ಸೋಮವಾರ, ಜನವರಿ 17, 2022
27 °C
ಮತಯಂತ್ರಗಳನ್ನು ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿ

ಆರ್‌.ಆರ್‌.ನಗರ ಉಪ ಚುನಾವಣೆ: 68 ಮತಗಟ್ಟೆ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್ ವ್ಯಾಪಕವಾಗಿರುವಾಗ ಚುನಾವಣೆ ನಡೆಯುತ್ತಿರುವುದರಿಂದಾಗಿ ಮತಗಟ್ಟೆಯೊಳಗೆ ವಿಶಾಲ ಸ್ಥಳಾವಕಾಶ ಅಗತ್ಯವಿದೆ. ಕಳೆದ ಚುನಾವಣೆಯಲ್ಲಿ ಬಳಸಿದ್ದ 68 ಮತಗಟ್ಟೆಗಳಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲ. ಅಲ್ಲಿ ಅಂತರ ಕಾಪಾಡುವುದು ಕಷ್ಟ. ಹಾಗಾಗಿ ಅವುಗಳನ್ನು ಬದಲಾಯಿಸಲಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಪ್ರಯುಕ್ತ ಬಸವೇಶ್ವರನಗರದ ಬಿ.ಆರ್.ಅಂಬೇಡ್ಕರ್ ಕ್ರೀಡಾ ಸಂಕೀರ್ಣದ ಭದ್ರತಾ ಕೊಠಡಿಯಲ್ಲಿ ದಾಸ್ತಾನಿರುವ ವಿದ್ಯುನ್ಮಾನ ಮತಯಂತ್ರಗಳನ್ನು ಅವರು ಮಂಗಳವಾರ ಪರಿಶೀಲಿಸಿದರು.

‘ಮತಗಟ್ಟೆಗಳ ಬದಲಾವಣೆ ಕುರಿತು ರಾಜಕೀಯ ಮುಖಂಡರ ಜೊತೆ ಸಭೆ ನಡೆಸಿ ಸಮ್ಮತಿ ಪಡೆದಿದ್ದೇವೆ. ಬದಲಾಗುವ ಮತಗಟ್ಟೆಗಳ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದೇವೆ. ಸ್ಥಳ ಬದಲಾವಣೆ ಬಗ್ಗೆ  ಸ್ಥಳೀಯ ಮತದಾರರಿಗೂ ಮಾಹಿತಿ ನೀಡಲಿದ್ದೇವೆ’ ಎಂದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಗೆ ನ. 3 ರಂದು ಮತದಾನ ನಡೆಯಲಿದ್ದು, ನ. 10 ರಂದು ಮತಎಣಿಕೆ ನಡೆಯಲಿದೆ. ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಬಿಇಎಲ್ ಸಂಸ್ಥೆಯ ಎಂಜಿನಿಯರ್‌ಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮತಯಂತ್ರದ ನಿಯಂತ್ರಣ ಘಟಕ, ಮತಪತ್ರ ಘಟಕಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. 

‘ಕೋವಿಡ್ ವ್ಯಾಪಿಸುತ್ತಿರುವುದರಿಂದ ಒಂದು ಮತಗಟ್ಟೆಯಲ್ಲಿ 1 ಸಾವಿರಕ್ಕಿಂತ ಹೆಚ್ಚು ಮಂದಿ ಮತ ಚಲಾಯಿಸುವಂತಿಲ್ಲ. ಹಾಗಾಗಿ 381 ಮತಗಟ್ಟೆಗಳ ಜೊತೆಗೆ ಹೆಚ್ಚುವರಿಯಾಗಿ 297 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಮತಗಟ್ಟೆಗೆ ಎರಡು ಯಂತ್ರಗಳಂತೆ ತಲಾ 1,356 ನಿಯಂತ್ರಣ ಘಟಕ, ಮತಪತ್ರ ಘಟಕ ಹಾಗೂ ವಿವಿ ಪ್ಯಾಟ್‌ಗಳನ್ನು ಒದಗಿಸಲಾಗುತ್ತದೆ. ಅಕ್ಟೋಬರ್‌ 10ರ ಒಳಗೆ ಇವುಗಳ ತಪಾಸಣೆ ಪೂರ್ಣಗೊಳ್ಳಲಿದೆ’ ಎಂದು ಮಾಹಿತಿ ನೀಡಿದರು.

‘ಈ ಯಂತ್ರಗಳನ್ನು ರಾಜಕೀಯ ಪಕ್ಷಗಳ ಮುಖಂಡರ ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಮತ್ತೆ ಪರಿಶೀಲಿಸಲಾಗುತ್ತದೆ ಎಂದರು. ಚುನಾವಣೆಗೆ ಇದೇ 9ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಚುನಾವಣಾ ಆಯೋಗವು ಜಾರ್ಖಂಡ್‌ನ ಅಧಿಕಾರಿಯನ್ನು ವೀಕ್ಷಕರನ್ನಾಗಿ ಕಳುಹಿಸಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು