ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ: ಸೋಮವಾರ ಜೆಡಿಎಸ್‌ ಅಭ್ಯರ್ಥಿ ನಾಮಪತ್ರ

ಮುನಿರತ್ನಗೆ ಟಿಕೆಟ್‌ ನೀಡುವ ಕುರಿತು ಚರ್ಚೆಯೇ ಆಗಿಲ್ಲ:
Last Updated 10 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಮೂವರು ಸಂಭವನೀಯ ಅಭ್ಯರ್ಥಿಗಳಲ್ಲಿ ಸಹಮತಕ್ಕೆ ಯತ್ನಿಸಲಾಗುತ್ತಿದೆ. ಅಭ್ಯರ್ಥಿ ಯಾರೆಂದುಭಾನುವಾರ ಅಂತಿಮಗೊಳಿಸಿ, ಸೋಮವಾರ ನಾಮಪತ್ರ ಸಲ್ಲಿಸಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳಜತೆ ಶನಿವಾರ ಮಾತನಾಡಿದ ಅವರು, ‘ಶಿರಾ ಮತ್ತು ರಾಜರಾಜೇಶ್ವರಿನಗರ ಎರಡೂ ಕ್ಷೇತ್ರಗಳನ್ನು ನಮ್ಮ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ರಾಜರಾಜೇಶ್ವರಿನಗರ ಮೊದಲಿನಿಂದಲೂ ಜೆಡಿಎಸ್‌ ಪ್ರಭಾವವಿರುವ ಕ್ಷೇತ್ರ. ಈ ಕ್ಷೇತ್ರದಲ್ಲೂ ಗೆಲುವು ಸಾಧಿಸುವುದು ನಮ್ಮ ಗುರಿ’ ಎಂದರು.

ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್‌ ತಪ್ಪಿದರೆ ಜೆಡಿಎಸ್‌ ಅವಕಾಶ ನೀಡಬಹುದು ಎಂಬ ಸುದ್ದಿಗಳ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಅಂತಹ ಪ್ರಶ್ನೆಯೇ ನಮ್ಮ ಮುಂದಿಲ್ಲ. ಯಾವುದೇ ಚರ್ಚೆಯೂ ನಡೆದಿಲ್ಲ. ಹೀಗಿರುವಾಗ ಆ ಪ್ರಶ್ನೆಗೆ ಉತ್ತರಿಸಲು ನಾನು ಬಯಸುವುದಿಲ್ಲ’ ಎಂದು ಹೇಳಿದರು.

‘ಮೂರು ಜನ ಶಾಸಕರು ಪಕ್ಷ ಬಿಟ್ಟು ಹೋದರು. ಏನೂ ಆಗಲಿಲ್ಲ. ಯಾರಾದರೂ ಹೋಗುವವರಿದ್ದರೆ ನಾನೇ ಮೈಸೂರು ಪೇಟ ತೊಡಿಸಿ, ಸನ್ಮಾನಿಸಿ ಕಳಿಸುತ್ತೇನೆ. ಬರುತ್ತಾರೆ, ಹೋಗುತ್ತಾರೆ. ಪಕ್ಷವನ್ನು ಮುಗಿಸಲು ಯಾರಿಗೂ ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಡಿ.ಕೆ. ಶಿವಕುಮಾರ್‌ ಒಕ್ಕಲಿಗರ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ ಎಂಬ ರಾಜಕೀಯ ವಲಯದಲ್ಲಿನ ಚರ್ಚೆ ಕುರಿತು ಪ್ರಶ್ನಿಸಿದಾಗ, ‘ಅವರು ಅವರ ಪಕ್ಷದ ರಾಜಕೀಯ ಮಾಡುತ್ತಾರೆ. ನಾನು ನನ್ನ ಪಕ್ಷದ ರಾಜಕಾರಣ ಮಾಡುತ್ತೇನೆ. ಕುಮಾರಸ್ವಾಮಿಗಾಗಿ ಯಾರೋ ತ್ಯಾಗ ಮಾಡಿದರು, ದೇವೇಗೌಡರ ಕುಟುಂಬಕ್ಕೆ ರಕ್ಷಣೆ ನೀಡಿದರು ಎಂಬುದಾಗಿ ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಗಳೆಲ್ಲವೂ ವಾಸ್ತವಕ್ಕೆ ದೂರವಾದವು’ ಎಂದರು.

ಕಿಸಾನ್‌ ಸಮ್ಮೇಳನಕ್ಕೆ ಟೀಕೆ: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇದ್ದಾಗಲೇ ಮಂಡ್ಯ ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಕಾಂಗ್ರೆಸ್‌ನವರು ಅತ್ತ ಸುಳಿಯಲಿಲ್ಲ. ಈಗ ಕಾಂಗ್ರೆಸ್‌ ಕಾರ್ಯಕರ್ತರಿಗೆ ಹಸಿರು ಟವೆಲ್‌ ಹಾಕಿಸಿ ಕಿಸಾನ್‌ ಸಮ್ಮೇಳನ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT