ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಸೌಕರ್ಯ ಒದಗಿಸಿದ ರೋಟರಿ

ವಸಂತನಗರದಲ್ಲಿ ₹5 ಕೋಟಿ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿದ ಶಾಸಕ ರೋಷನ್‌ ಬೇಗ್
Last Updated 24 ಜೂನ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರದೊಂದಿಗೆ ಸಮುದಾಯವೂ ಕೈ ಜೋಡಿಸಿದರೆ ಶಾಲೆಯೊಂದು ಯಾವ ರೀತಿ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ವಸಂತ ನಗರದ ಸರ್ಕಾರಿ ಕನ್ನಡ–ತಮಿಳು ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿ.

ರೋಟರಿ ಆರ್ಚರ್ಡ್ಸ್‌ ಸಂಸ್ಥೆಯು ₹5 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿದ್ದು, ಸುಮಾರು 50ಕ್ಕೂ ಅಧಿಕ ಸರ್ಕಾರೇತರ ಸಂಸ್ಥೆಗಳು ಶಾಲೆಯ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿವೆ.

1930ರಲ್ಲಿ ಪ್ರಾರಂಭವಾದ ಈ ಶಾಲೆಯಲ್ಲಿ, 2016ರಲ್ಲಿ 116 ವಿದ್ಯಾರ್ಥಿಗಳು ಇದ್ದರು. ನರ್ಸರಿಯಿಂದ 8ನೇ ತರಗತಿಯವರೆಗೆ ಗರಿಷ್ಠ 640 ಮಕ್ಕಳು ಪ್ರವೇಶ ಪಡೆಯಲು ಅವಕಾಶವಿದೆ. ಈಗಾಗಲೇ, 164 ಮಕ್ಕಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಖಾಸಗಿ ಶಾಲೆಗಳನ್ನು ಮೀರಿಸುವ ಅತ್ಯಾಧುನಿಕ ಸೌಲಭ್ಯಗಳನ್ನು ಈ ಶಾಲೆ ಹೊಂದಿದೆ. ಇದರ ನೂತನ ಕಟ್ಟಡವನ್ನು ಶಾಸಕ ರೋಷನ್‌ ಬೇಗ್‌ ಸೋಮವಾರ ಉದ್ಘಾಟಿಸಿದರು.

‘ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಸಹಭಾಗಿತ್ವ ಅತಿ ಅಗತ್ಯ. ದೇವಸ್ಥಾನಗಳಿಗೆ ಹತ್ತಾರು ಬಾರಿ ಹೋಗುವುದಕ್ಕಿಂತ ಬಡ ಮಕ್ಕಳ ಸೇವೆ ಮಾಡುವುದೇ ಶ್ರೇಷ್ಠ’ ಎಂದು ಬೇಗ್‌ ಅಭಿಪ್ರಾಯಪಟ್ಟರು.

‘ಬಿಬಿಎಂಪಿ ಹಾಗೂ ನಾರಾಯಣ ಹೃದಯಾಲಯದ ಸಹಯೋಗದೊಂದಿಗೆ ಶಿವಾಜಿನಗರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ ನಾರಾಯಣ ಹೃದಯಾಲಯ ತೆರೆಯುವ ಕುರಿತು ಡಾ.ದೇವಿ ಶೆಟ್ಟಿ ಅವರ ಜೊತೆ ಚರ್ಚಿಸಲಾಗಿದೆ. ಈ ಸಂಬಂಧ ಇನ್ನೂ ಒಪ್ಪಂದ ಆಗಿಲ್ಲ. ಆಸ್ಪತ್ರೆ ಪ್ರಾರಂಭವಾದರೆ ಬಡವರಿಗೆ ಕಡಿಮೆ ದರದಲ್ಲಿ ಹೃದ್ರೋಗಕ್ಕೆ ಚಿಕಿತ್ಸೆ ದೊರೆಯಲಿದೆ’ ಎಂದು ರೋಷನ್‌ ಬೇಗ್‌ ಹೇಳಿದರು.

ಮೆಟ್ರೊ ಸ್ಥಳ ಬದಲಾವಣೆ: ‘ಶಿವಾಜಿನಗರ ಬಸ್ ನಿಲ್ದಾಣದ ಸಮೀಪವೇ ಮೆಟ್ರೊ ನಿಲ್ದಾಣ ಕೂಡ ನಿರ್ಮಾಣಗೊಳ್ಳಲಿದೆ. ಹಾಗೆಯೇ ಕಂಟೋನ್ಮೆಂಟ್‌ ರೈಲು ನಿಲ್ದಾಣದ ಸಮೀಪವೇ ಮೆಟ್ರೊ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಸರ್ಕಾರೇತರ ಸಂಸ್ಥೆಗಳು ಹಾಗೂ ಕೆಲವು ಸ್ಥಳೀಯರ ವಿರೋಧದಿಂದ ನಿಲ್ದಾಣದ ಸ್ಥಳ ಬದಲಾಯಿಸಲಾಗಿದೆ’ ಎಂದರು.

125 ಶಾಲೆ ದತ್ತು:ರೋಟರಿ ಬೆಂಗಳೂರು ಆರ್ಚರ್ಡ್ಸ್‌ಸಂಸ್ಥೆಯ ವಿಶ್ವನಾಥ್, ‘ರೋಟರಿ ವತಿಯಿಂದ ಕೋಲಾರದಲ್ಲಿ 125 ಸರ್ಕಾರಿ ಶಾಲೆಯನ್ನು ದತ್ತು ಪಡೆಯಲಾಗಿದೆ. 50 ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. 1 ಕೋಟಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದರು.

ಉಪನಿರ್ದೇಶಕ ಸಿ.ಬಿ.ಜಯರಂಗ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾ ಅಲೆಕ್ಸಾಂಡರ್‌, ಮುಖ್ಯಶಿಕ್ಷಕ ಕೆ.ವಿ.ಸುದರ್ಶನ್, ಎಸ್‌ಡಿಎಂಸಿ
ಅಧ್ಯಕ್ಷೆ ವಿಜಯಾ, ಪಾಲಿಕೆ ಸದಸ್ಯ ಎಸ್. ಸಂಪತ್ ಕುಮಾರ್, ರೋಟರಿ ಸಂಸ್ಥೆಯ ಸುರೇಶ್ ಹರಿ, ಡಿ. ರವಿಶಂಕರ್ ಧಕೋಜು, ಮಹಾಂತೇಶ್‌, ನಿವೃತ್ತ ಬ್ರಿಗೇಡಿಯರ್‌ ಮಿಲಾನಿ ಮೊದಲಾದವರು ಇದ್ದರು.

ಶಾಲೆಯಲ್ಲಿರುವ ಸೌಲಭ್ಯಗಳು

*ಮೂರು ಅಂತಸ್ತುಗಳಲ್ಲಿ19 ಕೊಠಡಿಗಳು

* ವಿಶಾಲ ಸಭಾಂಗಣ ಮತ್ತು ಪ್ರಾರ್ಥನಾಲಯ

* ಕಂಪ್ಯೂಟರ್‌ ಪ್ರಯೋಗಾಲಯ

* ಆನ್‌ಲೈನ್‌ನಲ್ಲಿ ಕಂಪ್ಯೂಟರ್‌ ತರಗತಿಗಳು

* ಸ್ಮಾರ್ಟ್‌ ಬೋರ್ಡ್‌ ಮತ್ತು ಪ್ರೊಜೆಕ್ಟರ್‌ ಮೂಲಕ ಬೋಧನೆ

* ಗ್ರಂಥಾಲಯ, ಕೌನ್ಸೆಲಿಂಗ್‌ – ಮೆಡಿಕಲ್‌ ಕೊಠಡಿ

* ಸುಸಜ್ಜಿತ ಶೌಚಾಲಯ ಮತ್ತು ಆಟದ ಮೈದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT