ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ ಕ್ಷೇತ್ರ ಚುನಾವಣೆ: ಕೋವಿಡ್‌ ಸೋಂಕಿತರಿಗೆ ಅಂಚೆ ಮತಕ್ಕೆ ಅವಕಾಶ

ಆರ್‌.ಆರ್‌.ನಗರ ಕ್ಷೇತ್ರ ಚುನಾವಣೆಗೆ ಸಕಲ ಮುನ್ನೆಚ್ಚರಿಕೆ: ಜಿಲ್ಲಾ ಚುನಾವಣಾಧಿಕಾರಿ
Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಕೋವಿಡ್‌ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ನಡೆಯುತ್ತಿದ್ದು, ಈ ವೇಳೆ ಸೋಂಕು ಹರಡದಂತೆ ತಡೆಯಲು ಸಕಲ ಮುನ್ನೆಚ್ಚರಿಕೆ ವಹಿಸಲಿದ್ದೇವೆ. ಕೋವಿಡ್‌ ಸಂತ್ರಸ್ತರಿಗೆ, ಶಂಕಿತರಿಗೆ, ಸೋಂಕಿತರ ಸಂಪರ್ಕಕ್ಕೆ ಬಂದು ಪ್ರತ್ಯೇಕವಾಸದಲ್ಲಿರುವವರಿಗೆ ಹಾಗೂ 80 ವರ್ಷ ಮೇಲ್ಪಟ್ಟವರಿಗೆ ಅಂಚೆ ಮತ ಚಲಾಯಿಸಲು ಅವಕಾಶ ನೀಡಲಿದ್ದೇವೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಚುನಾವಣಾ ಸಿದ್ಧತೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದ ಅವರು, ‘ಅಭ್ಯರ್ಥಿಗಳು ಆರ್‌.ಆರ್‌.ನಗರದ ಐಡಿಯಲ್‌ ಹೋಮ್ಸ್‌ ಬಳಿ ಇರುವ ವಲಯದ ಜಂಟಿ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದು. ಈ ಹಿಂದಿನ ಚುನಾವಣೆಗಳಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅಭ್ಯರ್ಥಿ ಸೇರಿ ಐವರನ್ನು ಚುನಾವಣಾಧಿಕಾರಿ ಕಚೇರಿಗೆ ಬಿಟ್ಟುಕೊಳ್ಳಲಾಗುತ್ತಿತ್ತು. ಈ ಬಾರಿ ಕೇವಲ ಇಬ್ಬರಿಗೆ ಮಾತ್ರ ಅವಕಾಶವಿರಲಿದೆ. ಚುನಾವಣಾ ಪ್ರಚಾರ ಸಭೆ, ಪ್ರಚಾರ ಕಾರ್ಯಗಳನ್ನು ನಡೆಸಲು ಮುಂಚಿತವಾಗಿ ಅನುಮತಿ ಪಡೆಯಬೇಕು. ಮನೆ ಮನೆ ಪ್ರಚಾರದ ವೇಳೆಯೂ ಅಭ್ಯರ್ಥಿಯ ಬೆಂಬಲಿಗರು ಕೋವಿಡ್‌ ನಿಯಂತ್ರಣದ ನಿಯಮಗಳನ್ನು ಪಾಲಿಸುವುದು ಕಡ್ಡಾಯ’ ಎಂದರು.

‘ಚುನಾವಣೆ ಸಂದರ್ಭದಲ್ಲಿ ಕೋವಿಡ್‌ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿಗಾ ವಹಿಸಲು ಆರೋಗ್ಯ ವೈದ್ಯಾಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸುತ್ತೇವೆ. ಮತದಾನದ ಮುನ್ನಾದಿನ ಮತಗಟ್ಟೆಗೆ ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲಾಗುತ್ತದೆ. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವ ಸಿಬ್ಬಂದಿ ಮುಖಗವಸು, ಕೈಗವಸು ಹಾಗೂ ಮುಖ ಕವಚ ಧರಿಸುವುದು ಕಡ್ಡಾಯ. ಇವುಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

‘ಮತದಾನ ಮಾಡಲು ಬರುವ ಪ್ರತಿಯೊಬ್ಬರ ದೇಹದ ಉಷ್ಣಾಂಶವನ್ನು ಪರೀಕ್ಷಿಸಿದ ಬಳಿಕವೇ ಮತಗಟ್ಟೆಯ ಒಳಗೆ ಬಿಡಲಾಗುತ್ತದೆ. ಅವರು ಮತದಾನಕ್ಕೆ ಮುನ್ನ ಸೋಂಕು ನಿವಾರಕದಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಕಡ್ಡಾಯ. ಮತಗಟ್ಟೆಗಳ ಬಳಿ ಪುರುಷರಿಗೆ, ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಸಾಲುಗಳಿರಲಿವೆ. ಸರದಿಯಲ್ಲಿ ನಿಲ್ಲುವಾಗ ಆರು ಅಡಿ ಅಂತರ ಕಾಪಾಡಬೇಕು. ಇದಕ್ಕಾಗಿ ಮೊದಲೇ ಸ್ಥಳ ಗುರುತು ಮಾಡಲಾಗುತ್ತದೆ’ ಎಂದರು.

ಸಂಜೆ ವೇಳೆ ಅವಕಾಶ:

‘ಮತದಾನ ಮಾಡಲು ಬಂದವರ ದೇಹದ ಉಷ್ಣಾಂಶ ಹೆಚ್ಚು ಇದ್ದರೆ, ಅವರಿಗೂ ಬಿಲ್ಲೆಯನ್ನು ನೀಡಿ ಹಿಂದಕ್ಕೆ ಕಳುಹಿಸುತ್ತೇವೆ. ಸರದಿಯಲ್ಲಿ ನಿಲ್ಲಲು ಮತದಾರರು ಇಷ್ಟಪಡದೇ ಇದ್ದಲ್ಲಿ, ಅವರಿಗೂ ಬಿಲ್ಲೆಯನ್ನು ನೀಡುತ್ತೇವೆ. ಅವರು ಸಂಜೆ ವೇಳೆ ( ಕೊನೇಯ ಒಂದು ಗಂಟೆ) ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬಹುದು’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಹಾಗಾಗಿ 2020ರ ಜ.1ರ ಮತದಾರರ ಪಟ್ಟಿಯನ್ನು ಚುನಾವಣೆಗೆ ಪರಿಗಣಿಸಲಾಗುತ್ತದೆ. ಮತದಾರರ ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಅದಿಲ್ಲದಿದ್ದರೆ ಚುನಾವಣಾ ಆಯೋಗ ಗೊತ್ತು ಪಡಿಸಿರುವ ಭಾವಚಿತ್ರವಿರುವಇತರ 11 ಗುರುತಿನಚೀಟಿಗಳ ಪೈಕಿ ಒಂದನ್ನು ತೋರಿಸಿಯೂ ಮತ ಚಲಾಯಿಸಬಹುದು’ ಎಂದರು.

‘ಮತದಾನಕ್ಕೆ ಬಳಸುವ ವಿವಿಪ್ಯಾಟ್‌ ಹಾಗೂ ವಿದ್ಯುನ್ಮಾನ ಮತಯಂತ್ರಗಳನ್ನು ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಲಾಗುತ್ತದೆ’ ಎಂದು ತಿಳಿಸಿದರು

ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಜೆ.ಮಂಜುನಾಥ್ ಉಪಸ್ಥಿತರಿದ್ದರು.

ಮತಗಟ್ಟೆಗಳ ಸಂಖ್ಯೆ 688ಕ್ಕೆ ಹೆಚ್ಚಳ

‘ಆರ್‌.ಆರ್‌.ನಗರ ಕ್ಷೇತ್ರದಲ್ಲಿ ಪ್ರಸ್ತುತ 381 ಮತಗಟ್ಟೆಗಳಿವೆ. ಕೋವಿಡ್‌ ವ್ಯಾಪಿಸಿರುವುದರಿಂದ ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. 1 ಮತಗಟ್ಟೆಯಲ್ಲಿ 1 ಸಾವಿರ ಮಂದಿ ಮಾತ್ರ ಮತದಾನ ಮಾಡಲು ಅನುಮತಿಯಿದೆ. ಈ ಕ್ಷೇತ್ರದಲ್ಲಿ 307 ಮತಗಟ್ಟೆಗಳಲ್ಲಿ 1 ಸಾವಿರಕ್ಕಿಂತ ಹೆಚ್ಚು ಮತದಾರರಿದ್ದು, ಅಲ್ಲಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಹಾಗಾಗಿ ಮತಗಟ್ಟೆಗಳ ಸಂಖ್ಯೆ 688ಕ್ಕೆ ಹೆಚ್ಚಳವಾಗಲಿದೆ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಹೊಸ ಕಾಮಗಾರಿಗಳಿಗೆ ನಿರ್ಬಂಧ

‘ಮಾದರಿ ನೀತಿ ಸಂಹಿತೆ ಆರ್‌.ಆರ್‌.ನಗರ ಕ್ಷೇತ್ರಕ್ಕೆ ಸೀಮಿತ. ಈ ಕ್ಷೇತ್ರದ ವಾರ್ಡ್‌ಗಳಲ್ಲಿ ಯಾವುದೇ ಹೊಸ ಕಾಮಗಾರಿಗೆ ಟೆಂಡರ್‌ ಕರೆಯುವಂತಿಲ್ಲ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದರೂ ಹೊಸ ಕಾಮಗಾರಿ ನಡೆಸುವಂತಿಲ್ಲ. ಬಿಬಿಎಂಪಿ, ಜಲಮಂಡಳಿ ಮತ್ತು ಇತರ ಇಲಾಖೆಗಳಿಗೂ ಇದು ಅನ್ವಯ. ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾ ಇಡಲು ಮೂರು ಸಂಚಾರ ತಂಡಗಳನ್ನು ಹಾಗೂ ಒಂಬತ್ತು ಸ್ಥಾನಿಕ ತಂಡಗಳನ್ನು ಹಾಗೂ 25 ಸೆಕ್ಟರ್‌ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಮತಗಟ್ಟೆಗಳಿಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗುವುದು. ನಗರ ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದರು.

ಚುನಾವಣೆ ಪ್ರಮುಖ ದಿನಾಂಕಗಳು

ಅಧಿಸೂಚನೆ ಪ್ರಕಟಣೆ; ಅ.9

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ; ಅ.16

ನಾಮಪತ್ರಗಳನ್ನು ಪರಿಶೀಲನೆ; ಅ.17

ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನ; ಅ.19

ಮತದಾನ; ನ.3. ಮತ ಎಣಿಕೆ; ನ.10

ಅಂಕಿ ಅಂಶ

4,60,401 - ಆರ್‌.ಆರ್‌.ನಗರ ಕ್ಷೇತ್ರದ ಒಟ್ಟು ಮತದಾರರು
2,40,061 -ಪುರುಷ ಮತದಾರರು

2,20,261 -ಮಹಿಳಾ ಮತದಾರರು

79 - ತೃತೀಯಲಿಂಗಿ ಮತದಾರರು

ಈ ಕ್ಷೇತ್ರದಲ್ಲಿ ಕಳೆದ ಚುನಾವಣೆ ವೇಳೆ ಅಕ್ರಮವಾಗಿ ಮತದಾರರ ಚೀಟಿ ದಾಸ್ತಾನಿಟ್ಟುಕೊಂಡಿದ್ದು ಪತ್ತೆಯಾಗಿತ್ತು. ಈ ಬಾರಿ ಇಂತಹ ಅಕ್ರಮಗಳ ಬಗ್ಗೆ ಹೆಚ್ಚಿನ ನಿಗಾ ಇಡಲಿದ್ದೇವೆ. ಇಂತಹ ಪ್ರಕರಣ ಮರುಕಳಿಸಿದರೆ ಕ್ರಿಮಿನಲ್‌ ಪ್ರಕರಣ ದಾಖಲಿಸಲಿದ್ದೇವೆ

ಎನ್‌.ಮಂಜುನಾಥ ಪ್ರಸಾದ್‌, ಜಿಲ್ಲಾ ಚುನಾವಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT