ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್ ಮೇಲೆ ಹಲ್ಲೆ: ರೌಡಿ ಕಾಲಿಗೆ ಗುಂಡೇಟು

Last Updated 3 ಜನವರಿ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ವೇಳೆ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಆರೋಪಿ ಪರ್ವೇಜ್‌ ಪಾಷಾಯಾನೆ ಪರೂ (21) ಎಂಬಾತನ ಕಾಲಿಗೆ ಸಿದ್ದಾಪುರ ಠಾಣೆ ಪೊಲೀಸರು ಗುಂಡೇಟು ಹೊಡೆದು ಬಂಧಿಸಿದ್ದಾರೆ.

‘ಫಯಾಜ್‌ ಮೊಹಮ್ಮದ್‌ (23) ಎಂಬುವರು 2021ರ ಡಿಸೆಂಬರ್‌ 30ರಂದು ಕೇರಳದಿಂದ ನಗರಕ್ಕೆ ಬಂದಿದ್ದರು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಡಬಲ್‌ ರೋಡ್‌ ಬಳಿಯ ಲಾಲ್‌ಬಾಗ್‌ ದ್ವಾರದ ಹತ್ತಿರ ನಿಂತುಕೊಂಡು ಮನೆಗೆ ಹೋಗಲು ಕ್ಯಾಬ್‌ ಕಾಯ್ದಿರಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಡಿಯೊ ಸ್ಕೂಟರ್‌ನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳಿಬ್ಬರು ಫಯಾಜ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್‌ ಹಾಗೂ ₹1,000 ನಗದು ಕಿತ್ತುಕೊಂಡು ಪರಾರಿಯಾಗಿದ್ದರು. ಇದೇ 2ರಂದು ರಾತ್ರಿ 11 ಗಂಟೆ ಸುಮಾರಿಗೆ ಆರೋಪಿ ಪರ್ವೇಜ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಸ್ನೇಹಿತನಾದ ಅಬೂಬಕರ್‌ ಸಿದ್ದಿಕಿ ಯಾನೆ ಯಾಣಾ ಜೊತೆ ಸೇರಿಕೊಂಡು ಹಲ್ಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೃತ್ಯಕ್ಕೆ ಬಳಸಿದ್ದ ಡ್ರ್ಯಾಗರ್‌ ಅನ್ನು ಬನಶಂಕರಿ 6ನೇ ಹಂತದ ಚಿಕ್ಕೇಗೌಡನಪಾಳ್ಯದ ಬಿಡಿಎ ಲೇಔಟ್‌ನಲ್ಲಿರುವ ಖಾಲಿ ನಿವೇಶನದಲ್ಲಿ ಎಸೆದಿದ್ದಾಗಿ ಆರೋಪಿ ಹೇಳಿದ್ದ. ಸ್ಥಳ ಮಹಜರಿಗಾಗಿ ಸೋಮವಾರ ಬೆಳಿಗ್ಗೆ 6 ಗಂಟೆಗೆ ಆರೋಪಿಯನ್ನು ಸ್ಥಳಕ್ಕೆ ಕರೆದೊಯ್ಯಲಾಗಿತ್ತು. ಡ್ರ್ಯಾಗರ್‌ ವಶಕ್ಕೆ ಪಡೆದು, ಪಂಚನಾಮೆ ಮುಗಿಸಿ ಹಿಂದಿರುಗುವ ವೇಳೆ ಆತ ಅಲ್ಲೇ ಇದ್ದ ಕಟ್ಟಿಗೆಯೊಂದನ್ನು ಎತ್ತಿಕೊಂಡು ಕಾನ್‌ಸ್ಟೆಬಲ್‌ ಪರಮೇಶ್ವರ ಮಬ್ರುಕರ್‌ ಎಂಬುವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಸ್ಥಳದಲ್ಲಿದ್ದ ಇನ್‌ಸ್ಪೆಕ್ಟರ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದರು. ಹೀಗಿದ್ದರೂ ಆತ ಮತ್ತೆ ಹಲ್ಲೆಗೆ ಮುಂದಾಗಿದ್ದ. ಆತ್ಮರಕ್ಷಣೆಗಾಗಿ ಆತನ ಎಡಗಾಲಿಗೆ ಗುಂಡು ಹೊಡೆದು ಬಂಧಿಸಲಾಯಿತು’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT