ಬೆಂಗಳೂರು: ‘ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರೇ ಖಾಲಿಯಾಗುತ್ತದೆ’ ಎಂಬ ಹೇಳಿಕೆಯುಳ್ಳ ವಿಡಿಯೊ ತುಣುಕನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಸುಗಂಧಾ ಶರ್ಮಾ ಎಂಬುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುಗಂಧಾ ಶರ್ಮಾ ಅವರು ತಮ್ಮ ವಿಡಿಯೊದಲ್ಲಿ ‘ಉತ್ತರ ಭಾರತೀಯರಿಗೆ ಬೆಂಗಳೂರು ಬಿಟ್ಟು ಹೋಗಿ ಎನ್ನುತ್ತೀರಿ, ಆದರೆ ನಾವು ಬೆಂಗಳೂರು ತೊರೆದರೆ ಇಲ್ಲಿ ಏನು ಉಳಿಯುತ್ತದೆ? ಇಡೀ ಬೆಂಗಳೂರು ಖಾಲಿಯಾಗುತ್ತದೆ. ನಾವು ಇಲ್ಲ ಎಂದರೆ ನಿಮಗೆ ದುಡ್ಡು ಇರುವುದಿಲ್ಲ. ಪಿಜಿ, ಪಬ್‌ಗಳು ಖಾಲಿಯಾಗುತ್ತವೆ’ ಎಂದು ಹೇಳಿದ್ದರು.
‘ಸುಗಂಧಾ ಶರ್ಮಾ ಅವರು ಫ್ರೀಡಂ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಕನ್ನಡ ವಿರೋಧಿ ಧೋರಣೆಯಿಂದ ಫ್ರೀಡಂ ಆ್ಯಪ್‌ನ ವ್ಯವಸ್ಥಾಪಕರು ಸುಗಂಧಾ ಅವರನ್ನು ಮೇ 31ರಂದು ಕೆಲಸದಿಂದ ತೆಗೆದು ಹಾಕಿದ್ದಾರೆ. ಸದ್ಯ ಅವರು ಕೋರಮಂಗಲದ ವ್ಯಾಪ್ತಿಯಲ್ಲಿ ನೆಲೆಸಿದ್ದಾರೆ. ಆದ್ದರಿಂದ, ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ’ ಎಂದು ರೂಪೇಶ್ ರಾಜಣ್ಣ ತಮ್ಮ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಈ ವಿಡಿಯೊಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡದ ನಟ, ನಟಿಯರು ಹಾಗೂ ಕನ್ನಡಪರ ಹೋರಾಟಗಾರರು ಹೇಳಿಕೆಯನ್ನು ವಿರೋಧಿಸಿದ್ದರು. ‘ಮೊದಲು ನೀವು ಬೆಂಗಳೂರು ಬಿಟ್ಟು ಹೋಗಿ. ಯಾವುದು ಖಾಲಿಯಾಗುತ್ತದೆ ನೋಡೋಣ’ ಎಂದು ಪ್ರತಿಕ್ರಿಯೆಸಿದ್ದರು.