ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌. ನಗರ: ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ, ಪ್ರತಿಭಟನೆ

ತಾರಕಕ್ಕೇರಿದ ಚುನಾವಣಾ ಪ್ರಚಾರ
Last Updated 21 ಅಕ್ಟೋಬರ್ 2020, 8:11 IST
ಅಕ್ಷರ ಗಾತ್ರ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದ ಲಕ್ಷ್ಮೀದೇವಿನಗರ ಬೂತ್ ನಂಬರ್ 156 ಬಳಿ ಪಕ್ಷದ ಅಭ್ಯರ್ಥಿ ಕುಸುಮಾ ಪರ ಪ್ರಚಾರ ನಡೆಸುತ್ತಿದ್ದ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಠಾಣೆಗೆ ಭೇಟಿ ನೀಡಿದ ಸಂಸದ ಡಿ.ಕೆ. ಸುರೇಶ್‌ ಮತ್ತು ಮಾಜಿ ಸಚಿವ ಎಚ್‌.ಎಂ. ರೇವಣ್ಣ, ಪೊಲೀಸ್‌ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಅವರು, ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ವೇಳೆ ಬಿಜೆಪಿ ಕಾರ್ಯಕರ್ತರು ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದೂ ದೂರಿದ್ದಾರೆ.

ಕಾಂಗ್ರೆಸ್‌ ವಾರ್ಡ್ ಅಧ್ಯಕ್ಷರಾದ ಜವರೇಗೌಡ, ಕಾರ್ಯಕರ್ತರಾದ ಚಿಕ್ಕರಾಜು, ರಾಕೇಶ್, ವಿನೋದ್, ರೂಪೇಶ್, ಮಾಲಿಕ್ ಮತ್ತು ಇತರ ಮುಖಂಡರ ಮೇಲೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಬೆಂಬಲಿಗ ವೇಲು ನಾಯ್ಕರ್ ಮತ್ತು 30ಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ. ಬೂತ್ ಮಟ್ಟದಲ್ಲಿ ಮತದಾರರಿಗೆ ಗುರುತಿನ ಚೀಟಿ ವಿತರಣೆ ನಡೆಸಲು ಸಂಗ್ರಹಿಸಿದ್ದ ಮಾಹಿತಿಯ ಪುಸ್ತಕ ಹರಿದು ಹಾಕಿದ್ದಾರೆ ಎಂದೂ ಕಾರ್ಯರ್ತರು ಆರೋಪಿಸಿದ್ದಾರೆ. ಮಾಜಿ ಸಂಸದ ಧ್ರುವನಾರಾಯಣ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರಚಾರ ಕಾರ್ಯದ ಬಳಿ ತೆರಳಿದ ವೇಲು ನಾಯ್ಕರ್ ಮತ್ತು ಸಹಚರರು ಬೆದರಿಕೆ ಹಾಕಿದ್ದಾರೆ ಎಂದೂ ಆರೋಪಿಸಿದ್ದಾರೆ.

ಕಾಂಗ್ರೆಸ್‌ ಮುಖಂಡರಾದ ಬಾಲರಾಜ್, ಮಾಜಿ ಬಿಬಿಎಂಪಿ ಸದಸ್ಯ ಶಿವರಾಜ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕಾನೂನು ವಿಭಾಗದ ಸೂರ್ಯ ಮುಕುಂದರಾಜ್, ಚೇತನ್ ಶಂಕರಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

‘ನಾವು ಯಾವುದೇ ಗೂಂಡಾಗಿರಿ ನಡೆಸಿಲ್ಲ’ ಎಂದು ಮುನಿರತ್ನ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಪರ ಪ್ರಚಾರ ಮಾಡಲು ಕ್ಷೇತ್ರಕ್ಕೆ ನಾಲ್ಕು ಸಾವಿರ ಜನ ಹೊರಗಡೆಯಿಂದ ಬಂದಿದ್ದಾರೆ. ಈ ವೇಳೆ ಮನೆ ಮನಗೆ ತೆರಳಿ ಜಾತಿ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಇಂಥ ಪ್ರಶ್ನೆಗಳನ್ನು ಯಾಕೆ ಕೇಳಬೇಕು. ನ್ಯಾಯಯಯುತವಾಗಿ ಚುನಾವಣೆ ಎದುರಿಸಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT