ್ಲಿ ಕಳ್ಳತನ ಮಾಡಲು ಸಂಚು ರೂಪಿಸಿದ್ದರು. ಆಟಿಕೆ ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿದ್ದ ಆರೋಪಿ, ಜೀವ ಬೆದರಿಕೆ ಹಾಕಿ ಸುಲಿಗೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಾದ 13 ಗಂಟೆಯಲ್ಲೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ಸ್ನೇಹಿತೆ ಮನೆಯಲ್ಲಿ ಕಳ್ಳತನ: ಸಂಪಿನಲ್ಲಿ ಚಿನ್ನಾಭರಣ ಪತ್ತೆ
ಬೆಂಗಳೂರು: ಅಣ್ಣನ ಮದುವೆ ಆಮಂತ್ರಣ ನೀಡುವ ಸೋಗಿನಲ್ಲಿ ಸ್ನೇಹಿತೆ ಮನೆಗೆ ಹೋಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ದೇವರಜೀವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಆಜಾರ್ ಸಿದ್ದಿಕ್ ಬಂಧಿತರು. ಸ್ನೇಹಿತೆ ರೋಹಿನಾಜ್ ಎಂಬುವರ ಮನೆಗೆ ಡಿ. 14ರಂದು ಹೋಗಿದ್ದ ಆರೋಪಿ, ಚಿನ್ನಾಭರಣ ಕದ್ದು ಪರಾರಿಯಾಗಿದ್ದರು. ಆಜಾರ್ ಮೇಲೆಯೇ ಅನುಮಾನ ವ್ಯಕ್ತಪಡಿಸಿ ರೋಹಿನಾಜ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಅವರು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಅಣ್ಣನ ಮದುವೆ ಆಮಂತ್ರಣ ಪತ್ರ ಹಿಡಿದು ರೋಹಿನಾಜ್ ಮನೆಗೆ ತೆರಳಿದ್ದ ಆರೋಪಿ, ಕುಶಲೋಪರಿ ವಿಚಾರಿಸಿದ್ದರು. ಬಟ್ಟೆ ಬದಲಿಸಬೇಕೆಂದು ಹೇಳಿ ಕೊಠಡಿಗೆ ಹೋಗಿದ್ದರು. ಬೀರುವಿನಲ್ಲಿದ್ದ 206 ಗ್ರಾಂ ಚಿನ್ನಾಭರಣ ಕದ್ದಿದ್ದರು. ನಂತರ, ಸ್ನೇಹಿತೆಗೆ ಯಾವುದೇ ಅನುಮಾನ ಬಾರದಂತೆ ವರ್ತಿಸಿ ಮನೆಯಿಂದ ಹೊರಟು ಹೋಗಿದ್ದರು.’

‘ಸ್ನೇಹಿತೆ ರೋಹಿನಾಜ್ ಮರುದಿನ ಬೀರುವಿನ ಬಾಗಿಲು ತೆರೆದಿದ್ದರು. ಆಭರಣಗಳು ಇರಲಿಲ್ಲ. ಅವಾಗಲೇ ಅವರು ಠಾಣೆಗೆ ಬಂದು ದೂರು ನೀಡಿದ್ದರು’ ಎಂದೂ ತಿಳಿಸಿದರು.

ನೀರಿನ ಸಂಪಿನಲ್ಲಿಟ್ಟಿದ್ದ ಆಭರಣ: ‘ಕದ್ದ ಆಭರಣವನ್ನು ಆರೋಪಿ, ಮನೆ ಸಮೀಪದಲ್ಲಿದ್ದ ನೀರಿನ ಸಂಪಿನಲ್ಲಿ ಬಚ್ಚಿಟ್ಟಿದ್ದರು. ಅವರು ನೀಡಿದ ಹೇಳಿಕೆ ಆಧರಿಸಿ ಆಭರಣ ಜಪ್ತಿ ಮಾಡಲಾಗಿದೆ’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT