ಶಾಸಕ ಗೂಳಿಹಟ್ಟಿ ಶೇಖರ್‌ಗೆ ₹1 ಕೋಟಿ ವಂಚನೆ

7
ಜಮೀನಿನ ನಕಲಿ ದಾಖಲೆ ಕೊಟ್ಟು ವಂಚಿಸಿದ ರಿಯಲ್‌ ಎಸ್ಟೇಟ್ ಏಜೆಂಟ್

ಶಾಸಕ ಗೂಳಿಹಟ್ಟಿ ಶೇಖರ್‌ಗೆ ₹1 ಕೋಟಿ ವಂಚನೆ

Published:
Updated:

ಬೆಂಗಳೂರು: ‘ಜಮೀನು ಮಾರಾಟದ ನೆಪದಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ ನಾರಾಯಣರೆಡ್ಡಿ ಹಾಗೂ ಆತನ ಕುಟುಂಬ ನನಗೆ ₹ 1 ಕೋಟಿ ವಂಚಿಸಿದೆ’ ಎಂದು ಆರೋಪಿಸಿ ಹೊಸದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅನ್ನಪೂರ್ಣೇಶ್ವರಿನಗರ ಠಾಣೆಗೆ ಜೂನ್ 29ರಂದು ದೂರು ಕೊಟ್ಟಿದ್ದಾರೆ.

ದೂರಿನ ಅನ್ವಯ ಯಲಚೇನಹಳ್ಳಿಯ ನಾರಾಯಣರೆಡ್ಡಿ, ಆತನ ಪತ್ನಿ ಭಾಗ್ಯ, ಅತ್ತೆ ಪದ್ಮಾವತಿ ವಿರುದ್ಧ ವಂಚನೆ (ಐಪಿಸಿ 420) ಹಾಗೂ ನಕಲಿ ದಾಖಲೆ ಸೃಷ್ಟಿ (465, 468) ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

‘ನಗರದ ಹೊರವಲಯದಲ್ಲಿ ಗ್ರಾನೈಟ್ ದಾಸ್ತಾನು ಘಟಕ ಸ್ಥಾಪಿಸುವ ಸಲುವಾಗಿ ಜಮೀನಿನ ಹುಡುಕಾಟದಲ್ಲಿದ್ದೆ. ಈ ಸಂದರ್ಭದಲ್ಲಿ ಮಧ್ಯವರ್ತಿಗಳ ಮುಖಾಂತರ ನಾರಾಯಣರೆಡ್ಡಿಯ ಪರಿಚಯವಾಗಿತ್ತು. ‘ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದಲ್ಲಿ ನನ್ನ ಅತ್ತೆ ಹೆಸರಿನಲ್ಲಿ 10 ಎಕರೆ ಜಮೀನು (ಸರ್ವೆ ನಂ.148) ಇದೆ. ಅದನ್ನು ನಿಮಗೆ ಕರಾರು ಮಾಡಿಸಿಕೊಡುತ್ತೇನೆ’ ಎಂದು ಆತ ಹೇಳಿದ. ಘಟಕ ಸ್ಥಾಪನೆಗೆ ಸೂಕ್ತವಾಗಿದೆ ಎಂದು ಆ ಭೂಮಿಯನ್ನು ಖರೀದಿಸಲು ಒಪ್ಪಿದ್ದೆ’ ಎಂದು ಶಾಸಕರು ದೂರಿನಲ್ಲಿ ಹೇಳಿದ್ದಾರೆ.

‘ಜಾಗ ಖರೀದಿ ಸಲುವಾಗಿ ಆರ್‌ಟಿಜಿಎಸ್ ಮೂಲಕ ₹ 50 ಲಕ್ಷವನ್ನು ಹಾಗೂ ನಗದು ರೂಪದಲ್ಲಿ ₹ 50 ಲಕ್ಷವನ್ನು ನಾರಾಯಣರೆಡ್ಡಿಗೆ ನೀಡಿದ್ದೆ. ಆ ನಂತರ ಪತ್ನಿ ಹಾಗೂ ಅತ್ತೆಯಿಂದ ಕರಾರು ಪತ್ರಕ್ಕೆ ಸಹಿ ಮಾಡಿಸಿ, ಜಮೀನಿಗೆ ಜಿಪಿಎ ಮಾಡಿಕೊಟ್ಟಿದ್ದ. ಕೆಲ ದಿನಗಳ ಬಳಿಕ ಜಮೀನಿನ ದಾಖಲೆಗಳನ್ನು ಪರಿಶೀಲಿಸಿದಾಗ, ಅವೆಲ್ಲವೂ ನಕಲಿ ಎಂಬುದು ಗೊತ್ತಾಯಿತು’ ಎಂದು ವಿವರಿಸಿದ್ದಾರೆ.

‌‘ಆ ನಂತರ ಜಮೀನಿನ ಹಣ ಮರಳಿಸುವಂತೆ ಕೇಳಿದ್ದೆ. ಅದಕ್ಕೆ ಆತ, ‘ದೊಡ್ಡಕಲ್ಲಸಂದ್ರಲ್ಲಿರುವ ನನ್ನ ಜಮೀನನ್ನು ಮಾರಾಟಕ್ಕೆ ಇಟ್ಟಿದ್ದೇನೆ. ಆ ಭೂಮಿ ಮಾರಾಟ ವಾದ ಬಳಿಕ ಹಣ ಹಿಂತಿರುಗಿಸುತ್ತೇನೆ’ ಎಂದಿದ್ದ. ಈಗ ಕೇಳಿದರೆ, ‘ಏನು ಬೇಕಾದರೂ ಮಾಡಿಕೊಳ್ಳಿ. ನನ್ನ ಬಳಿ ಹಣವಿಲ್ಲ’ ಎನ್ನುತ್ತಿದ್ದಾನೆ. ಹೀಗಾಗಿ, ನಾರಾಯಣರೆಡ್ಡಿ ಹಾಗೂ ಆತನ ಕುಟುಂಬದ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

**

ಕೆನರಾ ಬ್ಯಾಂಕ್‌ನಿಂದ ಹಾಗೂ ಮೀಟರ್‌ ಬಡ್ಡಿದಾರರಿಂದ ಸಾಲ ಪಡೆದು ನಾರಾಯಣರೆಡ್ಡಿಗೆ ದುಡ್ಡು ಕೊಟ್ಟಿದ್ದೆ. ಹಣ ಮರಳಿಸುವುದಾಗಿ ಎರಡು ತಿಂಗಳಿನಿಂದ ಸತಾಯಿಸುತ್ತಿದ್ದಾನೆ.

ಗೂಳಿಹಟ್ಟಿ ಶೇಖರ್, ಬಿಜೆಪಿ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !