ಶುಕ್ರವಾರ, ಫೆಬ್ರವರಿ 21, 2020
31 °C
ಹಣ, ಮೊಬೈಲ್, ಕಾರು ಸಮೇತ ಪರಾರಿಯಾದ ದುಷ್ಕರ್ಮಿಗಳು

ಗನ್‌ ತೋರಿಸಿ ಕಾರು ಚಾಲಕನ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗನ್ ತೋರಿಸಿ ಕಾರು ಚಾಲಕನೊಬ್ಬನನ್ನು ಬೆದರಿಸಿದ ದುಷ್ಕರ್ಮಿಗಳು, ಹಣ, ಮೊಬೈಲ್ ಕಿತ್ತು ಕೊಂಡು ಕಾರು ಸಹಿತ ಪರಾರಿಯಾದ ಘಟನೆ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ವಿಷಯ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಸೋಲದೇವನಹಳ್ಳಿ ಪೊಲೀಸರು ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ಪೊಲೀಸರನ್ನು ತಳ್ಳಿ, ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ ಮಂಗಳವಾರ ನಸುಕಿನ 2.30ರ ಸುಮಾರಿಗೆ ಕಾರು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕಾರು ಚಾಲಕ ಗಿರೀಶ್ ಎಂಬವರು ನೀಡಿರುವ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕಾರು ಚಾಲಕನಾಗಿರುವ ಗಿರೀಶ್, ಸೋಮ ವಾರ ರಾತ್ರಿ 12.30ರ ಸುಮಾರಿಗೆ ನೆಲಗದರನಹಳ್ಳಿ ಸಮೀಪ ಹೋಗುತ್ತಿದ್ದರು. ರಸ್ತೆಯಲ್ಲಿ ಹಂಪ್ಸ್‌ ಇದ್ದ ಕಾರಣ ನಿಧಾನ ವಾಗಿ ಕಾರು ಚಲಾಯಿಸುತ್ತಿದ್ದರು. ಆಗ ಕಾರು ಮತ್ತು ಬೈಕ್‌ಗಳಲ್ಲಿ ಬಂದ ಆರಕ್ಕೂ ಹೆಚ್ಚು ಮಂದಿ ದುಷ್ಕರ್ಮಿಗಳು ಅಡ್ಡಗಟ್ಟಿ, ಗನ್ ತೋರಿಸಿ ಕೊಲ್ಲುವು ದಾಗಿ ಬೆದರಿಸಿದ್ದಾರೆ. ಅಲ್ಲದೆ, ಗಿರೀಶ್ ಬಳಿ ಇದ್ದ ₹16 ಸಾವಿರ ಮತ್ತು ಮೊಬೈಲ್ ಕಿತ್ತುಕೊಂಡು ಕಾರು ಸಮೇತ ಪರಾರಿಯಾಗಿದ್ದಾರೆ.

ಸ್ಥಳೀಯರ ನೆರವಿನಿಂದ ಗಿರೀಶ್ ಅವರು ಪೊಲಿಸರಿಗೆ ಮಾಹಿತಿ ನೀಡಿದರು. ತಕ್ಷಣ ರಾಜಗೋಪಾಲ ನಗರ ಮತ್ತು ಸೋಲದೇವನಹಳ್ಳಿ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ಆರಂಭಿಸಿದ್ದರು.

ನಸುಕಿನಲ್ಲಿ ಹೆಸರಘಟ್ಟ ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಕಾರನ್ನು ಬ್ಯಾರಿಕೇಡ್‌ ಹಾಕಿ ಗಸ್ತಿನಲ್ಲಿದ್ದ ಸೋಲದೇವನಹಳ್ಳಿ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಸಿದ್ದಲಿಂಗಸ್ವಾಮಿ ಮತ್ತು ಕಾನ್‌ಸ್ಟೆಬಲ್‌ ಶ್ರೀನಿವಾಸ್ ತಡೆದಿದ್ದರು. ಆಗ ಕಾರು ನಿಲ್ಲಿಸದೆ ಬ್ಯಾರಿಕೇಡ್‌ಗೆ ಗುದ್ದಿ, ಪೊಲೀಸ್ ಸಿಬ್ಬಂದಿಯನ್ನೂ ತಳ್ಳಿದ ಆರೋಪಿಗಳು, ಕಾರು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು